ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮುಗ್ಧ ಮನಸುಗಳಿಗೆ

ಒತ್ತಡದ ಬಲೆಯ ಬೀಸದಿರಿ..

ಅವನು ಕಟಕಟನೇ ಹಲ್ಲು ಕಡಿಯುತ್ತಲೇ, ಪರಪರನೇ ತಲೆ ಕರೆದುಕೊಂಡು ತನ್ನ ಪಾಡಿಗೆ ತಾನು ಆಕಾಶ ನೋಡುತ್ತಾ, ತನ್ನಷ್ಟಕ್ಕೆ ತಾನೇ ನಗುತ್ತಾನೆ…!!

ಇವಳು ರಾತ್ರಿ ಮಲಗಿದಾಗ ಚಿಟಾನೇ ಚೀರಿ ಅಳುತ್ತಾ ಅಳುತ್ತಾ ಮೂಲೆಯೊಂದರಲ್ಲಿ ಮುದುರಿಕೊಂಡು ದಿಗ್ಗನೇ ಎದ್ದು ಕೂಡುತ್ತಾಳೆ…!!

ಈ ಮೇಲಿನ ಎರಡು ಸನ್ನಿವೇಶಗಳು ವಿಭಿನ್ನ ಆದರೆ ಕಾಲ್ಪನಿಕವಲ್ಲ ವಾಸ್ತವ..!
ಸಮಾಜದಲ್ಲಿ ಎಷ್ಟೋ ಜೀವಗಳು ಇದೇ ರೀತಿಯಲ್ಲಿ ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ.  ಅದು ಅವರ ತಪ್ಪಲ್ಲ..ಕುಟುಂಬದವರ, ನೆರೆಹೊರೆಯವರ, ಸಂಬಂಧಿಗಳ, ಸ್ನೇಹಿತರೇ ಕಾರಣ…!!

ಹೌದು…!

ಒಬ್ಬ ವ್ಯಕ್ತಿಯು ಮಾನಸಿಕ ಆರೋಗ್ಯ ಹಾಳಾಗಲು ಮುಖ್ಯ ಕಾರಣ ಹಸಿವು…!! ಅದು ಒಲವಿನ, ಪ್ರೀತಿಯ, ವಾತ್ಸಲ್ಯದ ಹಸಿವು. ‘ನಮ್ಮವರು’ ಎಂದುಕೊಂಡವರು ಯಾವುದೋ ಕಾರಣಕ್ಕಾಗಿ ಅವರನ್ನು ಬೈಯುವುದು, ಹಿಯಾಳಿಸುವುದು, ಅವಮಾನ ಮಾಡುವುದು, ಚುಚ್ಚು ಮಾತುಗಳನ್ನಾಡಿ ಮನವನ್ನು ಘಾಸಿಗೊಳಿಸುವ ಪರಿಸ್ಥಿತಿಯಿಂದಾಗಿ ನೊಂದು ಹೋಗುತ್ತಾರೆ. ಈ ಜಗತ್ತಿನಲ್ಲಿ ಹಸಿವಿನಿಂದ ಸತ್ತವರಿಗಿಂತ ಪ್ರೀತಿ ದೊರಕದೆ ಸತ್ತವರು ಕೋಟಿ ಕೋಟಿ ಜನರು..!!

ಇದು ಒಂದು ಕಾರಣವಾದರೇ…

ಕೆಲವರು ಕತ್ತಲನ್ನು ನೋಡಿದರೆ ಸಾಕು ಕಂಪಿಸಿ ಬಿಡುತ್ತಾರೆ. ತಮಗಿಷ್ಟವಲ್ಲದ ಪ್ರಾಣಿಗಳನ್ನು, ವಸ್ತುಗಳನ್ನು ಕಂಡಾಗ ಭಯಗೊಳ್ಳುತ್ತಾರೆ. ಯಾರಾದರೂ ಅವನ ಅಡ್ಡ ಹೆಸರಿನಿಂದ ಕರೆದರೆ ತಮಗೆ ಅಪಹಾಸ್ಯ ಮಾಡಿದರೆಂದು ಅವಮಾನಿತರಾಗುತ್ತಾರೆ. ಭೂತ, ದೆವ್ವ, ಪಿಶಾಚಿಗಳ ಕತೆಗಳನ್ನು, ಸುದ್ದಿಗಳನ್ನು ಕೇಳಿಸಿಕೊಂಡರೇ ಸಾಕು ಒಬ್ಬಂಟಿಯಾಗಿದ್ದಾಗ ನೆನಪಿಸಿಕೊಂಡು ಹೆದರುತ್ತಾರೆ.

