ಅಂಕಣ ಸಂಗಾತಿ

ನನ್ನಿಷ್ಟದ ಪುಸ್ತಕ….

ಸುಧಾ ಪಾಟೀಲ

ಎ. ಪಿ. ಜೆ. ಅಬ್ದುಲ್ ಕಲಾಂ ವಿರಚಿತ

ನನ್ನ ಪಯಣ

ನನ್ನ  ಪಯಣ
ಎ. ಪಿ. ಜೆ. ಅಬ್ದುಲ್  ಕಲಾಂ
ವಸಂತ  ಪ್ರಕಾಶನ… ಜಯನಗರ,ಬೆಂಗಳೂರು
ಪುಸ್ತಕದ  ಬೆಲೆ….140  ರೂ

 “ನನ್ನ ಪಯಣ” ಕೃತಿ ಡಾ. ಎ. ಪಿ. ಜೆ. ಅಬ್ದುಲ್  ಕಲಾಂ  ಎನ್ನುವ  ರಾಮೇಶ್ವರದ  ಬಡ ಹುಡುಗನೊಬ್ಬ  ಪ್ರಖ್ಯಾತ  ವಿಜ್ಞಾನಿಯೂ
ದೇಶದ  ರಾಷ್ಟ್ರಪತಿಯೂ  ಆದಂತಹ  ಸ್ಫೂರ್ತಿದಾಯಕ
ಮನೋಜ್ಞ  ಕಥೆ. ಅದು ಕಲಾಂ ಅವರ ಸಂಕಲ್ಪಶಕ್ತಿ, ಧೈರ್ಯ, ನಿರಂತರ
ಪರಿಶ್ರಮ  ಹಾಗೂ  ಗೆಲುವಿನ  ಆಶಯವನ್ನು  ಹೊತ್ತ
ಕಥಾನಕವೇ  ಆಗಿದೆ. ಈ  ಕೃತಿಯಲ್ಲಿ ಡಾ. ಕಲಾಂ ಅವರು
ತಮ್ಮ  ಜೀವನದ  ಮುಖ್ಯ ಘಟನೆಗಳನ್ನು  ಅವು  ಚಿಕ್ಕ
ವಿದ್ದರೂ  ಅವಲೋಕಿಸಿ ಅವು  ಪ್ರತಿಯೊಂದೂ  ಹೇಗೆ
ತಮಗೆ  ಗಾಢವಾದ  ಪ್ರೇರಣೆ  ಒದಗಿಸಿತೆ0ಬುದನ್ನು
ಓದುಗರಿಗೆ  ತಿಳಿಸುತ್ತಾರೆ  ; ತಮ್ಮ  ಮೇಲೆ  ಗಾಢವಾಗಿ
ಪ್ರಭಾವ  ಬೀರಿದ  ವ್ಯಕ್ತಿಗಳ  ಬಗ್ಗೆ   ಅಕ್ಕರೆಯಿಂದ
 ಮಾತನಾಡಿದ್ದಾರೆ  ; ಅಂತಹ  ಮಹನೀಯರ
ಸಂಗದಲ್ಲಿ ತಾವು ಕಲಿತ  ಪಾಠಗಳೇನೆಂದು ತಿಳಿಸಿದ್ದಾರೆ
ಗಾಢವಾದ  ದೈವಭಕ್ತಿಯ  ತಂದೆ, ಕರುಣಾಳು  ತಾಯಿ,
ತಮ್ಮ  ವಿಚಾರಗಳನ್ನೂ  ಜೀವನ  ದೃಷ್ಟಿಯನ್ನೂ  ರೂಪಿಸಿದ  ಮಾರ್ಗದರ್ಶಿಗಳು …. ಇಂತಹ  ತನ್ನ  ಸಮೀಪವರ್ತಿಗಳ   ಆಪ್ತ   ಚಿತ್ರಣವೊಂದನ್ನು ಬಿಡಿಸಿಟ್ಟಿದ್ದಾರೆ.

ಬಂಗಾಳ ಕೊಲ್ಲಿಯ ತೀರದ ಸಣ್ಣ ಪಟ್ಟಣವೊಂದರಲ್ಲಿ
ಬಾಲ್ಯವನ್ನು  ಕಳೆದು, ಒಬ್ಬ  ವಿಜ್ಞಾನಿಯಾಗುವ ಹಾಗೂ
ನಂತರ  ನಾಡಿನ  ರಾಷ್ಟ್ರಪತಿಯಾಗುವ  ಮಾರ್ಗದಲ್ಲಿನ
ಹೋರಾಟಗಳ  ಹಾಗೂ  ತ್ಯಾಗಗಳ    ಹೃದಯಸ್ಪರ್ಶಿ ಕಥನ  ಇಲ್ಲಿದೆ.

ಭಾವುಕವೂ  ಪ್ರಾಮಾಣಿಕವೂ  ತೀರಾ  ವೈಯಕ್ತಿಕವೂ
ಆಗಿರುವ  ಅವರ  ಪಯಣ  ಒಂದು  ಅಪರೂಪದ
ಅಂತೆಯೇ  ಸಮೃದ್ಧ   ಬದುಕಿನ    ಮನೋಜ್ಞ  ಕಥೆಯಾಗಿದೆ ; ಹಾಗೆಯೇ  ಮಕ್ಕಳಿಗೆ  ಹಾಗೂ  ಯುವ
ಜನತೆಗೆ  ಮಾರ್ಗದರ್ಶನ ಒದಗಿಸುವ ಕಥೆಯಾಗಿಯೂ
ಮೈದಾಳಿದೆ.

