ಡಾ ಸಾವಿತ್ರಿ ಎಂ ಕಮಲಾಪೂರ-ಶಾಂತ ಸಾಗರ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಎಂ ಕಮಲಾಪೂರ

ಶಾಂತ ಸಾಗರ

ಶಾಂತಸಾಗರದಂತೆ
ಆಳ ನಿನ್ನೊಲವು
ಇಜುವರು ರೆಕ್ಕೆ
ಬಡಿದು ಹಾರುವ
ಹಕ್ಕಿಯಂತೆ
ಸೇರಿಸುವೆ ದಡ
ನಾವಿಕನಾಗಿ ….

ಇರಲಾರದು
ನಿನ್ನೊಡಲಿನಲಿ
ಕಸ ಕಡ್ಡಿ ದಡದಾಚೆ
ಶುದ್ಧ ಮನದ
ಮಗುವಿನಂತೆ…..

ತೂಗುವರು ತೊಟ್ಟಿಲನು
ಕೆಲವರು
ಚಿವುಟುವರು ಗಲ್ಲವನು
ಹಲವರು
ಕದಿಯುವರು ನಿನ್ನಾಳದ
ಮುತ್ತು ರತ್ನ ಹವಳ
ಕಡಲು ಗಳ್ಳರಂತೆ ……

ಧರಿಸಿ ಸಂಭ್ರಮಿಸಿ
ಮೆರೆದವರೇ ದೂಷಿಸುವರು
ನಿರಪರಾಧಿ ನೀನು
ನಿನ್ನಭಿಮಾನದ ಮನ
ಮರುಗುತ್ತಿದೆ
ತಾಯಿಯನ್ನು ಕಳೆದುಕೊಂಡ
ಮಗುವಿನಂತೆ ….

ನಿತ್ಯ ನಿರಂತರ
ಅಬ್ಬರದ ಅಲೆಗಳ
ಶಬ್ದದಲಿ ನಿಶ್ಯಬ್ದ ನಾಗಿ ಬಿಡು
ಮಲಗಿ ನಿದ್ರಿಸುತ್ತಿರುವ
ಮಗುವಿನಂತೆ …..

ನಿನ್ನಾಳದ ಗರ್ಭದಲಿ
ಸಾಕುವೆ ಮಧುರ
ಮಮತೆಯ ತಾಯೊಲವಿನಂತೆ
ಮೀನು ಮೊಸಳೆ
ಏಡಿ ನೀರಾವೆ
ಕಪ್ಪೆಗಳು ….

ಜಿಗಿಯುವರು ಆಚೆ
ಹೊಳೆದಾಟಿದ ಮೇಲೆ
ಅಂಬಿಗನ ಅವಶ್ಯಕತೆ
ಮರೆತು ಸಾಗುವ
ಮತ್ಸರದ ಮಲೀನತೆ
ತೊಳೆಯುವೆ ನೀನು
ಅವರಿವರೆನ್ನದೇ ….

ಮಿಯ್ಯುವರು ಶುದ್ಧರಾಗಿ
ನೆಪ ಮಾತ್ರಕೆ
ಪೂಜೆ ಪುನಸ್ಕಾರ
ಅರಿತು ನಡೆದರೂ
ಮೌನದಲಿ ತಲ್ಲೀನ
ನಿಶ್ಯಬ್ದ ಶಾಂತ ಸಾಗರ
ನಿನಗೆ ನೀನೇ ಸರಿಸಾಟಿ
ಬೇರಿಲ್ಲ ಯಾರೂ ….


ಡಾ ಸಾವಿತ್ರಿ ಎಂ ಕಮಲಾಪೂರ

Leave a Reply

Back To Top