ಕಾವ್ಯ ಸಂಗಾತಿ
ಗಜಲ್
ಅನುರಾಧಾ ರಾಜೀವ್ ಸುರತ್ಕಲ್
ಬಂಡೆಯ ಮೇಲಿಂದ ದುಮ್ಮಿಕ್ಕಿ ಜಲಧಾರೆ
ಎರೆಯುತಿದೆ ನೋಡು
ಕಂಡೆಯಾ ಪ್ರಕೃತಿ ಸೌಂದರ್ಯ ವನಸಿರಿಯ
ಬೆರೆಯುತಿದೆ ನೋಡು
ಬಿಳಿಯ ನೊರೆಹಾಲಂತೆ ಉಕ್ಕುತಾ ಕಾಡಿನಲಿ
ಕಾರಂಜಿಯಂತೆ ಚಿಮ್ಮುತಿದೆಯಲ್ಲವೇ
ತೊಳೆದ ಮುತ್ತಿನ ಹಾರದಂತೆ ಸಿಂಗರಿಸುತ
ಕರೆಯುತಿದೆ ನೋಡು
ಸಂದುಗೊಂದಿನಲಿ ಹರಿದು ನದಿಯ ಸೇರುವೆ
ಒಂದಾಗುವ ಕಾತರದಲಿ
ಮಿಂದು ಪ್ರೇಮದ ಹೊಳೆಯಲಿ ಹೃದಯವ
ತೆರೆಯುತಿದೆ ನೋಡು
ಮುಂಗಾರು ಮಳೆಗೆ ಹಸಿರು ಚಿಗುರೆಲೆಗಳು
ರಮ್ಯ ತಾಣವಾಗಿದೆ
ಕಂಗಳ ತುಂಬಾ ತರುಲತೆಗಳು ಅಂದವಾಗಿ
ಮೆರೆಯುತಿದೆ ನೋಡು
ತಿಳಿಯಾದ ಬಾನು ಹರುಷದಿ ಕುಣಿಯುತ
ಸಂಗೀತ ಹಾಡುವಂತಿದೆ
ಬಳ್ಳಿಯಲಿ ಹೂವು ರಾಧೆಯ ಭಾವವಾಗಿ
ಬರೆಯುತಿದೆ ನೋಡು
ಅನುರಾಧಾ ರಾಜೀವ್ ಸುರತ್ಕಲ್
ಚೆಂದದ ಗಝಲ್