ತಮಿಳುನಾಡಿನ  ರಾಮೇಶ್ವರದಲ್ಲಿ    1931 ರ  ಅಕ್ಟೋಬರ್  15 ರಂದು  ಜನಿಸಿದ  ಡಾ. ಎ. ಪಿ. ಜೆ.
ಅಬ್ದುಲ್  ಕಲಾಂ  ಅವರು  ಮದ್ರಾಸ್  ಇನ್ಸ್ಟಿಟ್ಯೂಟ್
ಆಫ್  ಟೆಕ್ನಾಲಜಿಯಲ್ಲಿ  ಏರೋನಾಟಿಕಲ್  ಇಂಜಿನಿಯರಿಂಗ್  ಕಲಿತರು. ಡಾ. ಕಲಾಂ  ಅವರು  ಭಾರತದ ಪ್ರಖ್ಯಾತ ವಿಜ್ಞಾನಿ. ಅವರು ದೇಶವಿದೇಶಗಳ
ಒಟ್ಟು 45 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ
ಪಡೆದಿದ್ದಾರೆ.  ಅವರಿಗೆ   ಭಾರತ   ಸರ್ಕಾರದ  ಪದ್ಮಭೂಷಣ  ( 1981 ), ಪದ್ಮ ವಿಭೂಷಣ ( 1990 )
ಹಾಗೂ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ
ಭಾರತ ರತ್ನ ( 1997 ) ಸಂದಿವೆ. ಅವರಿಗೆ  ಕೊಡಮಾಡ
ಲಾಗಿರುವ  ಹಲವಾರು  ಅಂತರರಾಷ್ಟ್ರೀಯ  ಪುರಸ್ಕಾರ
ಗಳಲ್ಲಿ   ಎರಡನೇ  ಕಿಂಗ್  ಚಾರ್ಲ್ಸ್  ಪದಕ  ( 2007 )
ವುಡ್ರೋ  ವಿಲ್ಸನ್  ಪ್ರಶಸ್ತಿ  ( 2008 ), ಹೂವರ್  ಪ್ರಶಸ್ತಿ  ( 2008 ) ಹಾಗೂ  ಇಂಟರ್ ನ್ಯಾಷನಲ್ ವಾನ್
ಕರ್ಮನ್  ವಿಂಗ್ಸ್  ಪ್ರಶಸ್ತಿ  ( 2009 ) ಗಳೂ  ಸೇರಿವೆ.

ಡಾ. ಕಲಾಂ  ಅವರು  2002 ರ ಜುಲೈ  25 ರಂದು  ಭಾರತದ ಹನ್ನೊಂದನೆಯ ರಾಷ್ಟ್ರಪತಿ ಹುದ್ದೇಗೇರಿದರು
ಅವರ  ಗುರಿ ಮತ್ತು ಮಹಾತ್ವಾಕಾಂಕ್ಷೆ    ಭಾರತವನ್ನು
ಅಭಿವೃದ್ಧಿ   ಹೊಂದಿದ   ದೇಶವನ್ನಾಗಿ ರೂಪಾ0ತರಿಸುವುದೇ  ಆಗಿದೆ.

” ನನ್ನ  ಪಯಣ  ” ಪುಸ್ತಕವು   ಕನಸು   ನನಸಾಗುವ ಹಾದಿಯಲ್ಲಿ  ತನ್ನ  ಪ್ರಥಮ  ಮುದ್ರಣವನ್ನು  2013 ರಲ್ಲಿ  ಕಂಡಿದೆ. ನಂತರ  ನಾಲ್ಕನೆಯ  ಮುದ್ರಣ  2015
ರಲ್ಲಿ  ಆಗಿದೆ. ಇದನ್ನು  ಅಬ್ದುಲ್  ಕಲಾಂ  ಅವರು
”  ಕಳೆದ  ಎರಡು  ದಶಕಗಳಲ್ಲಿ   ನಾನು  ಭೇಟಿಯಾಗಿ
ಸಂವಾದ  ನಡೆಸಿದ  ಹದಿನಾರು  ದಶಲಕ್ಷ  ಯುವ  ಜನತೆಗೆ  ”   ಅರ್ಪಿಸಿದ್ದಾರೆ.  ಇದರಲ್ಲಿ  ನನ್ನ  ದೊಡ್ಡ
ಮಗ   ಅಭಯ   ಪಾಟೀಲ್  ಸಹ  ಒಬ್ಬನು  ಎಂದು
ನಾನು  ಹೆಮ್ಮೆಯಿಂದ   ಹೇಳಲು  ಬಯಸುತ್ತೇನೆ.
ಬೆಳಗಾವಿಯಲ್ಲಿ  ನನ್ನ  ಮಗ  ಆರ್. ಎಲ್. ಎಸ್  ಕಾಲೇಜಿನಲ್ಲಿ   ಪಿ. ಯು. ಸಿ. ಓದುವಾಗ   ಅಂದಿನ
ರಾಷ್ಟ್ರಪತಿ  ಅಬ್ದುಲ್  ಕಲಾಂ   ಅವರ  ಜೊತೆಗೆ  ಸಂವಾದ  ಮಾಡಲು  ಆಯ್ಕೆಯಾಗಿ  ಸಂವಾದದಲ್ಲಿ
ಪಾಲ್ಗೊಂಡದ್ದು  ಇನ್ನೂ  ಹಸಿರಾಗಿ  ಮನದಲ್ಲಿ  ಒಂದು  ಗೌರವದ   ಮತ್ತು ಅಭಿಮಾನದ   ನೆನಪು.

ಇದರಲ್ಲಿ   ಪ್ರಸ್ತಾವನೆ  ಮತ್ತು  ಆಭಾರ  ಕೂಡಿಸಿ  ಒಟ್ಟು
ಹದಿನಾಲ್ಕು  ಭಾಗಗಳಿವೆ….

ನನ್ನ  ತಂದೆಯವರ   ಮುಂಜಾನೆಯ  ನಡಿಗೆ
ದೋಣಿ
ಎಂಟರ  ವಯಸ್ಸಿನ   ಕೆಲಸದ  ಹುಡುಗ
ಮೂವರು  ವಿಶಾಲ  ಹೃದಯಿಗಳು  ಸಮಸ್ಯೆಯೊಂದನ್ನು  ಬಿಡಿಸಿದ  ಬಗೆ
ನನ್ನ   ತಾಯಿಯೂ  ಅಕ್ಕನೂ
ನನ್ನ  ಮೊದಲ  ಮಾರ್ಗದರ್ಶಿ
ನಾನು  ಸೋತಾಗ
ನನ್ನ   ಇಷ್ಟದ   ಪುಸ್ತಕಗಳು
ಬೆಂಕಿಯೊಡನೆ  ಮುಖಾಮುಖಿ
ನನ್ನ  ಮಾರ್ಗದರ್ಶಿ
ವಿಜ್ಞಾನದಲ್ಲಿನ  ಬದುಕು
ದಾರಿ  ಬಲು   ದೂರ

