ಇಂದಿರಾ ಮೋಟೆಬೆನ್ನೂರ ಕವಿತೆ-ತಿಳಿಯಲೇ ಇಲ್ಲ

ಕಾವ್ಯ ಸಂಗಾತಿ

ತಿಳಿಯಲೇ ಇಲ್ಲ

ಇಂದಿರಾ ಮೋಟೆಬೆನ್ನೂರ.

ಸ್ನೇಹ ಪಲ್ಲವಿಯ ಗಾನ
ಅನುಪಲ್ಲವಿಯಾಗಿ
ಪಲ್ಲವಿಸಿ ಹೃದಯ
ಪಲ್ಲಕ್ಕಿಯನೇರಿದ್ದು….
ಯಾವಾಗ ತಿಳಿಯಲೇ ಇಲ್ಲ…

ದೂರ ಪಯಣದ ದಾರಿ
ಮೊಗ್ಗಾದ ಭಾವಗಳ
ಚೆಲು ಬಳ್ಳಿ ಚೆಲ್ಲುವರಿದು
ಹಬ್ಬಿ ತಬ್ಬಿ ಹೂವರಳಿದ್ದು….
ಯಾವಾಗ ತಿಳಿಯಲೇ ಇಲ್ಲ…

ಮೌನದ ಮುಸುಕಿನಲ್ಲಿ
ಎದೆ ಮಾತುಗಳೆಲ್ಲ
ಉಲಿಯುತ ಹೃದಯ
ಬಡಿತವಾಗಿದ್ದು..
ಯಾವಾಗ ತಿಳಿಯಲೇ ಇಲ್ಲ…

ಇಳಿಜಾರಿನ ಜೀವನದ
ಹಾದಿಯ ಹೊರಳಿನಲಿ
ಅಪರೂಪದ ಸಿಕ್ಕ ಸ್ನೇಹ
ಮಧುರ ಬಂಧವಾಗಿದ್ದು..
.ಯಾವಾಗ ತಿಳಿಯಲೇ ಇಲ್ಲ…

ಬಿಟ್ಟೆನೆಂದರೂ ಬಿಡದ
ಗುಣಿಸಿ ಭಾಗವಾಗುವ
ಭಾವ ಶರಧಿಯಾಳದಲ್ಲಿ
ತನ್ಮಯದಿ ಮುಳುಗಿದ್ದು….
ಯಾವಾಗ ತಿಳಿಯಲೇ ಇಲ್ಲ..

ಸಮ ಭಾವ ಕವಿ ಸಮಯ
ಪವಿತ್ರ ಸಂಬಂಧ ಸುಳಿಯಲ್ಲಿ
ಸಮಾನ ಮನೋಭಾವದ
ನಿಲುವಲಿ ಸೆರೆಯಾಗಿದ್ದು….
ಯಾವಾಗ ತಿಳಿಯಲೇ ಇಲ್ಲ..


ಇಂದಿರಾ ಮೋಟೆಬೆನ್ನೂರ

Leave a Reply

Back To Top