ಕಾವ್ಯ ಸಂಗಾತಿ
ಡಾ.ವಿಜಯಲಕ್ಷ್ಮಿ ಪುಟ್ಟಿ
ಅದೇಕೋ ಹೊರಟೆ ಬಿಟ್ಟರು…
ಇಷ್ಟು ದಿನ ನಮ್ಮೊಂದಿಗೆ ಇದ್ದರು ಅಪ್ಪ
ಸ್ವಲ್ಪ ಕೆಲಸವಿದೆ ಇಗೋ ಬಂದೆ
ಎನ್ನುತ್ತಾ ಮೆಟ್ಟು ಮೆಟ್ಟಿ ಹೊರಟೆ ಬಿಟ್ಟರು
ಶಾಂತ ಮನದಿಂದ ತುಸು ನಗೆಯ ತುಳುಕಿಸುತ್ತ
ಒಪ್ಪ ಬಟ್ಟೆ ತೊಟ್ಟು ಅದೇಕೋ ಹೊರಟೆ ಬಿಟ್ಟರು…
ಜೀವನದುದ್ದಕ್ಕೂ ಶ್ರಮದ ಬೆವರು ಹರಿಸಿ
ಕರಳ ಕುಡಿಗಳ ಪ್ರೀತಿಯಿಂದ ತಬ್ಬಿದವರು
ತಾಳ್ಮೆ ಪ್ರೀತಿಯ ಪಾಠ ಹೇಳಿಕೊಡುತ್ತಾ
ಮತ್ತಾರಿಗೋ ಜೀವನ ಪಾಠ ಒಪ್ಪಿಸಲು
ಅದೇಕೋ ಹೊರಟೇಬಿಟ್ಟರು..
ಸಂತೆಪೇಟೆಗಳಲ್ಲಿ ಭದ್ರ ಕೈಗಳಲ್ಲಿ ನನ್ನ ರಕ್ಷಿಸುತ್ತ
ಜೀವನದ ವ್ಯಾಪಾರ ವಹಿವಾಟು ತಿಳಿಸಿದವರು
ರೊಟ್ಟಿಯ ಮೇಲೆ ಬೆಣ್ಣೆ ಸವರಿ ತುಸು ಕಾರ ಉಪ್ಪು ಸಿಂಪಡಿಸಿ ಬದುಕಿಗೆ ರುಚಿ ಹೆಚ್ಚಿಸಿದವರು,
ಮತ್ಯಾರದೊ ಜೀವರುಚಿ ಹೆಚ್ಚಿಸಲು
ಅದೇಕೋ ಹೊರಟೇಬಿಟ್ಟರು..
ತಾನು ಸರಳ ಸಂತನಂತೆ ಬದುಕಿದರೂ,
ಮಕ್ಕಳ ಬದುಕ ಶ್ರೀಮಂತಗೊಳಿಸಿದವರು
ಎಲ್ಲ ಕಷ್ಟ ಕಾರ್ಪಣ್ಯಗಳ ಕುಟುಂಬದ ಖುಷಿಯಲ್ಲಿ ಮರೆತು ಕಣ್ತುಂಬಿಕೊಂಡು ಅದೇಕೋ ಹೊರಟೇಬಿಟ್ಟರು…
ಇದೀಗ ಅಪ್ಪನೆಂಬ ಅಘಾದ ವಿಸ್ತಾರತೆಯ
ಕೊರತೆ ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ,
ಜೀವ ಪಯಣದಲ್ಲಿ ಪ್ರೀತಿಯ ಚಿತ್ತಾರ ಬರೆದು ಪಯಣ ಮುಗಿಸಿ ಅದೇಕೋ ಹೊರಟೆ ಬಿಟ್ಟರು ಅಪ್ಪ…
ಡಾ.ವಿಜಯಲಕ್ಷ್ಮಿ ಪುಟ್ಟಿ
You are truely an inspiration madam
ಅಪ್ಪ ಸದಾ ಕಾಡುತ್ತಲೇ ಇರುವ ನೆನಪು…. ಆಪ್ತ ಕವಿತೆ ಮೇಡಂ
ಹೌದು ಮಮತಾ ಅವರೇ