ಅಬ್ದುಲ್  ಕಲಾಂ  ಅವರು  ತಮ್ಮ  ಮೊದಲನೆಯ ಅಧ್ಯಾಯದಲ್ಲಿಯೇ   ತಮ್ಮ  ತಂದೆಯ  ಬೆಳಗಿನ
ನಡಿಗೆ  ಮತ್ತು  ತಮ್ಮ  ದೈನಂದಿನ  ನಡಿಗೆಯನ್ನು  ಹೇಳುತ್ತಾ ಹೇಳುತ್ತಾ ಆಧ್ಯಾತ್ಮದ ಕಡೆಗೆ ಹೊರಳುತ್ತಾರೆ.
” ನಮ್ಮನ್ನು  ಕಾಯುವ ಒಂದು  ದೈವೀ  ಶಕ್ತಿ ಇದೆ. ಅದು
ನಮ್ಮನ್ನು  ನಮ್ಮ   ಕಷ್ಟ,   ದುಃಖ,   ಸೋಲುಗಳಿಂದ  ಸುಲಲಿತವಾಗಿ  ಮೇಲಕ್ಕೆ  ಎತ್ತುತ್ತದೆ.  ನಾವು  ನಮ್ಮ ಮನಸ್ಸನ್ನು  ತೆರೆದು  ಆ  ಶಕ್ತಿಯನ್ನು  ಒಳಗೆ  ಸೇರಿಸಿ
ಕೊಂಡರೆ  ಅದು  ನಮ್ಮನ್ನು    ನಮ್ಮ   ನೈಜ    ಗುರಿಗೆ  ತಲುಪಿಸುತ್ತದೆ.   ನಿಮ್ಮನ್ನು   ಹಿಂದಕ್ಕೆಳೆಯುವಂತಹ  ಕಟ್ಟುಗಳಿ0ದ  ಬಿಡಿಸಿಕೊಂಡು  ಆ  ದೈವೀ   ಶಕ್ತಿಯ
ಕೈಗೆ   ಮನವನ್ನು   ಒಪ್ಪಿಸಿದರೆ  ನೀವು  ನಿಜವಾದ  ಸುಖದ ಹಾಗೂ ನೆಮ್ಮದಿಯ ತಾಣವನ್ನು ತಲುಪುವಿರಿ “
ಎಂದು  ತಾವು   ಹತಾಶೆಗೊಂಡಾಗಲೆಲ್ಲ   ಈ  ಮೇಲಿನ  ಮಾತುಗಳನ್ನು  ನೆನಪಿಸಿಕೊಳ್ಳುತ್ತೇನೆ   ಎಂದು ನಮ್ಮ ಜೊತೆಗೆ  ಹಂಚಿಕೊಳ್ಳುತ್ತಾರೆ.

ಕಲಾಂ  ಅವರು  ತಮ್ಮ  ಬಾಲ್ಯದ  ಬಗೆಗೆ  ಹೇಳುತ್ತಾ
” ನಾನು  ಬೆಳೆಯುತ್ತಿದ್ದ  ಕಾಲವನ್ನು  ಕಳೆದದ್ದು ರಾಮೇಶ್ವರ  ದ್ವೀಪದಲ್ಲಿ. ಆದ್ದರಿಂದ  ಸಮುದ್ರವು ನಮ್ಮ
ಬದುಕಿನ   ಒಂದು    ಅವಿಭಾಜ್ಯ   ಅಂಗವಾಗಿತ್ತು.
ಸಮುದ್ರದ  ಏರು -ಇಳಿತಗಳು ,  ದಂಡೆಗೆ    ಬಂದು  ಬಡಿಯುತ್ತಿದ್ದ  ಅದರ  ಅಲೆಗಳ  ಆರ್ಭಟ , ಪಾಂಬನ್
ಸೇತುವೆಯ  ಮೇಲೆ ಸಾಗುತ್ತಿದ್ದ ರೈಲು ಗಾಡಿಯ ಸದ್ದು
ಊರಿನ ಮೇಲೆ ಸದಾ ಸುತ್ತುತ್ತಿದ್ದ ಹಕ್ಕಿಗಳು,ಗಾಳಿಯಲ್ಲಿ
ನಿರಂತರವಾಗಿ  ಇರುತ್ತಿದ್ದ  ಉಪ್ಪಿನ  ವಾಸನೆ…. ಈ  ದೃಶ್ಯ
ಗಳೂ  ಸದ್ದುಗಳೂ  ನನ್ನ  ಎಳವೆಯ  ನೆನಪುಗಳಾಗಿ
ಇನ್ನೂ   ಹಸಿ-ಹಸಿಯಾಗಿ  ನನ್ನ   ಭಾವಕೋಶವನ್ನು  ತುಂಬಿವೆ.   ಸಮುದ್ರವು  ನಮ್ಮ  ಸುತ್ತಲೂ  ವ್ಯಾಪಿಸಿ
ಕೊಂಡಿದೆಯೆ0ಬ  ವಾಸ್ತವ   ಮಾತ್ರವೇ   ಅಲ್ಲದೆ ನಮಗೂ  ನಮ್ಮ    ಅಕ್ಕಪಕ್ಕದವರಿಗೂ  ಅದು ಜೀವನೋಪಾಯದ  ಮಾರ್ಗವೂ  ಆಗಿತ್ತು. ಅಲ್ಲಿನ
ಪ್ರತಿಯೊಂದು  ಮನೆಯೂ  ಸಮುದ್ರದೊಡನೆ  ಸಂಬಂಧವನ್ನು   ಹೊಂದಿತ್ತು.   ಕೆಲವರಿಗೆ  ಮೀನುಗಾರಿಕೆಯ  ಮೂಲಕ , ಇನ್ನೂ  ಕೆಲವರಿಗೆ  ದೋಣಿ  ಒಡೆತನದ  ಮೂಲಕ. ಎಂದು  ಅಂದಿನ
ಸುತ್ತಮುತ್ತಲ  ಪರಿಸರದ   ಚಿತ್ರಣವನ್ನು  ನಮ್ಮ  ಮುಂದೆ  ಬಿಚ್ಚಿಡುತ್ತಾ  ಹೋಗುತ್ತಾರೆ.

