ಡಾ ಸುರೇಶ ನೆಗಳಗುಳಿಕವಿತೆ-ಸರಸಾಕಾಂಕ್ಷೆ

ಕಾವ್ಯ ಸಂಗಾತಿ

ಸರಸಾಕಾಂಕ್ಷೆ

ಡಾ ಸುರೇಶ ನೆಗಳಗುಳಿ

ಯಾಕೆ ಜಾಣೆ ಕೋಪವೇನು
ನಾನು ನಿನಗೆ ಬೇಡವೇನು
ಸರಸವಾಡಿ ನಲಿಯುತಿದ್ದ
ಕಾಲ ಮರೆತೆಯಾ

ಸಾಕೆ ನನ್ನ ಜೊತೆಯ ವಾಸ
ಬೇರೆ ಯಾರು ಇಹರು ಸನಿಹ
ಕದವ ಮುಚ್ಚಿದಂತೆ ನನ್ನ
ಮನಸ ತೊರೆದೆಯಾ

ನಿಮಿಷ ನಿಮಿಷ ಕಣ್ಣ ರೆಪ್ಪೆ
ಮುಚ್ಚಿ ತೆರೆವ ತರಹದಲ್ಲಿ
ನೆನಪಿಸುತ್ತ ಕರೆಯುತಿದ್ದ
ಭಾವ ಅಳಿಯಿತೇ

ಗಮಿಸುತಿದ್ದ ಗಮನಗಳನು
ಮೀಸಲಾಗಿ ಇಡುತಲಿದ್ದ
ನನ್ನ ನಿನ್ನ ಜೊತೆಯ ಸಂಗ
ಬೇಡವಾಯಿತೇ

ಮೆಚ್ಚುತಿದ್ದ ಬಣ್ಣಗಳನು
ಮನಕೆ ಹಚ್ಚಿ ಧರಿಸಿ ವಸನ
ಎದುರು ಬಂದು ಮುದವ ಕೊಟ್ಡ
ಚಣವು ಬೇಡವೇ

ಕಚ್ಚಿ ಕೊಟ್ಟ ಹಣ್ಣುಗಳನು
ತುಟಿಗೆ ಇರಿಸಿ ಅಧರಕಧರ
ಬೀಗ ಹಾಕಿ ಆಡಿದಾಟ
ತೊರೆದ ಪ್ರಣಯವೇ

ನಿನಗೆ ನಾನು ನನಗೆ ನೀನು
ಅದನು ಬಿಟ್ಟು ಬೇರೆ ಏನು
ಎನ್ನುತಿದ್ದ ಮುಖದ ವಾಣಿ
ಮರೆತೆಯೇತಕೆ

ಹನಿಸಯೊಲವ ಮನದ ಮನೆಯ
ಹಸನು ಮಾಡಲಾರೆಯೇನು
ಬಿಸಿಲು ಕುದುರೆಯಂತೆ ಈಗ
ಇರುವುದೇತಕೆ

ಬೆಸುಗೆ ಹಾಕಿದಂಥ ರೀತಿ
ಬಿಡದು ಬಂಧ ಮತ್ತು ಪ್ರೀತಿ
ಎನ್ನುತಿದ್ದ ಮಾತುಗಳನು
ನೆನಪು ಮಾಡಿಕೋ

ಒಸಗೆ ಇಹುದು ಸದಾ ನಿನಗೆ
ಶುಭವ ಕೋರುವಂಥ ಮತಿಗೆ
ಎಂಬ ನಿಜವ ತಿಳಿದು ಬೇಗ
ನನ್ನ ಸೇರಿಕೋ


Leave a Reply

Back To Top