ಭಾರತಿ ಆದೇಶ್ ಹೆಂಬಾ-ಹೀರೊ ನನ್ನಪ್ಪ

ಕಾವ್ಯ ಸಂಗಾತಿ

ಭಾರತಿ ಆದೇಶ್ ಹೆಂಬಾ

ಹೀರೊ ನನ್ನಪ್ಪ

ಓದಲು-ಬರೆಯಲು
ಕಲಿಸಿದ ಮೊದಲ ಗುರು
ನಗುವುದ ಕಲಿಸಿದ
ಮೊದಲ ಹೀರೋ
ತಲೆ ಬಾಚಿ ಪೌಡರ್ ಹಚ್ಚಿ
ಉಣಿಸಿ ಮತ್ತಿಟ್ಟು
ಶಾಲೆಗೆ ಕಳಿಸುತ್ತಿದ್ದ
ಅಮ್ಮನಂಥ ನನ್ನಪ್ಪನ
ಬಗ್ಗೆ ಬರೆಯಬೇಕಿದೆ ||

ಈ ಶಾಲೆ-ಓದು
ನನ್ನ ತಲೆಗೆ ಹತ್ತಿದ್ದು
ಅಷ್ಟಕ್ಕಷ್ಟೇ ಬಿಡಿ
ರಿಜಲ್ಟಿನಲಿ ನಾನು
ಮಹಾತ್ಮನ ಮೊಮ್ಮಗಳು ||

ಸೈಕಲ್ಲು ಕಲಿಸುತ್ತೇನೆಂದ ಅಪ್ಪ
ಬೀಳುವ ಮುನ್ನವೇ ಹೆದರಿದೆ
ಕೈಕಾಲು ಕೆತ್ತುವ ಮುನ್ನ
ಟಿಂಚರ್ ತಂದಿಟ್ಟುಕೊಂಡೆ
ನನ್ನ ಸ್ಥಿತಿ ನೋಡಿದಾ ಸೈಕಲ್ಲು
ಕೋಪಗೊಂಡಿತು
ನಿನ್ನ ಹತ್ತಿರವೂ
ಸುಳಿಯಲ್ಲ ನಾ ಎಂದಿತು
ಆ ಸೈಕಲ್ಲು ಅಣ್ಣನ ಪಾಲು
ನಾ ಸಿಟಿ ಬಸ್ಸಿನ ಪಾಲು ||

ಈಜು ಕಲಿಸುತ್ತೇನೆಂದ ಅಪ್ಪ
ಹೊಳೆ ನೀರು
ತುಂಬ ತಣ್ಣಗಿವೆ
ಬಿಸಿ ನೀರಿದ್ದರೆ ಚೆನ್ನಿತ್ತು
ಖಂಡಿತ
ಕಲೀತಿದ್ದೆ ಎಂದೆ
ಜುಳು ಜುಳು ಹರಿಯುತ್ತಿದ್ದ
ಗಂಗೆ
ಭೋರ್ಗರೆಯ ಹತ್ತಿದಳು !
ನನ್ನ ಈಜು ಕಲಿಕೆ ನೀರುಪಾಲು ||

ದಿನಗಳುರುಳುವುದ
ತಡೆಯಲಾಗಲ್ಲ ಯಾರಿಂದಲೂ
ಅಮ್ಮ ಕೈಗೆ ಸೌಟು ಕೊಟ್ಟಳು
ಅಪ್ಪ ಮದುವೆ ಮಾಡಿದ
ನಾನೀಗ ನನ್ನವರ ಪ್ರಾಣ ಕಾಂತೆ
ಅವರ ಮೆಚ್ಚಿನ
ಪಾಕ ಪ್ರವೀಣೆ.
ಬದುಕು ಇಷ್ಟೇನಾ ?
ನನ್ನ ಖಿನ್ನತೆ
ಕಲಿಯಬೇಕಿತ್ತು ಎನಿಸಿದಾಗೊಮ್ಮೆ
ಹೀರೋ ನನ್ನಪ್ಪ ನೆನಪಾಗುತ್ತಾನೆ ||


ಭಾರತಿ ಆದೇಶ್ ಹೆಂಬಾ

One thought on “ಭಾರತಿ ಆದೇಶ್ ಹೆಂಬಾ-ಹೀರೊ ನನ್ನಪ್ಪ

Leave a Reply

Back To Top