ಮುಂದೆ  ತಮ್ಮ  ಎಂಟನೆಯ  ವಯಸ್ಸಿನಲ್ಲಿಯೇ ವೃತ್ತ
ಪತ್ರಿಕೆ  ವಿತರಣೆ  ಮಾಡುವ  ಸಂತೋಷದಾಯಕವಾದ  ಕೆಲಸವನ್ನು  ಈ  ಕೆಳಗಿನ  ರೀತಿಯಲ್ಲಿ  ವ್ತಕ್ತಪಡಿಸಿದ್ದಾರೆ
”  ನನ್ನ  ಉತ್ಸಾಹಕ್ಕೆ  ಮೇರೆಯೇ  ಇರಲಿಲ್ಲ. ಆಗ  ನನಗೆ
ಬರೇ  ಎಂಟು  ವರ್ಷ , ಆದರೆ  ನಾನು   ಕುಟುಂಬದ  ವರಮಾನಕ್ಕೆ  ಕೊಡುಗೆ  ನೀಡುವವನಾಗಿದ್ದೆ !  ನನ್ನ
ಅಜ್ಜಿ  ಹಾಗೂ  ತಾಯಿಯ  ಊಟದ  ಎಲೆಗಳಲ್ಲಿ   ಆಹಾರದ  ಪ್ರಮಾಣ  ಕಡಿಮೆಯಾಗತೊಡಗಿದ್ದನ್ನು
ಅನೇಕ  ದಿನಗಳಿ0ದ  ನಾನು  ಗಮನಿಸಿದ್ದೆ. ಹಂಚಲು ಆಹಾರ  ಕಡಿಮೆ ಇರುತ್ತಿದ್ದುದೇ  ಇದಕ್ಕೆ ಕಾರಣವಾಗಿತ್ತು
ಮಕ್ಕಳಿಗೂ , ಗಂಡಸರಿಗೂ  ಊಟ   ಆದಮೇಲೆ  ಹೆಂಗಸರಿಗೆ   ಸಿಗುವ  ಆಹಾರ  ಕಡಿಮೆ  ಬೀಳುತ್ತಿತ್ತು.
ನಾವು  ಮಕ್ಕಳಂತೂ  ಅರೆ ಹೊಟ್ಟೆ ಉಂಡದ್ದು ಇರಲಿಲ್ಲ
ಹೀಗಾಗಿ  ಈ   ಕೆಲಸ  ಒಪ್ಪಿಕೊಂಡೆ”  ಎನ್ನುವ ಮೂಲಕ
ತಮ್ಮ   ಮನೆಯ  ಪರಿಸ್ಥಿತಿ  ಮತ್ತು  ಚಿಕ್ಕವನಿದ್ದಾಗಲೇ
ದುಡ್ಡು ಗಳಿಸಿ  ತನ್ನ  ಮನೆಯವರಿಗೆ  ಹೇಗೆ  ಅನುಕೂಲ
ಮಾಡಿದೆ  ಅಂತ   ಹೆಮ್ಮೆಯಿ0ದ  ಹೇಳುತ್ತಾರೆ.

ಅಬ್ದುಲ್  ಕಲಾಂ  ಅವರಿಗೆ  ತಮ್ಮ ತಾಯಿಯ  ಬಗೆಗೆ
ಬಹಳ   ಅಭಿಮಾನ. ಇದನ್ನು  ಅವರ    ಮಾತಿನಲ್ಲೇ
ಕೇಳೋಣ. ”  ಅನೇಕ  ವರ್ಷಗಳ  ಹಿಂದೆ ನಾನು’ ನನ್ನ
ತಾಯಿ ‘  ಎಂಬ  ಶೀರ್ಷಿಕೆಯ  ಒಂದು  ಪದ್ಯವನ್ನು ಬರೆದೆ.  ಅದರ  ಮೊದಲ  ಸಾಲುಗಳು  ಹೀಗಿವೆ…

ಸಮುದ್ರದ  ತೆರೆಗಳು , ಬಂಗಾರದ  ಮರಳು ,
ಯಾತ್ರಿಕರ  ಭಕ್ತಿ , ರಾಮೇಶ್ವರದ  ಮಸೀದಿ  ರಸ್ತೆ ,
ಇವೆಲ್ಲವೂ  ವಿಲೀನವಾದರೆ , ನನ್ನ  ತಾಯಿ !

ನನ್ನ  ತಾಯಿ  ಸೌಮ್ಯ  ಸ್ವಭಾವದ , ಲೋಕಾನುಭವ
ವಿದ್ದ, ಧಾರ್ಮಿಕ ಮನೋವೃತ್ತಿಯ ಮಹಿಳೆಯಾಗಿದ್ದರು
ತಂದೆಯಂತೆ  ಅವರೂ  ಇಸ್ಲಾಂನ  ನಿಯಮಗಳನ್ನು
ಚಾಚೂ  ತಪ್ಪದೆ  ಅನುಸರಿಸುವವರಾಗಿದ್ದರು. ಅವರು
ದಿನಕ್ಕೆ  ಐದು  ಬಾರಿ  ನೆಲದಲ್ಲಿ  ಮೊಣಕಾಲೂರಿ ಕುಳಿತು
ನಮಾಜು ಮಾಡಿ ಅಲ್ಲಾನನ್ನು ಪ್ರಾರ್ಥಿಸುವಾಗ ಅವರ
ಮುಖದಲ್ಲಿ  ಅತ್ಯಂತ  ಉತ್ಕಟ  ಭಕ್ತಿಯೂ ಶಾಂತಿಯೂ
ಅಲ್ಲದೆ   ಬೇರೇನೂ   ಇರುತ್ತಿರಲಿಲ್ಲ. ಅವರು   ಒಂದು ದೊಡ್ಡ  ಕುಟುಂಬದ  ಬೇಕು -ಬೇಡಗಳನ್ನು   ನೋಡಿ
ಕೊಳ್ಳಬೇಕಾಗಿದ್ದುದರಿಂದ  ಅವರ  ಶಕ್ತಿಯೆಲ್ಲ ಅದಕ್ಕೇ
ವ್ಯಯವಾಗುತ್ತಿತ್ತು… ಎನ್ನುವುದರ  ಮೂಲಕ  ತಮ್ಮ
ತಾಯಿಯ  ಬಗೆಗೆ  ಇರುವ  ಉತ್ಕಟ  ಪ್ರೀತಿಯನ್ನು
ತೋರಿಸುತ್ತಾರೆ.

