ವಿಜ್ಞಾನ ಸಂಗಾತಿ
‘ಕಪ್ಪು ವಿಧವೆ’
ವೈಜ್ಞಾನಿಕ ಲೇಖನ-
ಶಿವಾನಂದ ಕಲ್ಯಾಣಿ
ಗಂಡು-ಹೆಣ್ಣು” ಇದು ಸೃಷ್ಟಿ ನಿರ್ಮಿಸಿದ ವಿಶಿಷ್ಟ ಜೋಡಿ. ಸಂತಾನೋತ್ಪತ್ತಿಯ ನಡವಳಿಕೆಯನ್ನು ಅವಲಂಬಿಸಿದ ಈ ಜೊತೆ ಆಯಾ ಪ್ರಭೇದದ ಉಳುವಿಗೆ ಕಾರಣವಾಗಿದೆ.
ಸಂಗಾತಿ ಜೀವನ್ಮರಣದ ಪ್ರಶ್ನೆ ಬಂದಾಗ ಅದರ ಜೊತೆಯ ಇನ್ನೊಂದು ಇನ್ನೊಂದು ಜೀವಿ ಶತಾಯುಗತಾಯ ಅದನ್ನುಳಿಸಲು ಪ್ರಯತ್ನಿಸುವುದು ಬಹುತೇಕ ಪಂಗಡಗಳ ಲಕ್ಷಣವಾಗಿದೆ.”ನಾಗ”ನನ್ನು ಕೊಂದದ್ದಕ್ಕಾಗಿ ನಾಗಿಣಿ ಹಠ ತೊಡುವುದನ್ನು ದಂತ ಕಥೆಗಳಲ್ಲಿ ಓದುತ್ತೇವೆ….
ಒಟ್ಟಾರೆ ಕೂಡಿ ಬಾಳುವುದು ಪ್ರತಿ ಜೋಡಿ ಪ್ರಭೇದ ನಿಸರ್ಗ ವೈಶಿಷ್ಟವಾಗಿದೆ. ಆದರೆ ಕಪ್ಪು ಜೇಡ ಮಾತ್ರ ಈ ಮಾತಿಗೆ ಅಪವಾದವೇನಿಸಿದೆ.
ಕಪ್ಪು ಹೆಣ್ಣು ಜೇಡ ತಾನಾಗಿಯೇ ವಿಧವಾ ಅವಸ್ಥೆಯನ್ನು ತಂದುಕೊಳ್ಳುವ ವಿಸ್ಮಯ ವರ್ತನೆ ಬಿಭಸ್ತ್ಯದಿಂದ ಕೂಡಿದೆ.
ಸಾಮಾನ್ಯವಾಗಿ ಜೇಡಗಳು ಏಕಾಂಗಿವಾಸಿ ಜೀವಿಗಳು. ಇವು ಒಂದೇ ಸ್ಥಳದಲ್ಲಿ ಒಟ್ಟೋಟ್ಟಾಗಿ ಇರಲಾರವು. ಏಕೆಂದರೆ ಜೇಡಗಳು ಸಜಾತಿ ಭಕ್ಷಕಳಾಗಿದ್ದು, ಬಲಿಷ್ಠ ಹೆಣ್ಣು ದುರ್ಬಲ ಗಂಡುಗಳನ್ನು ತಿಂದು ಹಾಕಿಬಿಡುವ ಸಂದರ್ಭಗಳು ಹೆಚ್ಚು.
ಆದರೇನು?….. ಲಿಂಗರೀತಿ ಸಂತಾನೋತ್ಪತ್ತಿಗಾಗಿ ಗಂಡು-ಹೆಣ್ಣು ಸಂಧಿಸಬೇಕಿರುವುದು ಸೃಷ್ಟಿ ನಿಯಮವು. ಇಂಥ ಸಮಯಕ್ಕಾಗಿ ಮಾತ್ರ ಈ ಜಾತಿಗಳು ಸಜಾತಿ ಭಕ್ಷಕ ಪ್ರವೃತ್ತಿಯನ್ನು ತಾತ್ಕಾಲಿಕವಾಗಿ ಮೆಟ್ಟಿ ನಿಲ್ಲುತ್ತವೆ.
