ಕಾವ್ಯ ಸಂಗಾತಿ
ಗಜಲ್
ಡಾ ಅನ್ನಪೂರ್ಣ ಹಿರೇಮಠ
ಸಂಜೆಗೆಂಪಲಿ ತಂಪು ತಂಗಾಳಿಯಲಿ ನೀಜೊತೆಗಿರೆ ಇನ್ನೇನು ಬೇಕಿಲ್ಲ ನಲ್ಲ
ಬಾಗಿದ ಬಾನಲಿ ನಮ್ಮ ಜೊತೆ ಸೂರ್ಯ ನಗುತಿರೆ ಇನ್ನೇನು ಬೇಕಿಲ್ಲ ನಲ್ಲ//
ಗುಡ್ಡದಂಚಿನ ಮಿಂಚು ಬೆಳಕಲಿ ನಲಿಯುತಿರೆ ನಮ್ಮಮನಗಳು ಪ್ರೀತಿಯಲಿ
ಸೃಷ್ಟಿ ಸೊಭಗ ಸವಿಯುವ ಈ ಮಧುರ ಗಳಿಗೆಯಲಿ ಜೋತೆ ನೀನಿರೆ ಇನ್ನೇನು ಬೇಕಿಲ್ಲ ನಲ್ಲ//
ಅಂದಗಾರ ಚಂದ್ರ ನಗುತ ಬರುತಿಹನು ಸೂರ್ಯನ ಭೂಒಡಲಿಗೆ ತಳ್ಳುತಾ
ಸೂಸೊ ಸುಳಿಗಾಳಿ ತನುವ ಚುಂಬಿಸುತಲಿರೆ ಜೊತೆ ನೀನಿರೊ ಸಂತಸವಿರೆ ಇನ್ನೇನು ಬೇಕಿಲ್ಲ ನಲ್ಲ//
ನೀನು ಸನಿಹವಿರೆ ಜಗದ ಭಯವಿಲ್ಲ ಕತ್ತಲೆಯ ಅಂಜಿಕೆಯು ನನಗಿಲ್ಲ
ಮಂಜು ಬೆಳಕಲಿ ತಂಪು ಸಂಜೆಯಲಿ ನಾನಿನ್ನ ಅಂತರಂಗದಲ್ಲಿರೆ ಮತ್ತೇನು ಬೇಕಿಲ್ಲ ನಲ್ಲ//
ದೇವನಾಲಯದ ಪ್ರಕೃತಿ ಮಡಿಲಲಿ ಹಾಯಾಗಿದೆ ಅನುಅಂತರಾಳವಿದು
ಬಯಲು ಆಲಯದಲಿ ನಾವಿಬ್ಬರೇ ಸಂತಸದಿ ವಿಹರಿಸುತ್ತಿರೆ ಇನ್ನೇನು ಬೇಕಿಲ್ಲ ನಲ್ಲ//
ಡಾ ಅನ್ನಪೂರ್ಣ ಹಿರೇಮಠ