ಎ.ಎನ್.ರಮೇಶ್. ಗುಬ್ಬಿ-ನಿ-ವೇದನೆ.!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ನಿ-ವೇದನೆ.!

ನೀನೆಷ್ಟು ಮುನಿದು ಸಾಧಿಸಿದರೂ
ನಾಚಿಕೆಯಿಲ್ಲದೆ ಸೋಲುತ್ತೇನೆ ಗೆಳೆಯ
ಸೋಲುವುದೇನು ಹೊಸತಲ್ಲ ನನಗೆ.!
ನಾ ಸೋತಷ್ಟು ನೀ ಸತಾಯಿಸಿದರೆ…
ಸಾಯುವುದು ನನ್ನೊಳಗಿನ ನಿನ್ನದೇ ಹೃದಯ.!

ನೀನೆಷ್ಟು ಇರಿದು ಅನುಮಾನಿಸಿದರೂ
ಬೇಸರಿಕೆಯಿಲ್ಲದೆ ಕ್ಷಮಿಸುತ್ತೇನೆ ಗೆಳೆಯ
ಕ್ಷಮಿಸುವುದೇನು ಹಿರಿದಲ್ಲ ನನಗೆ.!
ನಾ ಕ್ಷಮಿಸಿದಷ್ಟೂ ನೀ ಕಟುಕಾದರೆ…
ಕಡಿಯುವುದು ನನ್ನೊಳಗಿನ ನಿನ್ನದೇ ಬಂಧ.!

ನೀನೆಷ್ಟು ಜರಿದು ಅವಮಾನಿಸಿದರೂ
ಅಳುಕಿಲ್ಲದೆ ಆರಾಧಿಸುತ್ತೇನೆ ಗೆಳೆಯ
ಆರಾಧಿಸುವುದೇನು ಅತಿಶಯವಲ್ಲ ನನಗೆ.!
ನಾ ಆರಾಧಿಸಿದಷ್ಟೂ ನೀ ಉಪೇಕ್ಷಿಸಿದರೆ…
ಆರುವುದು ನನ್ನೊಳಗಿನ ನಿನ್ನದೇ ಒಲವದೀಪ.!

ನೀನೆಷ್ಟು ಸೆಟೆದು ಕಡೆಗಣಿಸಿದರೂ…
ಸಂಕೋಚವಿಲ್ಲದೆ ಶರಣಾಗುತ್ತೇನೆ ಗೆಳೆಯ
ಬಾಗುವುದಕ್ಕೇನು ಬಿಗುಮಾನವಿಲ್ಲ ನನಗೆ.!
ನಾ ಬಾಗಿದಷ್ಟೂ ನೀ ಬಿಂಕದಿ ಬೀಗಿದರೆ..
ಬರಡಾಗುವುದು ನನ್ನೊಳಗಿನ ನಿನ್ನದೇ ಭಾವ.!

ನೀನೆಷ್ಟು ತೊರೆದು ದೂರವಾದರೂ
ನಿತ್ಯ ನೆನೆದು ನುಡಿಯುತ್ತೇನೆ ಗೆಳೆಯ
ನೆನೆಯುವುದೇನು ನೋವಲ್ಲ ನನಗೆ.!
ನೆನೆದಷ್ಟೂ ನೀ ಅಸಡ್ಡೆಯಲಿ ನರಳಿಸಿದರೆ..
ನಂದುವುದು ನನ್ನೊಳಗಿನ ನಿನ್ನದೇ ನೆನಪು.!

ನೀನೆಷ್ಟೇ ಧಾರ್ಷ್ಟ್ಯದಿ ದೂಡಿದರೂ
ಸಿಡುಕದೆ ನಗುತ ಜೊತೆಯಾಗುತ್ತೇನೆ ಗೆಳೆಯ
ಒಡನಾಡುವುದೇನು ಮುಜುಗರವಲ್ಲ ನನಗೆ.!
ನಾ ಬಯಸಿ ಬಂದಷ್ಟೂ ನೀ ಧಿಕ್ಕರಿಸಿದರೆ…
ವಿರಾಗವಾಗುವುದು ನನ್ನೊಳಗಿನ ನಿನ್ನದೇ ಅನುರಾಗ.!


ಎ.ಎನ್.ರಮೇಶ್. ಗುಬ್ಬಿ.

Leave a Reply

Back To Top