ಹನಿಬಿಂದು ಕವಿತೆ-ಬಾಳ ಕವನ

ಕಾವ್ಯ ಸಂಗಾತಿ

ಹನಿಬಿಂದು

ಬಾಳ ಕವನ

ಎಂದೂ ಸ್ಥಿರವಿಲ್ಲ!
ಬೇವು ಬೆಲ್ಲದ ಮಿಲನ
ಸುಖ ದುಖದ ಕವನ
ಮುಗಿಯದಿರಲಿ ಪಯಣ
ಕಿರಣ ಸ್ಪರ್ಶದ ಅನುರಣನ

ಗಂಗೆ ಎಕ್ಸ್ ಹರನು ವೈ
ಇಬ್ಬರೂ ಅರ್ಥವಾಗಲಾರರು
ಬೇಕೆಂದಾಗ ಬೇಡ
ಬೇಡ ಎಂದಾಗ ಬೇಕು
ನಿತ್ಯ ಒಡನಾಟದ ಮಂತ್ರ!

ಅವನು ಸುಮ್ಮನಾದಾಗ
ಅವಳ ನಗುವಿಗೆ ಬ್ರೇಕು!
ಅವಳು ದೂರ ಹೋದಾಗ
ಅವನ ಮನಕೆ ಪ್ರತಿ ಕ್ಷಣ ಬೇಕು!

ಓ ಬ್ರಹ್ಮನೇ
ಎಲ್ಲಿಯ ನಂಟು ಇದು?
ಕೋಟೆಯಲಿ ಗಂಟು ಬಿತ್ತೆ
ತಿರುವು ದಾಟಲೆ ಬೇಕಂತೆ
ಎಲ್ಲಾ ಹರಿಯ ಕೃಪೆಯಂತೆ!

ಉದಯಿಸಿದ ಒಲವಿಗೆ
ಸಾಕ್ಷಿ ಯಾರೋ??
ನೋಡಿದ ಹೀರೋ
ಮತ್ತು ಹೀರೋ ಇನ್ ಬೇರೋ!

ಬೇಕು ಬೇಡಗಳ
ತೂಗುಯ್ಯಾಲೆಯ ನಡುವೆ
ಮದಿರೆ ಎಲ್ಲಿಂದ ಬಂತೋ!
ನಿದಿರೆ ಕೆಡಿಸಲು..

ಗೆಳೆತನದ ಸೊಕ್ಕೇ
ಸಮಯದ ಕೈಗೊಂಬೆಯೇ
ಗಣಿತದ ಲಾಜಿಕ್ಕೇ?
ಗಂಡಿನ ಗುಂಡಿನ ಬಲವೇ!
ಈ ಒಲವೇ…
ಹೇಳೇ ಚೆಲುವೇ…

ಮತ್ತೊಂದು ಮಾತು!
ಜೀವನ ತೂಗುಯ್ಯಾಲೆಯಲಿ
ಪ್ರತಿಯೊಬ್ಬ ಜೀಕಲೇ ಬೇಕು
ಮೇಲೆ….ಕೆಳಗೆ..
ಗೊತ್ತು ಗುರಿ ಇಲ್ಲದೆ..
ಭೂಮಿಯಿಂದ
ಕದಲುವವರೆಗೆ…

ಬದುಕ ನಾವಿಕ ಯಾರು!
ಕೂಡಿಸುವವನು ಅವನೇ
ಕಳೆಯುವವನೂ ಅವನೇ
ಗುಣಿಸಿ ಭಾಗಿಸಿ ಸಮೀಕರಿಸಿ
ಜೋಡಿಸುವವನೂ ಅವನೇ!

ನಾವಿಲ್ಲಿ ಕೀಳು ಕುದುರೆಗಳು
ಆಡಿಸುವಂತೆ ಆಡುವ
ಕುಣಿಸಿದಂತೆ ಕುಣಿವ
ಉಸಿರ ಗೊಂಬೆಗಳು!

ಯಾವುದನ್ನೂ ನಿರ್ಣಯ
ಮಾಡಲಾಗದ ಮನಗಳು
ನೋವಲ್ಲು ನಗುವ ಕಾಣುವ
ಸದಾ ಉನ್ನತಿ ಬಯಸುವ
ಮೋಹಕ ತಾರೆಗಳು!

ಗಾಯವಾಗದೆ ಇರಲಿ
ವೇಣು ನಾದದಲಿ
ನಗೆ ಚೆಲ್ಲುತಿರಲಿ
ಸ್ನೇಹ ಚಿಮ್ಮುತಲಿ..

ಮತ್ತೇನಿದೆ!
ಏನು ಬೇಕಾಗಿದೆ?
ಒಂದಿಷ್ಟು ಸಾಂತ್ವನದ ಹೊರತಾಗಿ!

ಮುಖದಲಿ ಕಿರು ನಗು,
ಒಂದು ಹಿಡಿ ಪ್ರೇಮ ಅಷ್ಟೇ
ತಿಳಿಯಾದ ಸ್ನೇಹದ ಜೊತೆಗೆ…
ಪರಿಶುದ್ಧ ಒಲವಿನ ಒರತೆ
ಬರಬಾರದು ಕೊರತೆ..

————————–


ಹನಿಬಿಂದು

One thought on “ಹನಿಬಿಂದು ಕವಿತೆ-ಬಾಳ ಕವನ

  1. ಹೌದು
    ನಾವಿಲ್ಲಿ ಕೀಲು ಕುದುರೆಗಳಿಗೆ
    ಕುಣಿಸಿದಂತೆ ಕುಣಿವ
    ಗಾಳಿ ಗೊಂಬೆಗಳೆ
    ಗಾಳಿ ಕಳೆದ ಮೇಲೆ
    ಕೀಲು ಇಲ್ಲ ಆಡಿಸುವವ ಸಿಕ್ಕಲಿಲ್ಲ
    ಆಡಿದವನೂ ಇಲ್ಲ
    ಇರುವಷ್ಟು ಹೊತ್ತು ತುಸು ಪ್ರೀತಿ ವಸಿ ಒಲವು ಸಾಕು
    ಇನ್ನೇನು ಬೇಕು!
    ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ

Leave a Reply

Back To Top