ಕಾವ್ಯ ಸಂಗಾತಿ
ಸುಜಾತ ಲಕ್ಷ್ಮೀಪುರ.
ಗಜಲ್
ಜನ ಬೀದಿ ಬೀದಿಯಲಿ ಹಸಿವಿನಿಂದ ಕೂಗುತ್ತಿದ್ದಾರೆ ಯಾವ ದೈವವೂ ಒಲಿಯುತ್ತಿಲ್ಲ
ಮನೆ ಮನೆಯಲಿ ಅನೇಕ ದೇವರ ಸುಂದರ ಪಟಗಳಿವೆ
ಯಾವ ಪೂಜೆಯೂ ಫಲಿಸುತ್ತಿಲ್ಲ
ಬೆಂಕಿಯ ಮೇಲಿನ ನಡಿಗೆಯಾಗಿದೆ ನಮ್ಮೆಲ್ಲರ ಬಾಳು
ಯಾವ ಕಸರತ್ತೂ ಉಳಿಸುತ್ತಿಲ್ಲ
ಗಾಳಿಯ ಕಣಕಣದಲ್ಲೂ ಮೋಸ ವಂಚನೆ ತುಂಬಿದೆ
ಯಾವ ನಂಬಿಕೆಯೂ ಹಣ್ಣಾಗುತ್ತಿಲ್ಲ
ಮೋಜು ಮಸ್ತಿಯಲಿ ಸದಾ ಮುಳುಗಿ ಮರುಳಾಗಿದ್ದೇವೆ
ಯಾವ ತಿಳಿವೂ ಎಚ್ಚರಿಸುತ್ತಿಲ್ಲ
ಹಿಂಸೆ ಕೊಲೆ ದ್ವೇಷದಲ್ಲೆ ದೊಡ್ಡ ಖುಷಿ ಕಾಣುತ್ತಿದ್ದೇವೆ
ಯಾವ ಪ್ರೇಮವೂ ಬದುಕಿಸುತ್ತಿಲ್ಲ.
ಮಳೆ ಬೆಳೆ ಇಲ್ಲದೆ ಬೆಂದು ಬರಡಾಗುತಿದೆ ಈ ಇಳೆ
ಯಾವ ಮೋಡವೂ ಕಪ್ಪಾಗುತ್ತಿಲ್ಲ
ಸಾಮಾನ್ಯರ ಹೊಟ್ಟೆ ಬೆನ್ನಿಗಂಟಿ ಕಣ್ಣು ಬಾವಿಯಾಗಿದೆ
ಯಾವ ಅದೃಷ್ಟವೂ ಬಲಿಯುತ್ತಿಲ್ಲ.
ಶಿವೆ, ಬಾಳಿನ ದಾರಿಗೆ ನೀನೇ ಭರವಸೆಯಾದರೂ
ಯಾವ ಬದುಕೂ ಬದಲಾಗುತ್ತಿಲ್ಲ
ನಂಬಿ ನೆಚ್ಚಿಕೊಂಡ ಕಾಯಕದ ಬದುಕು ನಮ್ಮದು ಯಾವ ಬೆವರ ಹನಿಯೂ ಫಲಗೊಡುತ್ತಿಲ್ಲ.
——————————–
ಸುಜಾತ ಲಕ್ಷ್ಮೀಪುರ.