ಅಬ್ದುಲ್ ಕಲಾಂ ಅವರು ತನ್ನ  ಪ್ರೀತಿಯ ಅಕ್ಕ ಜೊಹ್ರಾ
ಬಗೆಗೆ  ಮಾತನಾಡುತ್ತಾ   ಮಹಿಳೆಯ  ಬಗೆಗೆ  ಬಹಳ  
ಕಳಕಳಿ   ಮತ್ತು  ಕಾಳಜಿಪೂರ್ವಕವಾಗಿ  ಇಲ್ಲಿ  ನಮ್ಮೊಂದಿಗೆ   ಹೇಳಬಯಸುತ್ತಾರೆ. ” ನನ್ನ    ತಾಯಿ
ಯಂತೆಯೇ  ಜೊಹ್ರಾ  ಕೂಡಾ  ರಾಮೇಶ್ವರದಲ್ಲಿಯೇ
ತನ್ನ  ಜೀವನವನ್ನು  ಕಳೆದಳು.   ತಾಯಿಯಂತೆಯೇ  ಅವಳೂ ಸಹ ಸಮರ್ಥಳೂ ,ಕೆಲಸಗಳಲ್ಲಿ ಪರಿಣಿತಳೂ
ಹಸನ್ಮುಖಿಯೂ,  ನೇರ    ನಡೆ -ನುಡಿಯವಳೂ ಆಗಿದ್ದಳು. ಈ   ಮಹಿಳೆಯರಿಬ್ಬರನ್ನೂ  ನಾನು ಭಾರತೀಯ  ಮಹಿಳೆಯಲ್ಲಿರುವ  ಚೈತನ್ಯಕ್ಕೂ ಸಾಮರ್ಥ್ಯಕ್ಕೂ  ಪ್ರತಿನಿಧಿಗಳೆಂದು ಪರಿಗಣಿಸುತ್ತೇನೆ.
ಈ ಭಾರತೀಯ  ಮಹಿಳೆಯನ್ನು ಅವಳ ಸ್ಥಿತಿ -ಗತಿಗಳು
ಎಂದೂ  ಬಹುದಿನ  ಬಂಧಿಸಿಡಲಾರದು.  ತನ್ನದೇ  ಕನಸುಗಳನ್ನು, ಮಹತ್ವಾಕಾಂಕ್ಷೆಗಳನ್ನು ಪರಿಗಣನೆಗೆ
ತೆಗೆದುಕೊಳ್ಳದೇನೇ ಅವಳು ಜೀವನ ಸಾಗಿಸುತ್ತಿರುತ್ತಾಳೆ

ಅವಳು  ತನ್ನ  ಗಂಡನ  ಮಹತ್ವಾಕಾಂಕ್ಷೆಯ ಬಗ್ಗೆಯೂ
ಮಕ್ಕಳ  ಕ್ಷೇಮಾಭ್ಯುದಯದ   ಬಗ್ಗೆಯೂ  ಆಲೋಚನೆ
ಮಾಡುತ್ತಾಳೆ. ಆಕೆಗೆ  ತನ್ನ  ತಂದೆಯ , ಅಣ್ಣ-ತಮ್ಮಂದಿರ
ಹಾಗೂ  ಅಕ್ಕತಂಗಿಯರ  ಮುಂದೆ, ತನ್ನ  ಬೇಕು, ಬೇಡ
ಗಳು  ಹಿಂದೆ. ಅವಳ ಸ್ವಂತ ಕನಸುಗಳು  ಏನಾದಾವು?
ಈ  ವಿಷಯ ನಾನು  ಅನೇಕ  ಬಾರಿ ಯೋಚಿಸಿದ್ದೇನೆ ,
ಅಚ್ಚರಿಪಟ್ಟಿದ್ದೇನೆ. ವಿಧಿ ,ಸಂಪ್ರದಾಯ ಹಾಗೂ  ಪರಿಸ್ಥಿತಿ
ಗಳು ಸದಾ ಅವಳನ್ನು  ಪರೀಕ್ಷೆಗೆ ಒಡ್ದುತ್ತಲೇ ಇರುತ್ತವೆ
ಅವಳೇ  ದುಃಖಿಸಬೇಕು, ಹೊಂದಾಣಿಕೆ  ಮಾಡಿಕೊಳ್ಳ
ಬೇಕಾದುದೂ ಅವಳೇ, ಉಳಿತಾಯವೂ ಅವಳಿಂದಲೇ
ಅದಕ್ಕೆ  ಹೊಸ  ವಿಧಾನಗಳನ್ನು  ಅವಳೇ ಹುಡುಕಬೇಕು
ಆದರೂ  ಕೊನೆಗೆ  ಅವಳೇ    ತನ್ನ   ಕುಟುಂಬವನ್ನೂ ,
ಪ್ರೀತಿಪಾತ್ರರಾದವರನ್ನೂ  ಅಪಾಯದಿಂದ  ಪಾರು
ಮಾಡುತ್ತಾಳೆ. ವಿಘ್ನಗಳನ್ನು  ನಿವಾರಿಸುತ್ತಾಳೆ. ಅದನ್ನು
ಅವಳು  ಬಲು  ಪ್ರೀತಿಯಿಂದ  ಮಾಡುತ್ತಾಳೆ. ಅವಳ  ಆ
ಪ್ರೀತಿ  ಯಾರ  ಹೃದಯವನ್ನಾದರೂ  ಕರಗಿಸುತ್ತದೆ.

