ಸಾವಿತ್ರಮ್ಮ ಓಂ ಅರಸೀಕೆರೆ ನೀಳ್ಗವಿತೆ-ಕೊರತೆ

ಕಾವ್ಯ ಸಂಗಾತಿ

ಸಾವಿತ್ರಮ್ಮ ಓಂ ಅರಸೀಕೆರೆ

ಕೊರತೆ

At the window at sunset.

ಬೆಳಿಗ್ಗೆ ಬೇಗ ಎದ್ದೆ
ಗೋಧಿ ಹಿಟ್ಚನು ಮಿದ್ದೆ
ಆಲುಗಡ್ಡೆ‌ ಹುಡಿಪಲ್ಯದ‌ಸದ್ದು
ಎರಡನೂ‌ ಖುಷಿಯಾಗಿ ಮೆದ್ದು
ರುಚಿಯಾಗಿದೆ ಎಂದ್ಹೇಳದ ಕೊರತೆ/

ಹೂವುಗಳ ರಾಶಿಯು
ದಾರದ ಉಂಡೆಯು
ದಂಡೆ ಕಟ್ಟಲು ಸಮಯವು
ಇರಲು ಮುಡಿಗೇರಿಸೋ ಕೈಗಳ ಕೊರತೆ//

ಎಲ್ಲರಿಗೂ ತಿಂಡಿ ಬಡಿಸಿ
ಕಡೆಯಲ್ಲಿ ತಾ ಕುಳಿತೆ
ಇನ್ನೊಂದು ಚಪಾತಿ ಇರಿಸಿ
ಸ್ವಲ್ಪ ಪಲ್ಯವ್ಹಾಕಲೇ ಎನ್ನದ ಕೊರತೆ//

ಕಛೇರಿಗೆ‌ ಹೊರಟಾಗಿ‌ ಊಟದ ಡಬ್ಬಿಯ ನೀಡಿ
ಆಯ್ಕೆ‌ಮಾಡಿಟ್ಟ ಅಂಗಿ‌ ಪಾಯಿಜಾಮದು ಮಡಿ
ಕಳಚಿದಾ ಗುಂಡಿಯ ಸೂಜಿದಾರದಿ ಹೊಲೆಯುವಾ ಗಡಿಬಿಡಿ
ಅಷ್ಟು ಹತ್ತಿರ ನಾನಿದ್ದರೂ ಕ್ಷಣಮಾತ್ರದಿ ಅಪ್ಪುಗೆಯ ಕೊರತೆ//

ಸ್ವಚ್ಛಗೊಳಿಸಿದ ಕಾಲುಚೀಲ
ಕೊಟ್ಟು,
ಕಪ್ಪು ಬೂಟಿಗೆ ಹೊಳಪು ಮಾಡಿಟ್ಟು/
ಕರವಸ್ತ್ರ ಸರಿಮಡಿಚಿ ಜೇಬಲಿಟ್ಟು,
ಟಾಟಾ‌ ಮಾಡುವಾಗ ಅಭಿಮಾನದ ಕುಡಿನೋಟದ ಕೊರತೆ//

ಕಛೇರಿಯನು ತಲುಪಾಗಿ
ಬಹಳ ಕೆಲಸದಿ ಮುಳುಗಿ
ಸಮಯವದು ನಿಧಾನದಿ ಕರಗಿ
ತನ್ನ ನೆನೆದು ಬರಬಹುದೆಂಬ ಕರೆಯ ಕೊರತೆ//

ಅವನಿಗಾಗಿ ಬಿಸಿಬೇಳೆ ಬಾತು
ಇಷ್ಟಪಡುವ ಕೇಸರಿಬಾತು
ಎರಡು ಚಮಚೆ‌ ತುಪ್ಪಕೇ‌ ಸೋತು
ಊಟಮಾಡುವಾಗೊಮ್ಮೆ‌ ಬಹಳ ಚೆನ್ನಾಗಿದೆ ಎಂದು ಹೇಳದ ಕೊರತೆ//

ಹಬ್ಬದ ಇಂದಾದರೂ ಬರಬಹುದು ಬೇಗ
ಸಂಜೆ ಮುತ್ತೈದೆಯರಿಗೆ ಕುಂಕುಮ ನೀಡುವಾಗ
ಅಲಂಕರಿಸಿಕೊಂಡು ಸಂಭ್ರಮಿಸುವಾಗ
ಹಿಂದಿನಿಂದ ಬಂದು ಮೈಬಳಸದ ಕೊರತೆ//