ಹೀಗೆ ಹಲವಾರು ಕಾರಣದಿಂದಾಗಿ ವ್ಯಕ್ತಿಗಳು ಮಾನಸಿಕರಾಗಿ ಕ್ಷೋಭೆಗೆ ಗುರಿಯಾಗುತ್ತಾರೆ.

ತಂದೆಯಿಂದ ಬಡಿಸಿಕೊಂಡ ಮಗ, ಅತ್ತೆಯಿಂದ ಬೈಸಿಕೊಂಡ ಸೊಸೆ, ಸೊಸೆಯಿಂದ ದೂರವಾದ ಅತ್ತೆ, ಎಲ್ಲದಕ್ಕೂ ಕೊಂಕು ಮಾತನಾಡುತ್ತಲೇ ಎಲ್ಲರೆದುರು ಅವಮಾನಿಸುವ ಶಿಕ್ಷಕರ ಬೈಗುಳಗಳಿಗೆ ಘಾಸಿಯಾದ ವಿದ್ಯಾರ್ಥಿ, ‘ನಿನ್ನಿಂದ ಏನೂ ಆಗುವುದಿಲ್ಲ’ ಎನ್ನುವ ಉದಾಸೀನ ಮಾತುಗಳಿಗೆ ಬಲಿಯಾದ ಎಷ್ಟೋ ಜೀವಿಗಳು..!!

 ತಮ್ಮ ಬಗ್ಗೆ ಇರುವ ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಡುತ್ತಾರೆ. ಎಷ್ಟೋ ಸಲ ತಮ್ಮ ಬಗ್ಗೆ ತಮಗೆ ಜುಗುಪ್ಸೆ ಮೂಡುತ್ತದೆ. “ಅಯ್ಯೋ ನಾನಿಲ್ಲದಿದ್ದರೇ ನನ್ನ ಮಕ್ಕಳ ಗತಿ ಏನು..? ಮುಂದೆ ನನ್ನ ಮಗಳ ಗತಿ ಏನು..??  ನನ್ನ ಮಗ ಓದುವನೋ  ಇಲ್ಲವೋ…? ನನ್ನ ಗಂಡ ಯಾಕೆ ನನ್ನಿಂದ ದೂರವಾಗುತ್ತಿದ್ದಾನೆ..?? ನನ್ನ ಹೆಂಡತಿ ಇತ್ತೀಚಿಗೆ ನನ್ನನ್ನು ಕಂಡರೆ ತುಂಬಾ ರೇಗಾಡುತ್ತಾಳೆ..!!
ಹೀಗೆ ಹತ್ತು ಹಲವಾರು ಕಾರಣಗಳು.

ಮಂತ್ರವಾದಿಗಳಿಂದ ದಂಡಿಸಿ, ಹಿಂಸೆಯನ್ನು ಕೊಡುವ, ಮಸೀದಿಯಲ್ಲಿ ಕೂಡಿ ಹಾಕಿ, ಬಂಧನ ಮಾಡುವ, ಯಾವುದೇ ಮುಂದಾಲೋಚನೆಯಿಲ್ಲದೆ ಬೇಕಾಬಿಟ್ಟಿಯಾಗಿ ಔಷಧ ಕೊಡಿಸಿ ಆರೋಗ್ಯ ಹಾಳು ಮಾಡುವ, ಮುಸ್ಲಿಂ ಸಮುದಾಯದ ದರ್ಗಾ, ಮೌಲ್ವಿಗಳ ದಂಡನೆ, ಕ್ರೈಸ್ತ ಧರ್ಮದ ಪಾರ್ದಿಗಳ ಪ್ರಾರ್ಥನೆ, ಹಿಂದೂ ಧರ್ಮದ ಸ್ವಾಮಿಗಳ ಮಂತ್ರಗಳ ಆರ್ಭಟ..!!