ಅಬ್ದುಲ್ ಕಲಾಂ ಅವರು ಮುಂದುವರೆದು ಪುಸ್ತಕಗಳ
ಬಗೆಗೆ  ಮಾತನಾಡುತ್ತಾ…. ” ನಾನು  ಭಾರತದಲ್ಲಿ  ಎಲ್ಲೇ
ಆಗಲಿ ಯುವಕರನ್ನು ಭೇಟಿಯಾದಾಗ ಅವರಿಗೆ ನಾನು
ಕೇಳುವ ಒಂದು ಸಾಮಾನ್ಯವಾದ ಪ್ರಶ್ನೆ  ” ನಿಮ್ಮಇಷ್ಟದ
ಪುಸ್ತಕ  ಯಾವುದು ? ಎಂಬುದು. ಎಂದು ಹೇಳುತ್ತಾ
ನನಗೆ ಅತ್ಯಂತ ಪ್ರಿಯವಾದುದು , ಅಥವಾ ನನ್ನ ಮೇಲೆ
ಆಳವಾದ  ಪರಿಣಾಮವನ್ನು  ಬೀರಿದುದು ಯಾವುದು
ಎಂದು   ಕೇಳಿದರೆ  ನಾನು  ಮೂರು     ಪುಸ್ತಕಗಳನ್ನು
ಹೆಸರಿಸುತ್ತೇನೆ.

ಮೊದಲನೆಯದು…’  ಲೈಟ್ಸ್  ಫ್ರಮ್  ಮೆನಿಲ್ಯಾ0ಪ್ಸ್.’
ಇದನ್ನು  ಸಂಪಾದಿಸಿದವರು  ಲಿಲಿಯನ್  ಐಷ್ಲರ್ ವಾಟ್ಸನ್. ಇದನ್ನು  ನಾನು ಮೊದಲಿಗೆ  ಓದಿದ್ದು 1953
ರಲ್ಲಿ.  ಇದು  ನನಗೆ  ನಾನು  ಹಿಂದೆ  ಹೇಳಿದ  ಮದ್ರಾಸಿನ
ಅದೇ  ಹಳೆ  ಪುಸ್ತಕಗಳ  ಅಂಗಡಿಯಲ್ಲಿ  ಸಿಕ್ಕಿತು. ನಾನು
ಈ  ಪುಸ್ತಕವನ್ನು  ನನ್ನ  ಜತೆಗಾರನೆಂದೇ  ತಿಳಿದಿದ್ದೇನೆ
ನಾನು ಇದನ್ನು ಅನೇಕಬಾರಿ ಓದಿದ್ದೇನೆ. ಪ್ರೇರಣೆಯನ್ನು
ನೀಡುವ ಉತ್ಕೃಷ್ಣಪುಸ್ತಕ ಎಂದು ಪರಿಗಣಿತವಾಗಿರುವ
ಲೈಟ್ಸ್  ಫ್ರಮ್  ಮೆನಿಲ್ಯಾ0ಪ್ಸ್  ಹಲವಾರು ಲೇಖಕರ
ಕಥೆಗಳ  ಸಂಗ್ರಹ. ವಿವಿಧ  ಲೇಖಕರು  ಬರೆದ  ಹಲವು
ಕತೆಗಳನ್ನು   ಸಂಪಾದಕ  ಲಿಲಿಯನ್    ಜತನದಿಂದ
ಸಂಗ್ರಹಿಸಿದ್ದಾರೆ.   ಈ  ಕಥೆಗಳನ್ನು  ಬರೆದ  ಸಂದರ್ಭ
ಯಾವುದು,   ಹಿನ್ನೆಲೆ  ಏನು,  ಅವುಗಳಿಂದ  ಕಲಿಯ
ಬೇಕಾದ ಪಾಠ ಏನು ಎಂದು ವಿವರಣೆ ನೀಡಿ ಉಪಕಾರ
ಮಾಡಿದ್ದಾರೆ. ಅನೇಕ  ಸಂದರ್ಭಗಳಲ್ಲಿ ಈ ಪುಸ್ತಕದಲ್ಲಿ
ಬರುವ ಸನ್ನಿವೇಶಗಳು ನನ್ನನ್ನು ವಿಷಾದದ ಕೂಪದಿ0ದ
ಮೇಲಕ್ಕೆತ್ತಿ ಬೆನ್ನು ತಟ್ಟಿ  ಮತ್ತೆ ಕೆಲಸಕ್ಕೆ  ಹಚ್ಚಿವೆ. ನನಗೆ
ಸಲಹೆ, ಮಾರ್ಗದರ್ಶನ  ಬೇಕಾದಾಗ  ಅವುಗಳ ಮೊರೆ
ಹೋಗಿದ್ದೇನೆ.  ನಾನು   ಭಾವುಕನಾಗಿ ,  ದಾರಿ  ತಪ್ಪಿ
ಸಂಚಾರಿಸಿದಾಗ  ಇಲ್ಲಿನ    ಸನ್ನಿವೇಶಗಳು   ನನ್ನ  ಆಲೋಚನೆಯಲ್ಲಿ   ಸಮತೋಲನ   ತಪ್ಪದಂತೆ ಎಚ್ಚರಿಸಿವೆ.

ನನ್ನ ವಿಚಾರಗಳ ಮೇಲೆ  ಪ್ರಭಾವ  ಬೀರಿದ ಎರಡನೇ ಪುಸ್ತಕ ‘ ತಿರುಕ್ಕುರಲ್ ‘ ಎರಡು ಸಾವಿರ ವರ್ಷಗಳಿಗೂ
ಹಿಂದೆ    ತಿರುವಳ್ಳುವಾರ್   ಕವಿ  ಇದನ್ನು  ಬರೆದರು.
ಇದರಲ್ಲಿ 1330 ಸೂಕ್ತಿಗಳು  ಅಥವಾ  ದ್ವಿಪದಿಗಳಿವೆ.
ತಮಿಳಿನಲ್ಲಿ  ಇದನ್ನು ಕುರಲ್  ಅನ್ನುವರು. ಈ  ಕಾವ್ಯವು  ಚರ್ಚಿಸದಿರುವ  ವಿಷಯವೇ ಇಲ್ಲ. ಜೀವನದ
ಎಲ್ಲಾ ವಿಚಾರಗಳು ಇದರಲ್ಲಿವೆ. ಇದು ತಮಿಳು ಸಾಹಿತ್ಯ
ರಾಶಿಯಲ್ಲಿನ   ಮೇರು   ಕೃತಿ. ಇದು  ನನ್ನ   ಜೀವನಕ್ಕೆ
ಒಂದು  ಆಚಾರ  ಸಂಹಿತೆಯನ್ನು  ಒದಗಿಸಿದೆ.  ಇದು  
ಮನಸ್ಸಿಗೆ    ಉಲ್ಲಾಸ  ನೀಡುತ್ತದೆ , ಅದನ್ನು  ಹದಗೊಳಿಸುತ್ತದೆ.