ಸಂತಾನೋತ್ಪತ್ತಿಗೆ ಸಿದ್ಧವಾದ ಹೆಣ್ಣು ಒಂದು ನಿರ್ದಿಷ್ಟ ಸ್ಥಾನವನ್ನು ಗುರುತಿಸಿ, ಗೂಡನ್ನು ಕಟ್ಟಿಕೊಂಡು, ಗೂಡಿನ ಮಧ್ಯದಲ್ಲಿ ಕುಳಿತು, ಗಂಡಿನ ಬರುವುವಿಕೆಯ ನಿರೀಕ್ಷೆಯಲ್ಲಿರುತ್ತದೆ ಮತ್ತು ತನ್ನ ನಿರೀಕ್ಷೆಯನ್ನು ಸಫಲಗೊಳಿಸುವುದಕ್ಕಾಗಿ ಅದು ತನ್ನ ಗೂಡಿನಿಂದ ಸ್ರವಿತ ರಸದ ಎಳೆಯೊಂದನ್ನು ಗಾಳಿಯ ಸಹಾಯದಿಂದ ಗಣನೀಯ ದೂರಕ್ಕೆ ಕೊಂಡೊಯ್ಯುತ್ತದೆ. ಇದು, ತಾನು ಲೈಂಗಿಕ ಕ್ರಿಯೆಗೆ ಸಿದ್ಧವೆಂದು ಹೇಳಿಕೊಳ್ಳುವ ಸೂಚನೆಯಾಗುತ್ತದೆ. ಇದನ್ನರಿತೊಡನೆ ಗಂಡು(ಲೈಂಗಿಕ ಆಕರ್ಷಣೆಯನ್ನು ಪಡೆದ ಇತರ ಜೀವಿಗಳಂತೆ) ಲೈಂಗಿಕ ಸಾಂಗತ್ಯಕ್ಕೆ ಒಳಪಡುವುದಿಲ್ಲ. ಗಂಡು ಸಾವಕಾಶವಾಗಿ, ಬಹು ಜಾಗೃಕತೆಯಿಂದ ಹೆಣ್ಣಿನೆಡೆಗೆ ಅದರ ನಿರ್ದೇಶಿತ ದಾರದೆಳೆ ಹಿಡಿದು ಸಾಗುತ್ತದೆ. ಕೊನೆಗೆ ಸಂದರ್ಭಕ್ಕೆ ಸಿದ್ಧವಾದೊಡನೆ ತನ್ನ ಜನಾಂಗದಿಂದ ವೀರ್ಯದ ಚಂಡೊಂದನ್ನು (ಗಟ್ಟಿಗೊಂಡ ವೀರ್ಯಗಳ ಗುಂಪು) ತಯಾರಿಸಿಕೊಳ್ಳುತ್ತದೆ.
ಗಂಡು ಜೇಡ ತಾನು ಹೆಣ್ಣಿಗೆ ಬಲಿಯಾಗುವೆನೆಂದು ತಿಳಿದೂ ತನ್ನ ಲೈಂಗಿಕಾಸಕ್ತಿಯ ಕೊನೆಯ ಕಾರ್ಯಗಳನ್ನು ಪ್ರಾರಂಭಿಸುತ್ತದೆ.
ನಿಧಾನವಾಗಿ ಹೆಣ್ಣಿನತ್ತ ಬಂದು, ಥಟ್ಟನೆ ಹಿಂತಿರುಗುತ್ತದೆ. ಈ ವರ್ತನೆಯನ್ನು ಅದು ಅನೇಕ ಬಾರಿ ಪುನರಾವರ್ತಿಸಿದರೂ ಹೆಣ್ಣು ಮಾತ್ರ ಯಾವ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಏಕೆಂದರೆ ಗಂಡಿನಲ್ಲಿಯ ಜೀವನಾಶದ ಭಯವನ್ನು ಸಂಪೂರ್ಣವಾಗಿ ಕಿತ್ತು ಹಾಕಿ, ಲೈಂಗಿಕ ತೆವಲನ್ನು ತುಂಬುವ ಉದ್ದೇಶ ಹೊಂದಿರುತ್ತದೆ. ಆದ್ದರಿಂದಲೇ ಮೊದ ಮೊದಲು ಹೆಣ್ಣು ಗಂಡನ್ನು ಹಿಡಿಯಲು ಪ್ರಯತ್ನಿಸುವುದಿಲ್ಲ.
ಕೊನೆಯಲ್ಲಿ ಗಂಡು ಇನ್ನೂ ಹತ್ತಿರ ಬಂದು ವೀರ್ಯದ ಚಂಡನ್ನು ಹೆಣ್ಣಿನ ರೇತಸ್ಸಿನ ಭಾಗಕ್ಕೆ ಸೇರಿಸುತ್ತದೆ. ಈ ಕ್ರಿಯೆ ಸಂಪೂರ್ಣಗೊಂಡ ತರುವಾಯ ಗಂಡು ಗೂಡಿನಿಂದ ಹೊರಬರಲೆತ್ನಿಸುತ್ತದೆ. ಆದರೆ ದೇಹ, ಗಾತ್ರ ಮತ್ತು ರಚನೆಯಲ್ಲಿ ಗಂಡನ್ನು ಮೀರಿಸಿದ ಹೆಣ್ಣು ಅದನ್ನು ಹೊರ ಹೋಗಲು ಬಿಡದೆ ಭೀಮ ಬಾಹುಗಳಿಂದ ಬಂದಿಸಿ ಗಪಗಪನೆ ತಿಂದ್ಹಾಕಿ ಬಿಡುತ್ತದೆ.
ಇಂತು ವಿಸ್ಮಯ ಲೈಂಗಿಕ ವರ್ತನೆ ತೋರುವ ಕಪ್ಪು ಹೆಣ್ಣು ಜೇಡವು ತನಗೆ ತಾನೇ ವಿಧವಾ ಅವಸ್ಥೆಯನ್ನು ತಂದುಕೊಳ್ಳುತ್ತದೆ.
—————————————
ಶ್ರೀ ಶಿವಾನಂದ ಕಲ್ಯಾಣಿ
Good information sir