ಹಮೀದಾ ಬೇಗಂ ದೇಸಾಯಿ ಕವಿತೆ-ಸೆಹ್ ಗಜ಼ಲ್

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಸೆಹ್ ಗಜ಼ಲ್

ಕಣ್ಣಿಗೆ ಕಾಣುವ ಎಲ್ಲವೂ ಸತ್ಯವಲ್ಲ ಈ ದುನಿಯಾದಲ್ಲಿ
ಬದುಕು ಉಂಡ ಎಲ್ಲವೂ ಮಿಥ್ಯವಲ್ಲ ಈ ದುನಿಯಾದಲ್ಲಿ

ಹಸಿರು ಮುರುಟಿ ಒಣಗಿ ತರಗು ಆಗಬಹುದು ಅಲ್ಲವೇ
ತುಂಬಿದ ಒಡಲು ಎಂದೂ ಬಂಜೆಯಲ್ಲ ಈ ದುನಿಯಾದಲ್ಲಿ

ಕಷ್ಟಗಳು ಬರಲಿ ಗೋಳು ಹೊಯ್ಯಲು ನಿನಗೆ
ಅಂಜದಲೆ ಸಾಗು ಧೈರ್ಯದಿ ಹೇಡಿಯಲ್ಲ ಈ ದುನಿಯಾದಲ್ಲಿ

ವಂಚಕರ ಮಂದೆ ತುಂಬಿದೆ ನಿನ್ನ ಸುತ್ತ ಮುತ್ತ
ಅರಿತು ಬೆರೆತು ನಡೆದರೆ ಸ್ವಾರ್ಥಿಯಲ್ಲ ಈ ದುನಿಯಾದಲ್ಲಿ

ನಗುವ ಮುಖವಾಡ ಹಾಕಿ ಸೆಳೆವರು ಬೇಗಂ ಮೆತ್ತಗೆ
ತಿಳಿದೂ ವಿಷ ಜಾಲದಲಿ ಜಾರುವುದು ತರವಲ್ಲ ಈ ದುನಿಯಾದಲ್ಲಿ

ಸಿಹಿ ಆಗಿರುವುದು ಎಲ್ಲ ಮಧುವಲ್ಲ ಈ ದುನಿಯಾದಲ್ಲಿ
ಮನದಿ ತುಂಬಿದ ಆಸೆಗಳು ನಿಜವಲ್ಲ ಈ ದುನಿಯಾದಲ್ಲಿ

ಮರುಳು ಮಾಡಿ ಬಿಡುವರು ಸವಿ ಮಾತಿನಲಿ ನೋಡು
ಕೊರಳ ಕೊಡದಿರು ಉರುಳದು ಸರವಲ್ಲ ಈ ದುನಿಯಾದಲ್ಲಿ

ಕನಸುಗಳ ತೋರಿಸಿ ನಡುವೆ ಕೈಯ ಬಿಡುವ ನೀಚರು
ಮೋಹದ ತಿರುಗಣಿಯು ಜೀವನ ಶಾಶ್ವತವಲ್ಲ ಈ ದುನಿಯಾದಲ್ಲಿ

ಕಬ್ಬಿನ ರಸ ಹೀರುವ ಕುತಂತ್ರ ನರಿಗಳಲ್ಲವೇ ಅಧಮರು
ನಂಬಿಸಿ ಹಿಂಸಿಸುವ ಅತ್ಯಾಚಾರಿಗಳು ಒಲವಲ್ಲ ಈ ದುನಿಯಾದಲ್ಲಿ

ಸಮಯ ಸಾಧಕರು ಗೋಮುಖ ವ್ಯಾಘ್ರರು ಕಪಟಿಗಳು ಇವರೆಲ್ಲ
ಎಚ್ಚರದಿ ಇರಬೇಕು ಬೇಗಂ ವಿಶ್ವಾಸವಿಲ್ಲ ಈ ದುನಿಯಾದಲ್ಲಿ..

ಮರೀಚಿಕೆಯ ಬೆನ್ನತ್ತಿ ನಡೆವುದು ಒಳ್ಳೆಯದಲ್ಲ ಈ ದುನಿಯಾದಲ್ಲಿ
ವಾಸ್ತವದ ಮರೆವು ಎಡವುದಕೆ ಕಾರಣವಲ್ಲ ಈ ದುನಿಯಾದಲ್ಲಿ

ಹೆಜ್ಜೆ ಇಡುವಾಗ ಜೋಪಾನವಾಗಿ ಗಟ್ಟಿ ಪಾದ ಊರಬೇಕು
ಮುಂದಿರುವ ಮುಳ್ಳುಗಳಲೇ ಇಳಿದಾಗ ಅಂಧತ್ವವಲ್ಲ ಈ ದುನಿಯಾದಲ್ಲಿ

ಮದವೇರಿದ ದೇಹದೊಳು ಸೈತಾನನ ಆಟಗಳು ನೂರು ಸಖಿ
ಅಂಕೆ ಮೀರಿ ಕುಣಿದರೆ ಜಾಣ್ಮೆಯಲ್ಲ ಈ ದುನಿಯಾದಲ್ಲಿ

ಇರುಳು ನೋಡಿದ ಬಾವಿಗೆ ಹಗಲು ಬೀಳುವರೇ ಹುಚ್ಚಿ
ಕೆಸರಲಿ ಸಂಭ್ರಮ ಪಡೆವುದು ನೀತಿಯಲ್ಲ ಈ ದುನಿಯಾದಲ್ಲಿ

ಅಜ್ಞಾನದ ಕರಿಯ ಪರದೆ ಸರಿಸಿ ಬಾ ಬೇಗಂ
ಸದಾಚಾರದ ಬೆಳಕು ಸುರಿದಿದೆ ಕತ್ತಲಲ್ಲ ಈ ದುನಿಯಾದಲ್ಲಿ..


ಹಮೀದಾ ಬೇಗಂ ದೇಸಾಯಿ

2 thoughts on “ಹಮೀದಾ ಬೇಗಂ ದೇಸಾಯಿ ಕವಿತೆ-ಸೆಹ್ ಗಜ಼ಲ್

  1. ದುನಿಯಾದೊಳಗಿನ ನಗ್ನ ಸತ್ಯವನ್ನು ಬಿಚ್ಚಿಟ್ಟ ಗಝಲ್, ಮಾರ್ಮಿಕವಾಗಿ ಮೂಡಿಬಂದಿದೆ.

  2. ಧನ್ಯವಾದಗಳು ಮೆಚ್ಚುಗೆಗೆ.
    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top