ಅನುವಾದಿತ ಕವಿತೆ
ಹಮೀದಾ ಬೇಗಂ ದೇಸಾಯಿ
ಒಡೆಯನಿಲ್ಲದ ಒಂದು ಕೋಣೆಯ ಸ್ವಗತ…ಇಂಗ್ಲಿಷ್ ಕವಿತೆಯೊಂದರ ಪ್ರೇರಣೆ..)
ಮರೆಯಾದಿರೆಲ್ಲಿ….
ವರುಷಗಳೇ ಕಳೆದಿವೆ
ನಮ್ಮೊಡೆಯ ಮರೆಯಾಗಿ
ಕಾದಿಹೆವು ಕಾತುರದಿ
ಬಂದೇ ಬರುವನೆಂದು ;
ಸುಳಿಗಾಳಿ ಬೀಸಿ ಬರುತಿದೆ
ಪರದೆಗಳ ಮುತ್ತಿಕ್ಕಿ
ಮುಂಬೆಳಗಿನ ರವಿರಶ್ಮಿ
ಬೆಳಗಿಸಿದೆ ಕೋಣೆಯನು…
ಬಯಸಿದೆ ಸುಖಾಸೀನವು
ಒಡೆಯನ ಹಿತಸ್ಪರ್ಷವನು ;
ಉಪಹಾರದ ತಟ್ಟೆಯು,
ಮುಖವಾಸದ ಹರಿವಾಣ,
ಚಂದದ ಪೀಕದಾನಿಯು
ನೋಡುತಿವೆ ದಾರಿಯನು…
ಅದೆಷ್ಟೋ ರಾತ್ರಿಗಳು
ಒಡೆಯ ವಿರಮಿಸಿದ
ಪರ್ಯಂಕದ ಕುಸುರಿಗಳು
ನಿಟ್ಟುಸಿರು ಹಾಕುತಿವೆ…
ಬೇಡಿಕೊಳುವೆವು ನಾವು
ಬಂದ ನಿಮಗೆಲ್ಲ ನಮಿಸಿ
ನೋಡಿಹಿರಾ ನೀವಾದರೂ
ನಮ್ಮೊಡೆಯನನ್ನು…?
ನಮ್ಮೊಲವಿನ,
ನಮ್ಮ ಉಸಿರಾದ,
ನಮ್ಮೊಡೆಯ…ಮರೆಯಾದಿರೆಲ್ಲಿ….?
( ಒಡೆಯನಿಲ್ಲದ ಒಂದು ಕೋಣೆಯ ಸ್ವಗತ…ಇಂಗ್ಲಿಷ್ ಕವಿತೆಯೊಂದರ ಪ್ರೇರಣೆ..)
ಹಮೀದಾ ಬೇಗಂ ದೇಸಾಯಿ
ತುಂಬಾ ಚೆನ್ನಾಗಿದೆ
ಅಳಿ ಸಂಕುಳವೆ ಮಾಮರವೆ ಎಂಬ……ಅಕ್ಕನ ವಚನವನ್ನು ನೆನಪಿಗೆ ತಂದಿತು.
ಸ್ಪಂದನೆಗೆ ಧನ್ಯವಾದಗಳು ಸರ್.
ಹಮೀದಾ ಬೇಗಂ.
ನಿರ್ಜೀವಗಳ ಭಾವನೆಗಳ ಪ್ರಸ್ತುತಿ ಆಪ್ತವಾಗಿದೆ.
ಸ್ಪಂದನೆಗೆ ಧನ್ಯವಾದಗಳು ಸರ್.
ಹಮೀದಾ ಬೇಗಂ.
ಮಾತೃಭಾಷೆಗೆ ಬಹಳ ಅರ್ಥಪೂರ್ಣವಾಗಿ ತರ್ಜುಮೆ ಮಾಡಿರುವಿರಿ. ವಂದನೆಗಳು.
ಮೆಚ್ಚುಗೆಗೆ ಧನ್ಯವಾದಗಳು ತಮಗೆ
ಹಮೀದಾ ಬೇಗಂ.