ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಸಮಾಜಿಕ ಭದ್ರತೆ ಯೋಜನೆಗಳ ಜಾರಿಗೆಯೂ

ಕುಹಕ ಮಾತುಗಳೂ….

5 ನೇ ವಯಸ್ಸಿನ  ವೃದ್ಧ ತನ್ನ ಇಡೀ ಬದುಕಿನ್ನು ಮಕ್ಕಳು, ಸಂಸಾರಕ್ಕಾಗಿ ಹಣ್ಣು ಹಣ್ಣಾಗಿ ದುಡಿದು ಮುಪ್ಪಿನಲ್ಲಿ  ಮಕ್ಕಳ  ಮುಂದೆ ಕೈಚಾಚುವ ದೀನಸ್ಥಿತಿ…! ಅವನಿಗೋ ಮಕ್ಕಳನ್ನು ಕೇಳಲು ಸ್ವಾಭಿಮಾನದ ಅಡ್ಡಿ.

ಇದು ಒಂದು ಸನ್ನಿವೇಶ ವಾದರೆ…

ಇನ್ನೊಂದು..

ದುಡಿಯುವಾಗ ಅವನು ಒಂದು ಕಾಲು ಅಪಘಾತದಲ್ಲಿ ಕಳೆದುಕೊಂಡು ದುಡಿಯುವ ಶಕ್ತಿಯನ್ನೇ ಕಳೆದುಕೊಂಡಾಗಿನಿಂದ ತನ್ನನ್ನು ನೆಚ್ಚಿಕೊಂಡ ಸಂಸಾರ ಮತ್ತು ತನ್ನ ಬದುಕು ಅನಾಥವಾಯಿತು ಎನ್ನುವ ಭಾವ ಸದಾ ಕಾಡುತ್ತದೆ…!!  ಅವನಿಗೂ ಮಕ್ಕಳು, ಮಡದಿಯನ್ನು ಸಾಕುವ ಚಿಂತೆ…!!

ಮತ್ತೊಂದು ಸನ್ನಿವೇಶ..

ಕುಡುಕ ಗಂಡನನ್ನು ಕಟ್ಟಿಕೊಂಡು ಅವನು ಬೈದರೂ, ಬಡಿದರೂ ಹಿಂಸಿಸಿದರೂ ಸಹಿಸಿಕೊಂಡು, ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಸಂರಕ್ಷಣೆಗಾಗಿ ತನ್ನ ಬದುಕನ್ನೇ ಸವೇಸಿದ ಅಲ್ಲದೇ ಯೌವನದಲಿಯೇ ಗಂಡನನ್ನು ಕಳೆದುಕೊಂಡು ವಿಧವೆಯ ಪಟ್ಟ ಕಟ್ಟಿಕೊಂಡ ಮಹಿಳೆಯ ನೋವಿನ ಚಿಂತಾಜನಕ ಪರಿಸ್ಥಿತಿಯ ನೋಟಗಳು…!!

ಮಗದೊಂದು ನೋಟ..

 ತನ್ನದಲ್ಲದ ತಪ್ಪಿಗೆ ದೇಹದಲ್ಲಾದ ಬದಲಾವಣೆಗೆ ಒಳಪಟ್ಟು, ಜೈವಿಕ ಕಾರಣಗಳಿಗಾಗಿ ಹೆಣ್ಣೂ ಅಲ್ಲದ ಗಂಡೂ ಅಲ್ಲದ ಬದುಕನ್ನು ಆರಿಸಿಕೊಂಡ ಜೀವಗಳು  ಇತ್ತ ಕುಟುಂಬದಿಂದಲೂ, ಸಮಾಜಿಕದಿಂದಲೂ ತಿರಸ್ಕೃತಗೊಂಡ ನತದೃಷ್ಟ ವರ್ಗವೊಂದು ಸದಾ ಪರಿತಪಿಸುತ್ತಿರುತ್ತದೆ..!!

ಸಮಾಜಿಕ ಬದುಕಿನಲ್ಲಿ ಮಕ್ಕಳು, ವೃದ್ದರು, ಅಂಗವಿಕಲರು, ಮಹಿಳೆಯರು, ಬಡವರು, ಕಾರ್ಮಿಕರು, ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ದಮನಿತರು,  ಹೀಗೆ ಸಾಮಾಜಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯುತ್ತಲೇ ಸದಾ ಬಡತನವನ್ನು ಅನುಭವಿಸುವ, ಬದುಕಿನಲ್ಲಿ ಪರಿತಪಿಸುವ ಒಂದು ಸಾಮಾಜಿಕ ವಲಯವನ್ನು ನಾವು ನೋಡುತ್ತೇವೆ.

