ವಿಶಾಲಾ ಆರಾಧ್ಯ ಕವಿತೆ- ಕೂಸಿಗೆ

ಕಾವ್ಯ ಸಂಗಾತಿ

ವಿಶಾಲಾ ಆರಾಧ್ಯ

ಕೂಸಿಗೆ

ಕನಸಿನಲಿ ಬಂದು ತೋಳು ತುಂಬಿದವಳು
ಮೆದುವಾದ ಮೈಯ ತಾಗಿಸಿ ಮೈಗಪ್ಪಿದವಳು
ಕನವರಿಸಿ ಕಾದ ಮನಸಿಗೆ ಧನ್ಯತೆಯನಿತ್ತವಳು
ಮೆತ್ತನೆಯ ತುಟಿಗಳಲಿ ಮೂಕವಾಗಿ ಕರೆದವಳು

ಕಿವಿಯೋಲೆ ಮುಟ್ಟಿ ಬೇಕೆಂದು ಕಿತ್ತವಳು
ಆ ನೋವೇ ಹೂವಾದ ಅನುಭವ ತಂದವಳು
ಹಣೆಬೊಟ್ಟು ಬೆರಳೊಳಗೆ ಹಿಡಿಯಲನುವಾದಳು
ಸಿಗದ ಸಿಟ್ಟಿಗೆ ಹಣೆಗೆ ತಟ್ಟಿ ಕುಟ್ಟಿ ನಕ್ಕವಳು

ಜಿನುಗುವ ತುಟಿಜೇನನು ಗಲ್ಲಕ್ಕೆ ಒತ್ತಿದವಳು
ಪಿಳಿಪಿಳಿ ಕಂಗಳ ನನ್ನ ಕಂಗಳಲಿ ನೆಟ್ಟವಳು
ಕೊರಳ ಸುತ್ತಲೂ ಪುಟ್ಟ ಬೆರಳ ಕಚಗುಳಿಸಿದವಳು
ಬೆರಳ ಕಣ್ಣಿಗಿಟ್ಟು ‘ಹಾ’ ಎಂದರೆ ನೋಡಿ ನಕ್ಕವಳು

ಕರಗಳ ಖಾಲಿಬಿಟ್ಟು ಗೋಲಿ ಕಂಗಳನರಳಿಸಿ
ಬಾರದೆ ಕಾಣದೆ ತೋರದೆ ಮಾಣದೇ ಹೋದವಳು
ಎದೆಗೆ ಕಾದಕಾವಾಗಿ ನೆನಪಿಗೆ ಸವಿಯಾದಳು
ಹೊರನಾಡ ದೇವಿಯಂತೇ ಮನಗರ್ಭದೇ ನಿಂತವಳು!


ವಿಶಾಲಾ ಆರಾಧ್ಯ

Leave a Reply

Back To Top