ನಾನು  ಗುರುತಿಸಲು  ಬಯಸುವ  ಮೂರನೆಯ ಪುಸ್ತಕ
ನೊಬೆಲ್ ಪ್ರಶಸ್ತಿ ಪುರಸ್ಕೃತ ಹಾಗೂ ತತ್ವಜ್ಞಾನಿಯಾಗಿ
ಪರಿವರ್ತಿತರಾದ  ವೈದ್ಯ ಅಲೆಕ್ಸಿಸ್  ಕ್ಯಾರೆಲ್   ಅವರ
‘  ಮ್ಯಾನ್ ದಿ ಅನ್ ನೋನ್  ‘ಶರೀರಕ್ಕೂ ಮನಸ್ಸಿಗೂ
ಒಟ್ಟಿಗೇ  ಚಿಕಿತ್ಸೆ  ಮಾಡಿದಾಗ  ಮನುಷ್ಯನನ್ನು  ಹೇಗೆ
ರೋಗಮುಕ್ತನನ್ನಾಗಿ  ಮಾಡಬಹುದೆಂದು  ಇದರಲ್ಲಿ
ವಿವರಿಸಿದ್ದಾರೆ. ಮನುಷ್ಯನ  ಶರೀರವನ್ನು  ಕುರಿತಾದ
ಅವರ  ವಿವರಣೆ   ಹಾಗೂ    ವಿಶ್ಲೇಷಣೆ    ಅತ್ಯುತ್ತಮ
ಮಟ್ಟದ್ದು. ಮಾನವನ  ಶರೀರ  ಎಷ್ಟು ಬುದ್ಧಿವಂತಿಕೆಯ
ಹಾಗೂ  ಸುಸಂಘಟಿತ  ವಸ್ತುವಾಗಿದೆ  ಎಂದು ಇದರಲ್ಲಿ
ತಿಳಿಸಲಾಗಿದೆ. ಈ  ಪುಸ್ತಕವನ್ನು ಎಲ್ಲರೂ, ಅದರಲ್ಲೂ
ಮುಖ್ಯವಾಗಿ    ವೈದ್ಯವಿಜ್ಞಾನವನ್ನು   ಕಲಿಯಲಿಚ್ಚಿಸು
ವವರು   ಓದಬೇಕೆಂಬುದು  ನನ್ನ  ಅಭಿಪ್ರಾಯ “

ಇದರ ಜೊತೆಗೆ ಇಲ್ಲಿ ಕಾವ್ಯದ ಬಗೆಗೂ  ತಮ್ಮ ಒಲವನ್ನು
ಹೇಳಹೊರಟಿದ್ದಾರೆ. ” ಸಾಹಿತ್ಯದೊಂದಿಗಿನ ನನ್ನ ಹೊಕ್ಕು
ಬಳಕೆಯಲ್ಲಿ ನನಗಿಷ್ಟವಾದ ಮೊದಲ ವಿಭಾಗವೇ ಕಾವ್ಯ
ಟಿ. ಎಸ್. ಎಲಿಯಟ್, ಲೂವಿಸ್  ಕ್ಯಾರಲ್   ಹಾಗೂ
ವಿಲಿಯಮ್  ಬಟ್ಲರ್  ಯೇಟ್ಸ್  ಕವಿಗಳ  ಸಾಲುಗಳು
ನನ್ನ    ಮನದಲ್ಲಿ   ಮತ್ತೆ   ಮತ್ತೆ  ಕಾಣಿಸಿಕೊಳ್ಳುತ್ತವೆ.
ಜೀವನದ   ವಿವಿಧ   ಘಟ್ಟಗಳಿಗೂ    ಘಟನೆಗಳಿಗೂ
ಅರ್ಥವನ್ನು ಹುಡುಕುವ ಪ್ರಯತ್ನದಲ್ಲಿ ಈ   ಕವಿಗಳ
ಸಾಲುಗಳು ನನ್ನ  ನೆರವಿಗೆ  ಬರುತ್ತವೆ. “

ಮುಂದೆ ತಮ್ಮ ಜೀವನದಲ್ಲಿ ಬಂದ ಮಾರ್ಗದರ್ಶಕರ
ಬಗೆಗೆ   ಹೀಗೆ   ಹೇಳುತ್ತಾರೆ  ” ಗುರುಗಳು  ಹಾಗೂ
ಮಾರ್ಗದರ್ಶಿಗಳು  ನಮ್ಮ  ಜೀವನಕ್ಕೆ  ವಿವಿಧ  ಹಂತ
ಗಳಲ್ಲಿ   ಬರುತ್ತಾರೆ. ಬಾಲಕನಾಗಿದ್ದಾಗ  ನಾನು  ಮಾರ್ಗ
ದರ್ಶನವನ್ನು  ಪಡೆದಿದ್ದು ನನ್ನ  ಶಾಲಾ ಗುರುಗಳಿಂದ
ಹಾಗೂ  ತಂದೆ-ತಾಯಿಗಳಿಂದ. ಮುಂದೆ ನಾನು ಬಾಲ್ಯ
ದಿಂದ ಯುವಕನಾಗುವ  ನಿರ್ಣಾಯಕ  ವರ್ಷಗಳಲ್ಲಿ
ನನ್ನ    ಆಪ್ತಮಿತ್ರನೂ  ಭಾವನೂ  ಆದ  ಅಹ್ಮದ್
ಜಲಾಲುದ್ದೀನ್  ನನಗೆ  ದಾರಿ    ತೋರಿಸಿದ.   ಮುಂದೆ
ನನ್ನ  ವೃತ್ತಿಯ  ಪ್ರಾರಂಭದಲ್ಲಿ  ನಾನು  ಡಾ.. ವಿಕ್ರಂ
ಸಾರಾಭಾಯಿ  ಅವರ0ತಹ  ವ್ಯಕ್ತಿಯೊಬ್ಬರ  ಕಕ್ಷೆಯಲ್ಲಿ
ಬಂದದ್ದು  ನನ್ನ  ಜೀವನದ  ಮಹತ್ತರ  ಅದೃಷ್ಟವೆಂದೇ
ಹೇಳಬೇಕು. ”  ಇವರನ್ನೆಲ್ಲ  ಕಲಾಂ  ಅವರು  ತುಂಬು
ಹೃದಯದಿಂದ  ನೆನೆಯುತ್ತಾರೆ.