  ಒಂದೇ ಎರಡೇ…

ಹಲವು ಮುಖಗಳಿಂದ ಶಿಕ್ಷೆಯನ್ನು ಕೊಡಿಸುವ ದುಷ್ಟತನಕ್ಕೆ ಧಿಕ್ಕಾರವಿರಲಿ..!!

ಮಾನವೀಯತೆಯುಳ್ಳ ನಾವು ಅವರಿಗೆ ಮಾಡಬೇಕಾಗಿದ್ದು ಇಷ್ಟೇ…

ಮೊದಲು ಮಾನಸಿಕ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿ, ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳನ್ನು ಗುರುತಿಸಬೇಕು. ಸಮಸ್ಯೆಗಳಿಗೆ ಕಾರಣಗಳೇನು ಎನ್ನುವುದನ್ನು ಕಂಡು ಹಿಡಿಯಬೇಕು. ನಿಜವಾದ ಸಮಸ್ಯೆಗಳಿಗೆ ಪರಿಹಾರ ಹುಡುಕುವ, ಔಷಧಗಳನ್ನು ಕೊಡಿಸುವ, ಸರಿಯಾದ ರೀತಿಯಲ್ಲಿ ಆರೈಕೆ ಮಾಡುವ ಮೂಲಕ ಅವರಿಗೆ ಸ್ಪಂದಿಸುವ ಸೂಕ್ಷ್ಮ ಮನಸ್ಸು ನಮ್ಮದಾಗಬೇಕು.

ಆದರೂ….

ಇಂತಹವರನ್ನು ಕಂಡರೇ ಹೀಯಾಳಿಸುವ, ಮೂದಲಿಸುವ, ಅವಮಾನಿಸುವ ಚಾಳಿಯನ್ನು ಬಿಡಬೇಕು.

ಸ್ನೇಹಿತರೇ..,

ನಾವು ಬೇರೆಯವರಿಗೆ ಏನನ್ನು ನೀಡುತ್ತೇವೆಯೋ…ಅವರು ಪುನಃ ನಮಗೂ ಅದನ್ನೆ ನೀಡುತ್ತಾರೆ. ಹಾಗಾಗಿ ಮೊದಲು ನಾವು ಬೇರೆಯವರಿಗೆ ಪ್ರೀತಿಯನ್ನು ಹಂಚೋಣ. ಅವರು ನಮಗೆ ಪ್ರೀತಿಯನ್ನು ಹಂಚುತ್ತಾರೆ.

ಇಂತಹ ಪ್ರೀತಿ ವಂಚಿತ ಮಾನಸಿಕ ರೋಗಿಗಳಿಗೆ ಚಿಕಿತ್ಸೆಗಿಂತ ವಾತ್ಸಲ್ಯ ಮುಖ್ಯ..!! ಯಾರನ್ನು ಮಾನಸಿಕ ರೋಗಿಗಳನ್ನಾಗಿ ಮಾಡದೇ ಎಲ್ಲರೂ ನಮ್ಮವರೆನ್ನುವ ಉದ್ಧಾತ ಭಾವ ನಮ್ಮದಾಗಲಿ ಎಂದು ಬಯಸೋಣ…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ವಾಸ್ತವದ ಚಿತ್ರಣ ತುಂಬಾ ಪರಿಣಾಮಕಾರಿಯಾಗಿದೆ. ಪ್ರೀತಿಯೇ ಜೀವನ ಎಂಬುದು ಸ್ಪಷ್ಟ.
    ಅಭಿನಂದನೆಗಳು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮಾತುಗಳು.

Leave a Reply

Back To Top