ಡಾ ಅನ್ನಪೂರ್ಣ ಹಿರೇಮಠ-ಇಳಿದು ಬಾ ಗಂಗೆ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-ಇ

ಇಳಿದು ಬಾ ಗಂಗೆ

ಹರನ ಜಡೆಯಲ್ಲಿ ಕುಳಿತ ಗಂಗೆ
ಇಳಿದು ಆಗು ನೀ ಹರಿವ ತುಂಗೆ// ಪ//

ಬಾರೆ ಮಳೆಯೇ ಬಾರೆ ಮಳೆಯೇ
ಕರಿ ಮೋಡ ಹರಡಿ ಬಾನ ಮರೆ ಮಾಡಿ
ಗುಡುಗುಡಿಸಿ ಮಿಂಚು ಸೂಸಿ
ಧರೆಯ ತಣಿಸಲು ಇಳೆಯ ನಗಿಸಲು
ಬಾರೆ ಮಳೆ ಬಾರೆ ಮಳೆ ಬಾ ಬಾರೆ
ಮಣ್ಣ ಮುದ್ದಿಸುತ ಹಸಿರ ಚಿಗುರಿಸಲು ಬಾರೆ ಮಳೆಯೇ//

ಬಾರೆ ಮಳೆಯೇ ಇಳೆಯ ಕಳೆಯೇ
ಶಿವನ ಜಡೆ ಕೊಡವಿ ಹರಣ ಮುಡಿ ಹರವಿ
ಜಗಮಗಿಸಿ ಮಿಂಚು ಹಾಸಿ
ಉರಿವ ರವಿ ತಣಿಸಲು ಸುಡುವ ಮರ ಉಳಿಸಲು
ಹಸಿರು ಚಿಗುರಿಸುತ ಜೀವ ಉಳಿಸುತ
ಗಗನ ಪಥ ಸಂಚಲಿಸಿ ಮೋಡ ಸಡಿಲಿಸಿ
ಬಾರೆ ಮಳೆಯೇ ಬಾ ಬಾರೆ ಬಿರುಕು ನುಂಗಲು ಮಳೆಯೇ//

ಬಾರೆ ಮಳೆಯೇ ಜೀವ ಕಡಲೇ
ಮೌನ ಮುರಿದು ಕವಚ ಹರಿದು
ನಮ್ಮ ಪ್ರಮಾದಗಳ ಮನ್ನಿಸಿ
ಮಡಿಲ ತುಂಬಿಸಲು ಒಡಲ ನಗಿಸಲು
ಬಾನ ಅಂಚಿಂದ ಒಲವ ಹರಿಸುತ
ಬಯಲ ಬೆದರಿಸಿ ಸುಳಿಗಾಳಿ ಬೀಸಿ
ಬಾರೆ ಮಳೆಯೇ ಬಾ ಬಾರೆ ಧೂಳ ದಮಣಿಸಿ ಸುರಿ ಮಳೆಯೇ//

ಬಾರೆ ಮಳೆಯೇ ಉಸಿರ ನಿಧಿಯೇ
ಮೋಡ ಗರ್ಭವಾ ಧರಿಸಿ
ಪ್ರಸವ ವೇದನೆ ಸಹಿಸಿ ಸಹಿಸಿ
ತಂಪ ಹನಿಗಳ ಉದುರಿಸಿ
ನಿರಭ್ರತೆಯ ಪೊರೆ ಸರಿಸಿ ಮೆಲ್ಲ
ಮೃದು ಹೆಜ್ಜೆಗಳ ಭುವಿಯತ್ತ ಇಡುತ್ತ
ಬಾರೆ ಮಳೆಯೇ ಬಾ ಬಾರೆ ಕೊರಗು ನೀಗಿಸಿ ರೈತರಾ ಸಂತೈಸೆ,//


ಡಾ ಅನ್ನಪೂರ್ಣ ಹಿರೇಮಠ

2 thoughts on “ಡಾ ಅನ್ನಪೂರ್ಣ ಹಿರೇಮಠ-ಇಳಿದು ಬಾ ಗಂಗೆ

Leave a Reply

Back To Top