ಇಸ್ರೋದಿಂದ ತಮ್ಮ ವಿಜ್ಞಾನದ ಪ್ರಪಂಚದ ಪಯಣದ
ಬಗೆಗೆ  ಇಲ್ಲಿ  ನಮ್ಮೊಂದಿಗೆ  ಹಂಚಿಕೊಳ್ಳುತ್ತಾರೆ.
”  ಇಸ್ರೋ ದಿಂದ  ನಾನು  ಡಿಆರ್ ಡಿಓ ಗೆ  ಹೋದೆ.
ಅಲ್ಲಿ ಭಾರತದ ಮೊತ್ತ ಮೊದಲ ದೇಶೀಯ ಕ್ಷಿಪಣಿಗಳ
ಶ್ರೇಣಿಯಾದ  ಪೃಥ್ವಿ, ತ್ರಿಶೂಲ್, ನಾಗ್  ಹಾಗೂ  ಅಗ್ನಿ
ಗಳನ್ನು ನಿರ್ಮಿಸಿದ ತಂಡಗಳಲ್ಲಿ ನಾನೂ ಭಾಗವಹಿಸಿದೆ
ಅವುಗಳನ್ನು   ಹೇಗೆ   ನಿರ್ಮಿಸಲಾಯಿತು  ಹಾಗೂ ಅವುಗಳು  ನಮಗೆ  ತೋರಿಸಿದ  ಮಾರ್ಗಗಳೇನು
ಎಂಬುದನ್ನು  ನಾನು  ಹಿಂದೆಯೂ  ಬೇರೆಡೆ ಬರೆದಿದ್ದೇನೆ
ಅವುಗಳಲ್ಲಿ  ಕೆಲಸ  ಮಾಡುತ್ತಿದ್ದಾಗ  ವಿಜ್ಞಾನ  ಹಾಗೂ
ರಾಕೆಟ್  ತಂತ್ರಜ್ಞಾನದ  ಹೊಸ  ಮಜಲುಗಳ  ಬಗ್ಗೆ
ತಿಳಿದು  ಅಳವಡಿಸಿಕೊಂಡುದಲ್ಲದೆ  ಆವಿಷ್ಕಾರಗಳನ್ನು
ಮಾಡಲು , ಹೆಚ್ಚು  ಪರಿಣಾಮಕಾರಿಯಾಗಿ  ನಾಯಕತ್ವ
ವಹಿಸಲು, ಹೆಚ್ಚು ಉತ್ತಮವಾಗಿ ಸಂಹವನ ಮಾಡಲು
ಹಾಗೂ   ವೈಫಲ್ಯ   ಮತ್ತು   ಯಶಸ್ಸುಗಳೆರಡನ್ನೂ ನಿರ್ವಿಕಾರಚಿತ್ತದಿಂದ  ಸ್ವೀಕರಿಸಲು  ಕಲಿತೆ. “

ಪುಸ್ತಕದ  ಕೊನೆಯಲ್ಲಿ ಏನು ಹೇಳಿದ್ದಾರೆನ್ನುವುದನ್ನು  
ಅವರದೇ  ಮಾತಿನಲ್ಲಿ ಅವರ ಮನದ ಇಂಗಿತವನ್ನು ತಿಳಿಯೋಣ.” ಕಠಿಣ ದುಡಿಮೆ, ಧರ್ಮ ಶ್ರದ್ಧೆ ,ಅಧ್ಯಯನ
ಹಾಗೂ  ಕಲಿಕೆ, ಕಾರುಣ್ಯ ಹಾಗೂ  ಕ್ಷಮೆ… ಇವೇ  ನನ್ನ
ಜೀವನದ  ಆಧಾರ  ಶಿಲೆಗಳು. ಈ  ಗುಣವಿಶೇಷಗಳ
ಮೂಲ  ಯಾವುದು  ಎಂದು ನಾನು  ಈಗ   ಜಗತ್ತಿ
ನೊಂದಿಗೆ  ಹಂಚಿಕೊಂಡಿದ್ದೇನೆ. ಯಾರದ್ದೇ  ಆದರೂ
ಪೂರ್ಣಪ್ರಮಾಣವಾಗಿ ಬದುಕಿನ ಬಗ್ಗೆ ಇತರರೊಂದಿಗೆ
ಮಾತನಾಡುವಾಗ  ಅದೊಂದು ವಿಚಾರಗಳ  ಹಾಗೂ
ಭಾವನೆಗಳ ಅಮೂಲ್ಯವಾದ ಒಡವೆಗಳ ಪೆಟ್ಟಿಗೆಯನ್ನು
ತೆರೆದಂತಿರುತ್ತದೆ. ಅವು   ಜೀವನವೆಂಬ    ಅದ್ಭುತಕ್ಕೆ  ಮೆರುಗನ್ನು  ನೀಡುತ್ತವೆ. ಇದರ   ಮೇಲೆ   ಅವುಗಳು
ನನ್ನ  ಓದುಗರ  ಕನಸುಗಳಿಗೆ  ರೆಕ್ಕೆ  ಹಚ್ಚಿ    ಹಾರಲು
ಸಹಾಯ  ಮಾಡಿದರೆ  ವಿಧಿಯು  ನನ್ನ    ಪಾಲಿಗೆ  ಸೂಚಿಸಿದ  ಕಾರ್ಯಯೋಜನೆಯಂತೆ  ನನ್ನ  ಸಣ್ಣ
ಪಾತ್ರವೊಂದನ್ನು  ನಿರ್ವಹಿಸಿದ್ದೇನೆ  ಎಂದು ಅಂದುಕೊಳ್ಳುತ್ತೇನೆ “

ನೀವೂ   ಎಲ್ಲರೂ   ಸಹ   ಒಮ್ಮೆ  ಓದಲೇಬೇಕಾದ
ಪುಸ್ತಕ  ”  ನನ್ನ  ಪಯಣ   “


ಸುಧಾ  ಪಾಟೀಲ್

ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂaಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )

Leave a Reply

Back To Top