ಅನುವಾದ ಸಂಗಾತಿ
ಪುನರ್ಭವಿಸುವೆ.
ಇಂಗ್ಲೀಷ ಮೂಲ: ಮಾಯ ಆಂಗ್ಲೂ
ಕನ್ನಡಕ್ಕೆ –
ಪುನರ್ಭವಿಸುವೆ ನಾನು
ತುಳಿದರೂ ಅಡಿಯಿಂದಲೇ ಮೇಲೇಳುವ ಧೂಳಿನಂತೆ
ನಿಷ್ಠುರ ವಕ್ರ ಸೆಟೆಯಿಂದ
ಮುಚ್ಚಿಟ್ಟರೂ ಹೊಳೆಯುವ ಸತ್ಯದಂತೆ.
ನಿಮ್ಮ ಮುಖವಿಂದು ಕಳೆಗುಂದಿದೆಯಲ್ಲ?
ನನ್ನ ನಿರ್ಭಿಡೆಯ ನಗೆಯಿಂದಲೇ?
ಅಷ್ಟೈಷ್ವರ್ಯದೊಡತಿ ಎಂಬಂತಹ
ನನ್ನ ನಡೆಯಿಂದಲೇ?
ಆ ಚಂದ್ರಾರ್ಕರಂತೆ,
ಸಾಗರದ ನಿಶ್ಚಿತ ಸೂಳುಗಳಂತೆ,
ಉಕ್ಕೇರುವ ವಿಶ್ವಾಸದಂತೆ
ನಾ ಪುನರ್ಭವಿಸುವೆ.
ನಾ ತಗ್ಗಿ ಬಗ್ಗಿರಬೇಕೇ?
ಆಂತರ್ಯದಳಲಿಂದ ಕುಗ್ಗಿರಬೇಕೇ?
ನನ್ನ ಪ್ರತಿಷ್ಠೆ ಅಸಹನೀಯವೇ?
ನನ್ನ ಸಮೃದ್ಧಿಯ ಗಹಗಹಿಕೆ ಬಿರುಸೆ?
ನೀವೆನ್ನ ಮಾತುಗಳಿಂದ ವಧಿಸಬಹುದು,
ಕಂಗಳಿಂದ ಇರಿಯಬಹುದು,
ದ್ವೇಷದಿಂದ ಕೊಲ್ಲಬಹುದು,
ಆದರೂ ಮರುತನಂತೆ ನಾ ಪುನರ್ಭವಿಸುವೆ.
ಲಜ್ಜೆಯ ಇತಿಹಾಸದಿಂದ
ನಾ ಪುನರ್ಭವಿಸುವೆ.
ನೋವಿನ ನಿನ್ನೆಗಳಿಂದ
ನಾ ಪುನರ್ಭವಿಸುವೆ.
ನಾನಗಾಧ ಕಡುಕಪ್ಪು ಸಾಗರ
ಹೊರುವೆ ಉನ್ನತ ತರಂಗಗಳುಬ್ಬರ.
ಅನಂಗ ಸಾಮ್ರಾಜ್ಯದ ಅನಭಿಷಿಕ್ತರಾಣಿ,
ನಾನಾಡುವ ಶೃಂಗಾರ ನಾಟ್ಯಕ್ಕೆ
ಕಡುಸಿಟ್ಟೇ? ಆಶ್ಚರ್ಯವೇ?
ಅಂಜಿಕೆಯ ಇರುಳುಗಳನ್ನು ಹಿಂದಿಕ್ಕಿ
ನಾ ಪುನರ್ಭವಿಸುವೆ.
ಸುಸ್ಪಷ್ಟ ಬೆಳಗುಗಳಿಗಾಗಿ
ನಾ ಪುನರ್ಭವಿಸುವೆ,
ತೊತ್ತುಗಳ ಕನಸಾಗಿ, ವಿಶ್ವಾಸವಾಗಿ,
ಪೂರ್ವಜರ ಕೊಡುಗೆಗಳೊಂದಿಗೆ,
ಪುನರ್ಭವಿಸುವೆ,
ಪುನರ್ಭವಿಸುವೆ,
ಪುನರ್ಭವಿಸುವೆ.
ಡಾ.ಶ್ರೀಲಕ್ಷ್ಮಿ
Very nice.
ಧನ್ಯವಾದ.