ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಹನಿಗಳು
- ಬದುಕು..!
ನಾಲ್ಕು ಜನರ ಹೆಗಲಿಗೆ
ಹೊರೆಯಾಗುವ ಮೊದಲು
ನಾಲ್ಕಾರು ಜೀವನಗಳಿಗಾದರು
ಹಗಲೀವ ಮುಗಿಲಾಗಬೇಕು.!
- ಅಂತರ..!
ಕಣ್ಣು ಕರುಳಿಲ್ಲದ ಕತ್ತರಿಗೆ
ಕತ್ತರಿಸುವುದೇ ಸಂತಸದಾಯಕ
ಕರುಣೆಯ ಕಣ್ಣುಳ್ಳ ಸೂಜಿಗೆ
ಕೂಡಿಸುವುದೇ ನಿತ್ಯ ಕಾಯಕ.!
- ಅಸಾಧ್ಯ.!
ಅಮಾವಾಸ್ಯೆಯಿರುಳ ಬಾನಂಗಳದಿ
ಶಶಿಯ ಕಾಣಲು ಹಠತೊಟ್ಟವರ
ಭಗವಂತ ಕೂಡಾ ಬದಲಿಸಲಾರ
ಭ್ರಮೆಗಳಲಿ ಸ್ವಯಂಬಂಧಿಯಾದವರ
ಕತ್ತಲಿಂದ ಕೊಂಚವು ಕದಲಿಸಲಾರ !
- ಅನರ್ಥ.!
ಕರಗದ ಕಟುಕರೆದುರು
ಕೊರಗುವುದರಲ್ಲಿಲ್ಲ ಅರ್ಥ.!
ಕರುಳೇ ಇಲ್ಲದವರೆದುರು
ಎಷ್ಟೇ ಕಂಬನಿಗೆರೆದರೂ ವ್ಯರ್ಥ.!
- ಪರಿಹಾಸ..!
ಹೊಟ್ಟೆ ತುಂಬಿದವರಿಂದ
ಹಸಿವಿನ ಬಗೆಗೆ ಭಾಷಣ
ಪುಗಸಟ್ಟೆ ತಿನ್ನುವವರಿಂದ
ಸ್ವಾಭಿಮಾನದ ಘೋಷಣ.!
- ಸ್ವಭಾವ..!
ಹೆಸರಿಗೆ ಹಪಹಪಿಸುವವರಿಗೆ
ಪ್ರಚಾರ ಆತ್ಮರತಿಯೇ ಉಸಿರು
ಸದಾ ಸ್ವಪ್ರಶಂಸೆಗಳ ಬಸಿರು
ಪರರ ಹೊಗಳಿದರೆ ಅವರೆದುರಿಗೆ
ಎರಚೇ ಬಿಡುವರು ಕೆಸರು.!
ಎ.ಎನ್.ರಮೇಶ್. ಗುಬ್ಬಿ.