ಜಯಂತಿ ಸುನಿಲ್-ಗಜಲ್

ಕಾವ್ಯ ಸಂಗಾತಿ

ಜಯಂತಿ ಸುನಿಲ್

ಗಜಲ್

ನಿನ್ನ ನೋಡದ ಈ ಕಂಗಳೇಕೆ? ರೆಪ್ಪೆಯ ಸೇತುವೆಗಳನ್ನು ಮುಚ್ಚಿಬಿಡು ಗೆಳೆಯಾ…
ನಿನ್ನೊಡನಾಡದ ಈ ನಾಲಿಗೆಯೇಕೆ?ತುಟಿಗಳೆರಡನ್ನು ಒಲಿದುಬಿಡು ಗೆಳೆಯಾ..!!

ನೀನಿರದೇ ಬಿಲ್ ಕುಲ್ ಬದುಕಿಲ್ಲಾ ನನಗೆ…
ನೆಮ್ಮದಿ ಕೊಲೆಯಾದ ಈ ಸತ್ತಭಾವಗಳೇಕೆ? ಹಿಡಿಮಣ್ಣು ಹಾಕಿಬಿಡು ಗೆಳೆಯಾ..!!

ನೆರಳಿಗೂ ಕೊಡೆಹಿಡಿದು ಬರುತ್ತಿದ್ದೆ ನೀನು ನಾ ನಡೆವ ಹಾದಿಯೆಡೆಗೆ…
ನಿನ್ನೊಡನೆ ಹೆಜ್ಜೆಬೆರೆಸದ ಈ ಪಾದಗಳೇಕೆ? ಕಾಲುಗಳನ್ನು ಕತ್ತರಿಸಿ ಬಿಡು ಗೆಳೆಯಾ…!!

ನೀನಿಲ್ಲದ ವೇಳೆ ಕಡಲಬ್ಬರದ ಜೋಗುಳವೂ ಮಗ್ಗಲು ಬದಲಿಸುತ್ತಿದೆ…
ನೀ ಇರದೆಡೆ ಈ ಎದೆಯ ಹಾಡೇಕೆ? ಹೃದಯ ಬಗೆದುಬಿಡು ಗೆಳೆಯಾ..!!

ಪಿಸುಗಾಳಿಯೂ ಬಿರುಗಾಳಿಯಾಗಿ ನನ್ನತ್ತ ಆವರಿಸಿದರೆ ಹೇಗೆ ತಾಳಲಿ?
ನನ್ನೊಳಗೆ ನೀನಿಲ್ಲದ ಈ ಉಸಿರೇಕೆ? ಉಚ್ವಾಸ,ನಿಚ್ವಾಸಗಳನು ನಿಲ್ಲಿಸಿಬಿಡು ಗೆಳೆಯಾ..!!

ಈ ಜೀವದ ಆಜುಬಾಜುಗಳಲ್ಲಿ ನಿನ್ನ ಪ್ರೀತಿಯ ಸುಳಿವಿಲ್ಲಾ…
ನೀ ಜೊತೆಗೂಡದ ಈ ಪಯಣವೇಕೆ? ಬಾಳ ನೌಕೆಯನು ಮುಳುಗಿಸಿಬಿಡು ಗೆಳೆಯಾ..!!

ಬದುಕಿನ ಉಮೇದಿಗೆ ಜೀವಸ್ವರವನ್ನು ತುಂಬಿದವನು ನೀನು…
ನಿನ್ನೊಲುಮೆ ಸಿಗದ ಹೊರತು ಈ ಜಗವೇಕೆ? ಜಯವಿಲ್ಲಾ ನನಗೆ ಜರೂರಾಗಿ ಕೊಂದು ಬಿಡು ಗೆಳೆಯಾ…!!


ಜಯಂತಿ ಸುನಿಲ್

Leave a Reply

Back To Top