ಕಾವ್ಯ ಸಂಗಾತಿ
ಒಂದೇ ನಾವಿಬ್ಬರೂ
ಒಂದೇ ನಾವಿಬ್ಬರೂ
ನಾನು ನೀನೆಂಬುದ
ಬೇರಿಲ್ಲ ಇಲ್ಲಿ
ನಾನೇ ನೀನು ನೀನೇ
ನಾನಲ್ಲವೆ
ಜೀವದುಸಿರಲಿ
ಬೆರೆತಿರುವಾಗ//
ಕನಸು ಮನಸಲಿ
ಕಲೆತು ಒಂದಾಗಿ
ಹುಸಿ ಭಾವದಲ್ಲಿ
ಸುಳಿ ಸುಳಿದು
ಸಮ್ಮಿಳಿಸಿರುವಾಗ//
ಹೃದಯದಂಗಳದ
ರಂಗೋಲಿಯಿಂದು
ಚುಕ್ಕಿ ಚಿತ್ತಾರಗಳಲಿ
ಲೀನವಾದಂತೆ
ತೋರುತಿರುವಾಗ//
ಭಾವ ಕುಸುಮದ
ಮಕರಂದದ
ಗಾಳಿ ಗಂಧದಲಿ
ಸೇರಿ ಪರಿಮಳಿಸುತ
ಕಂಪಿಸುತಿರುವಾಗ//
ಜೀವ ವೀಣೆ ತಂತಿಯಲಿ
ವೀಣೆ ನಾನು ತಂತಿ ನೀನು
ಹೊರ ಸೂಸುವ ರಾಗತಾಳ
ಶ್ರುತಿಗೊಂಡು
ಸಂಗೀತದೊಂದಿಗೆ
ಇಂಪಾಗಿರುವಾಗ//
ಆಸೆ ಆಕಾಂಕ್ಷೆ
ಬಯಕೆ ಹಂಬಲ
ಎಲ್ಲ ಒಂದಾಗಿರೆ
ಒಲವು ಗೆಲುವಾಗಿ
ಮೈದಳೆದಿರುವಾಗ
ನಾವಿಬ್ಬರೂ ಒಂದಲ್ಲವೆ?
ಡಾ ಅನ್ನಪೂರ್ಣ ಹಿರೇಮಠ