ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಪಯಣ
ಚಿತ್ರ ಕೃಪೆ-ಗೂಗಲ್
ಮೆಟ್ಟಿದ ಕಲ್ಲು ಮುಳ್ಳುಗಳು, ದಾರಿಯ ಏರು ಜಾರುಗಳು
ಆದ ಏಳು ಬೀಳುಗಳು, ಅನುಭವಿಸಿದ ನೋವು ನಲಿವುಗಳು
ಕಳೆದ ರಸ್ತೆಯ ಕಾರ್ಗತ್ತಲು, ಕಂಡ ಹೊಂಬೆಳಕಿನ ಹಗಲು
ಸುರಿದ ಸೋನೆ ಮುಗಿಲು, ತಂಪೆರೆದ ಮಾರುತದ ಒಡಲು
ಎದುರಾದ ಅನೂಹ್ಯ ತಿರುವುಗಳು, ಕಂಗೆಡೆಸಿದ ಕವಲುಗಳು
ಹಿಂತಿರುಗಿ ನೋಡಿದರೆ ಎಷ್ಟೆಲ್ಲಾ ವಿಸ್ಮಯಗಳು ಗೆಳೆಯ.!
ಹಾದಿಬದಿಯ ಬಗೆ ಬಗೆ ಹೂವುಗಳು, ಸುವಾಸಿತ ಘಮಲು
ಕಣ್ಸೆಳೆದ ಏನೇನೆಲ್ಲ ನೋಟಗಳು, ರಮ್ಯತೆಯ ಕಮಾಲು
ಉದ್ದಕ್ಕೂ ಮೈಚಾಚಿ ನಿಂತ ಮರಗಳು, ಬಿಗಿದಪ್ಪಿದ ಲತೆಗಳು
ಅಡಿಗಡಿಗೂ ಜಾರುತ್ತಿದ್ದ ಹಣ್ಣೆಲೆಗಳು, ನಗುತ್ತಿದ್ದ ಚಿಗುರುಗಳು
ಅನುಕ್ಷಣ ಬದಲಾಗುತ್ತಿದ್ದ ನೆಳಲು ಬೆಳಕಿನಾಟದ ಚಿತ್ತಾರಗಳು
ಒಮ್ಮೆ ಕಣ್ಮುಚ್ಚಿ ನೆನೆದರೆ ಅದೆಂಥಹಾ ಪುಳಕಗಳು ಗೆಳೆಯ.!
ನಡೆದ ದಾರಿಯಲಿ ಪತಂಗ ದುಂಬಿಗಳು ಹಾಡಿದ ಗಜಲು
ಹಸಿರ ನಡುವಿಂದ ಹಕ್ಕಿ ಪಕ್ಷಿಗಳಿಂಚರ ನುಡಿಸಿದ ಕೊಳಲು
ಗಂಧರ್ವ ಭಾಷೆಯಲಿ ಪದ ಪದ್ಯ ಉಲಿದ ಮೊಲ ಅಳಿಲು
ಮುಂಜಾನೆ ಮುಸ್ಸಂಜೆ ಕುಶಲೋಪರಿ ಕೇಳಿದ ಬೆಳ್ಳಕ್ಕಿ ಸಾಲು
ಸಂಕಟಗಳ ನಡುವಲ್ಲು ಸಾಂತ್ವಾನ ಸಂತಸಗಳ ಹೊನಲು
ಸ್ಮರಿಸುತ ಕಿವಿಗೊಟ್ಟರೆ ಏನೆಲ್ಲಾ ಮಾಧುರ್ಯಗಳು ಗೆಳೆಯ.!
ನಾವೆಷ್ಟು ಮೈಲುಗಳ ದೂರ ನಡೆದೆವೆನ್ನುವುದಲ್ಲ ಮುಖ್ಯ
ಅಂದುಕೊಂಡ ಗಮ್ಯ ತಲುಪಿದೆವೆನ್ನುವುದಲ್ಲ ಪ್ರಾಮುಖ್ಯ
ಏನೆಲ್ಲ ಕಷ್ಟ ಕೋಟಲೆಗಳ ಎದುರಿಸಿದೆವೆನ್ನುವುದಲ್ಲ ವೇದ್ಯ
ಇಟ್ಟ ಪ್ರತಿ ಹೆಜ್ಜೆಯನು ಪ್ರತಿಕ್ಷಣ ಅದೆಷ್ಟು ಆನಂದಿಸಿದೆವು
ತುಳಿದ ಹಾದಿಯ ನಡೆದ ಮಾರ್ಗವ ಎಷ್ಟು ಸಂಭ್ರಮಿಸಿದೆವು
ಅನ್ನುವುದಷ್ಟೆ ಸತ್ಯ, ಅದಷ್ಟೇ ಮುಖ್ಯಾತಿಮುಖ್ಯ ಗೆಳೆಯ.!
ಗೆಳೆಯ ಇದುವೆ ಬದುಕಿನ ಪಯಣದಾ ಅನನ್ಯ ಸೊಬಗು
ಆಸ್ವಾಧಿಸಿದಷ್ಟು ಅನುಭಾವಿಸಿದಷ್ಟು ಸೆಳೆಯುವ ನಿತ್ಯ ಬೆರಗು
ಸಾಗಿದಷ್ಟೂ ಸಂಭ್ರಮಿಸಿದಷ್ಟೂ ಜೀವ-ಜೀವನಕೆ ದಿವ್ಯ ಮೆರಗು
ಮುಟ್ಟುವ ಗುರಿ, ಸೇರುವ ಗಮ್ಯ ವೃಥಾ ಚಿಂತೆಗಳೇಕೆ ಬೇಕು?
ಪ್ರತಿಘಳಿಗೆಗಳನು ಸಾರ್ಥಕಗೊಳಿಸಿ ಸಾಗುವುದರಲ್ಲಿದೆ ಬದುಕು
ಕ್ಷಣ ಕ್ಷಣಗಳನು ಅನುಭವಿಸಿ ಆರಾಧಿಸುವುದರಲ್ಲಿದೆ ಬೆಳಕು.!
ಎ.ಎನ್.ರಮೇಶ್.ಗುಬ್ಬಿ.