ಜಯಂತಿ ಸುನಿಲ್-ಗಜಲ್

ಕಾವ್ಯ ಸಂಗಾತಿ

ಜಯಂತಿ ಸುನಿಲ್

ಗಜಲ್

ನಿನ್ಹೆಸರಿನ ದೀಪವನು ಎದೆಯಲಿ ಹಚ್ಚಿ ನಿತ್ಯ ಬೆಳಗುವುದು ಸುಲಭವಲ್ಲ ನೋಡು..
ಬದುಕು ಬೂದಿಯಾಗುವವರೆಗೆ ಈ ವೇದನೆಯ ಕಿಡಿಯಲಿ ದಹಿಸುವುದು ಸುಲಭವಲ್ಲ ನೋಡು..!!

ಒಡಕು ಪ್ರೇಮದ ಚೂರು ಹೃದಯವನ್ನೇ ಕತ್ತರಿಸಿತು ಗೆಳೆಯಾ…
ಹೆಪ್ಪುಗಟ್ಟಿದ ಆ ನಿನ್ನ ಹೃದಯದಲಿ ಕರುಣೆಯನು ಹುಡುಕುವುದು ಸುಲಭವಲ್ಲ ನೋಡು..!!

ಮನವನು ಬೆತ್ತಲೆಗೊಳಿಸುವ ಆ ಮೋಹಕ ಹಾದಿ ಒಂದಿಷ್ಟು ಹೆಚ್ಚಿಗೆ ಮದಿರೆ ಸವಿದಿದೆ…
ಮತ್ತೆ ಮತ್ತೆ ಎದುರುಗೊಳ್ಳುವ ಆ ಕಪಟದ ಮಾಯೆಯೆದುರು ಕಲ್ಲಾಗುವುದು ಸುಲಭವಲ್ಲ ನೋಡು..!!

ನೀನಿಲ್ಲದ ಸಂಜೆಗಳು ಮರಣಕೆ ಮುಖ ಮಾಡಿ ಕುಳಿತಂತಿವೆ…
ನೆರಳು ಬೆಳಕುಗಳ ಈ ನಶ್ವರ ಬದುಕಿನಲಿ ನರಳುವುದು ಸುಲಭವಲ್ಲ ನೋಡು..!!

ಪ್ರತಿ ವರ್ಷದ ಚೈತ್ರವಲ್ಲಾ ನಾನು ದುಃಖವನ್ನು ಕಳಚಿ,ಆನಂದವನು ಸಂಭ್ರಮಿಸಲು
ನೀನೇ ಆಡಿಸುತಿರುವ ದಿನಾ ಸಾಯೋ ಆಟದಲ್ಲಿ ದಾಳವಾಗುವುದು ಸುಲಭವಲ್ಲ ನೋಡು..!!

ಹೂವಿನ ಆತ್ಮಕ್ಕಷ್ಟೇ ಗೊತ್ತು ಇರಿವ ಮುಳ್ಳಿನ ನೋವು…
ನೂರು ಯಾತನೆಗಳನ್ನು ಮನದಲ್ಲಿರಿಸಿ ನಕ್ಕಂತೆ ನಟಿಸುವುದು ಸುಲಭವಲ್ಲ ನೋಡು..!!

ಈ ಕರಾಳ ವಿಪ್ಲವದ ಕತ್ತಲು ಇಲ್ಲಿಗೆ ಕೊನೆಯಾಗುತ್ತಿಲ್ಲಾ…
ಬೇಟೆಗೆ ಬಲಿಯಾಗುತಿಹ ಬದುಕಿನಿಂದ ಗುರಿತಪ್ಪಿಸಿ ವಿಧಿಯನು ಜಯಿಸುವುದು ಸುಲಭವಲ್ಲ ನೋಡು…!!


Leave a Reply

Back To Top