ಕಾವ್ಯ ಸಂಗಾತಿ
ಜಯಂತಿ ಸುನಿಲ್
ಗಜಲ್
ಮತ್ತೇನೋ ಹೇಳುವುದು ಬಾಕಿ ಇತ್ತೆಂದು ಕಳೆದ ಗತವೇ ಹಿಂತಿರುಗಿ ನೋಡಬೇಡ..
ಕಡುಗಪ್ಪು ಕಂಗಳಲಿ ಮಿಂಚಿ ಮರೆಯಾದಂತೆ ಸರಿದ ಛಾಯೆಯೇ ಹಿಂತಿರುಗಿ ಬರಬೇಡ..!!
ಇಲ್ಲಿ ಎಲ್ಲರೂ ಸಂಬಂಧಿಗಳೇ ಎಲ್ಲರಿಗೂ ರಾತ್ರಿಯಾಗುತ್ತಿದೆ…
ಯುಗ ಮುಗಿದರೂ ಕಾಯುವೆ ನಿನಗಾಗಿ ಎಂದವರಿಲ್ಲಾ ಪೊಳ್ಳು ಭ್ರಮೆಯೇ ಹಿಂತಿರುಗಿ ನಿಲ್ಲಬೇಡ..!!
ತುರ್ತಾಗಿ ಹೊರಡುವವರಿಗೆ ಮುಚ್ಚಿದ ಕದಗಳ ತೆರೆದಿಡು…
ಅವರ ಪಾಲಿನದ್ದು ಅವರ ಹೆಗಲೇರಲಿ,ಬರಿಗೈಯೇ ಹಿಂತಿರುಗಿ ಕೈಚಾಚಬೇಡ..!!
ಮೊದಲಿನ ಹಾಗೆ ಯಾವುದೂ ಇಲ್ಲ,ಪ್ರಶ್ನೆಗಳೂ ಸಾಯುತ್ತಿಲ್ಲಾ
ತುಟಿಯಂಚಿನಲ್ಲಿ ಸಣ್ಣ ನಗು ಬೀರುವ ಸವಾಲೇ..ಹಿಂತಿರುಗಿ ನುಡಿಯಬೇಡ..!!
ಸಣ್ಣದೊಂದು ಸೆಲೆಯೂ ಇಲ್ಲದ ಅಂತಃಕರಣದ ಮುಳ್ಳುಗಳು ಚುಚ್ಚುವ ಕಾಲವಿದು..
ಪಾತ್ರ ಬದಲಿಸುವ ಕಾಯಗಳ ಲೆಕ್ಕಾಚಾರವೇ ಹಿಂತಿರುಗಿ ಕಾಡಬೇಡ..!!
ಸಂಜೆಗಳು ಹಾಳಾಗುವ ಸೂಚನೆ ಮಲ್ಲಿಗೆ ಬಲುಬೇಗ ಬಾಡಿ ಹೇಳುತ್ತಿದೆ..
ಎಲ್ಲದರಲ್ಲೂ ಎದುರಾಗುವ ಒಂಟಿತನಕ್ಕೆ ಹೆದರುವೆಯೇ ಮನವೇ..ಹಿಂತಿರುಗಿ ಕಾಯಬೇಡ..!!
ಸತ್ಯವನ್ನೋ ಸೂಜಿಗೆ ಸುಳ್ಳಿನ ದಾರ ಹಾಕಿ ಬದುಕೆಂಬ ಬಟ್ಟೆಗೆ ತೇಪೆ ಹಚ್ಚಿದವರೆಷ್ಟೋ…
ಸೋಲೇ ಬದುಕಿನ ಪುಟವಲ್ಲಾ ಜಯ ಸಿಗುವವರೆಗೂ ಗುರಿಯೇ ಹಿಂತಿರುಗಿ ಕಾಲಿಡಬೇಡ..!!
ಜಯಂತಿ ಸುನಿಲ್