ಪಟ್ಟಣದಿಂದ ಸಿಹಿ ಕಟ್ಚಿಸಿ ತಂದರೂ
ಮಕ್ಕಳಿಗೆ ಸಮನಾಗಿ ಹಂಚುತಿದ್ದರೂ
ಅಲ್ಲೇ ನನಗಾಗಿ ತಂದ ಚಿಕ್ಕಿಯ(ಕಡಲೇ ಮಿಠಾಯಿ)
ನಾ ನೋಡುತಿದ್ದರೂ
ಒಳಗೆ ತಂದು ನನಗೇ ಕೊಡದ ಕೊರತೆ//

ರಾತ್ರಿ ಹಬ್ಬದೂಟ ಮಾಡುವಾಗ
ಅತ್ತೆಮಾವರ ನಡುವಿರುವಾಗ
ಮಕ್ಕಳಿಗೆ ಹೋಳಿಗೆ ಹಾಕುವಾಗ
ತನಗೆ ಮತ್ತೊಂದು‌ ಕೇಳಿ ಹಾಕಿಸಿಕೊಳ್ಳದಾ ಕೊರತೆ//

ಎಲ್ಲ ಕೆಲಸ ಮುಗಿದು
ಸಾರು ಬಿಸಿ ಮಾಡಲು ಒಲೆ ಹಚ್ಚಿದ್ದು
ಹಾಲಿಗೆ ಹೆಪ್ಪು ಹಾಕಿ ಮುಚ್ಚಿದ್ದು
ಎಲೆಗೆ ಸುಣ್ಣಸವರಿ‌ ಅಡಿಕೆಯೊಂದಿಗೆ ತಾಂಬೂಲ ಕೊಟ್ಚಾಗ ‌ನೀನೂ‌ ಹಾಕಿಕೋ ಎನ್ನುವ ‌‌ ಕೊರತೆ//

ಮಕ್ಕಳ ಗೃಹ ಪಾಠ ಮಾಡಿಸುವಾಗ
ಗಣಿತ‌ ಹೇಳಿಕೊಡುವಾಗ
ವಿಜ್ಞಾನ ಚಿತ್ರ‌ ಬರೆಸುವಾಗ
ಇಂಗ್ಲೀಷ್‌ ಎಂ.ಎ.ಮಾಡಿದ ನನ್ನನ್ನೂ ಕೇಳೆನ್ನದ ಕೊರತೆ //

ಎಲ್ಲಾ ಕೆಲಸವ ಮುಗಿಸಿ
ಹಾಸಿಗೆಯ ಮೇಲುರುಳಿ
ಎಷ್ಟೊತ್ತಾದರೂ‌ ಅಲ್ಲಿಗೆ
ನನ್ನರಸಿ ಬಾರದ ಕೊರತೆ//

ಮಲಗಿದ ಸಮಯ ನಿಮಿಷದಿಂದ
ಗಂಟೆ ದಾಟಿದ‌ ಮೇಲೆ ತನ್ನ ಬರವಣಿಗೆ‌ ಕೆಲಸವನ್ನೆಲ್ಲಾ
ಮುಗಿಸಿ ಬಂದಾಗ ದೀಪ
ಆರಿಸದಾ ಕೊರತೆ//

ನಾನೇ ದೀಪವಾರಿಸಿ ಬಂದವಳ
ಕೊಸರಲೂ ಆಗದಂತೆ‌ ಬಿಗಿದಪ್ಪಿ
ಮಾತಾಡದಂತೆ ಅಧರಗಳ ಬಂಧಿಸಿ
ಕಿವಿಯಲ್ಲಿ ಪಿಸುಗುಟ್ಟಿದ್ದೆಂದರೆ
“ಬೆಳಿಗ್ಗೆಯಿಂದ ಎಷ್ಚು ಸತಾಯಿಸಿದೆ
ಅಲ್ಲವೇ,ಎಂತಹ ನೋಟ ನಿನ್ನದು,
ಎಲ್ಲರ ಮುಂದೆ‌ ಕಾಡಿಸುತ್ತೀಯಾ…….
ಇನ್ನೂ‌ ಏನೇನೋ‌ ಮಾತುಗಳು
ಇಲ್ಲಿ ಉಸಿರು ಕಟ್ಟಿಸುತ್ತಿರುವುದರಿಂದ ಗಾಳಿಯ ಕೊರತೆ//


ಸಾವಿತ್ರಮ್ಮ ಓಂ ಅರಸೀಕೆರೆ

Leave a Reply

Back To Top