ವಿಶೇಷ ಲೇಖನ
ಸಿ.ವಿ.ಶಿವಶಂಕರ್ ಇನ್ನು ನೆನಪು ಮಾತ್ರ
ಕೆ.ವಿ.ವಾಸು
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಗೀತ ರಚನೆಕಾರರಾದ ಶ್ರೀ ಸಿ.ವಿ.ಶಿವಶಂಕರ್ ರವರು ತಮ್ಮ. 90 ನೇ ವಯಸ್ಸಿನಲ್ಲಿ ಇಹಲೋಕದ ವ್ಯಾಪಾರ ಮುಗಿಸಿದ್ದಾರೆ. ಶ್ರೀಯುತರು, ಕನ್ನಡ ಭಾಷಾಭಿಮಾನವನ್ನು ಹಾಗೂ ಭಾಷೆಯ ಬಗೆಗಿರುವ ಗೌರವವನ್ನು ಹೆಚ್ಚಿಸುವ ಕೆಲವು ಗೀತೆಗಳನ್ನು ರಚಿಸುವ ಮೂಲಕ ಕನ್ನಡ ಭಾಷೆಯ ಸೊಬಗನ್ನು ಹೆಚ್ಚಿಸಿದ್ದಾರೆ. . ನಾಡು ನುಡಿಯ ಬಗ್ಗೆ ಅವರಿಗಿರುವ ಕಾಳಜಿಯನ್ನು ವ್ಯಕ್ತ ಪಡಿಸಿದ್ದಾರೆ.
23.03.1933 ರಂದು ವೆಂಕಟಕೃಷ್ಣಭಟ್ ಹಾಗೂ ವಿಶಾಲಾಕ್ಷಮ್ಮ ನವರ ಸುಪುತ್ರರಾಗಿ ಜನಿಸಿದ ಶ್ರೀಯುತರು, 1962 ರಲ್ಲಿ ಹುಣಸೂರು ಕೃಷ್ಣಮೂರ್ತಿಯವರು ತಮ್ಮ,” ಎವರ್ ಗ್ರೀಸ್ ” ಪ್ರೋಡಕ್ಷನ್ಸ್ ” ಲಾಂಚನದಡಿ ನಿರ್ಮಿಸಿ ನಿರ್ದೇಶಿಸಿದ
ಉದಯ ಕುಮಾರ್ ನಾಯಕತ್ವದ ” ರತ್ನ ಮಂಜರಿ” ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ಮುಂದೆ, ಮನೆ ಕಟ್ಟಿ ನೋಡು,
ಪದವೀಧರ, ನಮ್ಮ ಊರು, ಮಹಡಿ ಮನೆ, ಮಹಾತಪಸ್ವಿ, ಹೊಯ್ಸಳ ಮಂತಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಓರ್ವ ಶ್ರೇಷ್ಠ ನಿರ್ದೇಶಕನಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಕನ್ನಡ ಭಾಷೆಯನ್ನು
ಕುರಿತು ಇವರು ಬರೆದಿರುವ ಗೀತೆಗಳು ಇಂದಿಗೂ ಸಹ
ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇವರು
” ಸಂಗಮ” ಚಿತ್ರಕ್ಕಾಗಿ ಬರೆದಿರುವ ” ಸಿರಿವಂತನಾದರೂ
ಕನ್ನಡ ನಾಡಲ್ಲೇ ಇರುವೆ” ಎಂಬ ಗೀತೆ ಇವರನ್ನು ಖ್ಯಾತಿಯ ಉತ್ತಂಗಕ್ಕೇರಿಸಿತು. ” ಮಹಡಿ ಮನೆ ” ಚಿತ್ರದ
” ನಾನೋಡಿ ನಲಿಯುವ ಕಾರವಾರ” ಎಂಬ ಮತ್ತೊಂದು ಗೀತೆ, ದೂರದ ಕಾರವಾರದ ಪ್ರಕೃತಿ ಸೌಂದರ್ಯವನ್ನು
ನೂರ್ಮಡಿಗೊಳಿಸಿತು. ಕಲಾತಪಸ್ವಿ ದಿವಂಗತ ರಾಜೇಶ್ ನಟನೆಯ “ನಮ್ಮ ಊರು”_ ಚಿತ್ರದ ” ” ಹೋಗದಿರಿ ಸೋದರರೇ”
ಎಂಬ ಗೀತೆ ಸಹಾ ಅವರ ಅತ್ಯುತ್ತಮ ರಚನೆಗಳಲ್ಲಿ ಒಂದಾಗಿದೆ. ಈ ಎಲ್ಲಾ ಗೀತೆಗಳನ್ನು ಅಂದಿನ ಸುಪ್ರಸಿದ್ದ ಗಾಯಕ ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವುದು ವಿಶೇಷವೆನ್ನಬಹುದು. ಸಿರಿವಂತನಾದರೂ ಕನ್ನಡ ನಾಡಲ್ಲೇ ನಲಿವೇ ಗೀತೆಗೆ ಇವರ ಜೊತೆ ದನಿಗೂಡಿಸಿದವರು ಹಿರಿಯ ಗಾಯಕಿ ಸಿ.ಕೆ.ರಮಾ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಶಿವಶಂಜರ್ ರವರನ್ನು
ನಿರ್ಮಾಪಕ ಅಬ್ಬಯ್ಯ ನಾಯ್ಡು ತಮ್ಮ ಮಧು ಆರ್ಟ್ ಫಿಲಂಸ್ ಲಾಂಛನದಲ್ಲಿ ತಯಾರಿಸಿದ ” ತಾಯಿಯ ಮಡಿಲಲ್ಲಿ ” ಚಿತ್ರದಲ್ಲಿ ಬಳಸಿಕೊಂಡರು. ಈ ಚಿತ್ರದಲ್ಲಿ
ಶ್ರೀಯುತರು ರಚಿಸಿದ ” ಕನ್ನಡದ ರವಿ ಮೂಡಿ ಬಂದಾ”
ಎಂಬ ಗೀತೆ ರಾಜ್ಯೋತ್ಸವ ಗೀತೆಯಾಗಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಹೊಸ ನೀರು ಬಂದಾಗ ಹಳೆಯ
ನೀರು ಕೊಚ್ಚಿಕೊಂಡು ಹೋಗುವ ಹಾಗೆ ಕಾಲ ಸರಿದಂತೆ ಶಿವಶಂಕರ್
ಅವಕಾಶ ವಂಚಿತರಾದರು. ಆವರು ಬರೆದದ್ದು ಕೇವಲ
ಬೆರಳೆಣಿಕೆಯಷ್ಟು ಗೀತೆಗಳು ಮಾತ್ರವಾದರೂ ಅವೆಲ್ಲವೂ ಅತ್ಯಂತ ಶ್ರೇಷ್ಠವಾದ ಗೀತೆಗಳಾಗಿವೆ. ಹತ್ತು
ಕಟ್ಟುವ ಬದಲು ಮುತ್ತು ಕಟ್ಟು” ಎಂಬ ನುಡಿಗಟ್ಟಿನಂತೆ
ಶಿವಶಂಕರ್ ಕನ್ನಡ ಚಿತ್ರರಂಗಕ್ಕೆ ಹಲವಾರು ಮುತ್ತುಗಳನ್ನು ಕೊಟ್ಟಿದ್ದಾರೆ. ಇವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ,. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದ ಈ ಶ್ರೇಷ್ಠ ನಿರ್ದೇಶಕ ಹಾಗೂ ಗೀತ ರಚನೆಕಾರರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿಗಳು.
ಕೆ.ವಿ.ವಾಸು