 “ದುಡಿಯುವವರು ದುಡಿಯುತ್ತಲೇ ಇರುತ್ತಾರೆ” ಎನ್ನುವ ಮಾತಿನಂತೆ ಅವರು ದುಡಿದು ಗಳಿಸಿದ ಸ್ವಲ್ಪ ಹಣದಲ್ಲಿಯೇ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಯಾವತ್ತೂ ಶ್ರೀಮಂತರಾಗುವುದಿಲ್ಲ. ಬಂಡವಾಳ ಹೂಡಿ ಕಾರ್ಖಾನೆಗಳನ್ನು ಸ್ಥಾಪಿಸಿದ ಶ್ರೀಮಂತನಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಬಳಸಿಕೊಂಡು ಅಲ್ಲದೇ ಕಾರ್ಮಿಕರ ದುಡಿತದ ಬೆವರಹನಿಯಿಂದ ಬಂದ ಫಲವನ್ನು ಉಣ್ಣುತ್ತಾ ಶ್ರೀಮಂತಿಕೆಯಿಂದ ಮೆರೆಯುವ ಶ್ರೀಮಂತ ವರ್ಗ ಶ್ರೀಮಂತನಾಗುತ್ತಲೇ ಹೋಗುತ್ತಿದ್ದಾನೆ..!!

 ಸಮಾಜಿಕ ವರ್ಗ ವ್ಯವಸ್ಥೆಯಲ್ಲಿ ಸಂಪತ್ತನ್ನು ಸಮಾನವಾಗಿ ಹಂಚುವ ‘ಸಮಾಜವಾದ’ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸವಕಲು ನಾಣ್ಯವಾಗಿರುವುದು ವ್ಯವಸ್ಥೆಯ ದುರಂತ ಎಂದೇ ಹೇಳಬಹುದು.

ಆದಾಗಿಯೂ ಸಾಮಾಜಿಕವಾಗಿ ಶೋಷಣೆಗೆ ಒಳಗಾದ ದಮನಿತರೆಲ್ಲರಿಗೂ ಅಲ್ಪಸ್ವಲ್ಪವಾದರೂ ಮರುಕ ಪಡುವ, ಅವರಿಗಾಗಿ ಕಾರ್ಯಕ್ರಮಗಳನ್ನ ರೂಪಿಸುವ, ಯೋಜನೆಗಳನ್ನು ಹಮ್ಮಿಕೊಳ್ಳುವ, ಯೋಜನೆಗಳನ್ನು ಸಕಾರಗೊಳಿಸುವ ಪ್ರಜಾಪ್ರಭುತ್ವದ ಮೌಲ್ಯಯುತ ಸರಕಾರಗಳು ಬರುತ್ತಿರುವುದು ಆಶಾದಾಯಕವಾದ ಬೆಳವಣಿಗೆ.

 ಮುಂಜಾನೆಯಿಂದ ಸಂಜೆಯವರೆಗೂ ದುಡಿದು ಬರುವ ಆಟೋವಾಲಗಳು, ಕಾರ್ಖನೆಯ ಕಾರ್ಮಿಕರು, ಗುತ್ತಿಗೆ ನೌಕರರು, ಮಹಿಳೆಯರು, ನಿರ್ಗತಿಕರು ಒಂದು ತುತ್ತು ಊಟಕ್ಕಾಗಿ ಪರಿತಪಿಸುವುದನ್ನು ನಾವು ನಗರಪ್ರದೇಶಗಳಲ್ಲಿ ಕಾಣಬಹುದು. ಇಂತಹವರ ನೋವಿಗೆ ಮಿಡಿಯುವ ಕಾರ್ಯಕ್ರಮಗಳು ಜಾರಿಗೆ ಬರುತ್ತಿರುವುದು ಅಭಿನಂದನೀಯವೆಂದೆ ಹೇಳಬಹುದು.

ಬಡತನದಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ಪೌಷ್ಟಿಕ ಆಹಾರ ಸಿಗದೇ ಅಪೌಷ್ಟಿಕತೆಯಿಂದ ಬಳಲುವ ಸಾಕಷ್ಟು ಮಕ್ಕಳನ್ನು ನಾವು ನೋಡುತ್ತೇವೆ. ವಿಶ್ವಸಂಸ್ಥೆಯು ಮಕ್ಕಳ ಅಪೌಷ್ಟಿಕತೆಯ ವಿರುದ್ಧವಾಗಿ ಸಮರ ಸಾರಿದರೂ ಇನ್ನೂ ಆ ಭವಣೆ ನೀಗದಿರುವುದು ಎಲ್ಲೋ ವ್ಯವಸ್ಥೆಯ ಲೋಪವೆಂದೆ ಪರಿಗಣಿಸಬಹುದು. ಇಂತಹ ಮಕ್ಕಳಿಗಾಗಿ ಹಾಲು ಕುಡಿಯುವ ಯೋಜನೆ, ಮಧ್ಯಾಹ್ನದ ಬಿಸಿಯೂಟ ನೀಡುವ, ಉಚಿತ ಸಮವಸ್ತ್ರ ವಿತರಿಸುವ, ಪಠ್ಯಪುಸ್ತಕಗಳನ್ನು ವಿತರಿಸುವ, ಅವರಿಗೆ ಸರಿಯಾದ ಶಿಕ್ಷಣವನ್ನು ಒದಗಿಸುವ ಸಾಕಷ್ಟು ಪರ್ಯಾಯ ಯೋಜನೆಗಳು ಇವತ್ತು ಕಾರ್ಯಗತಗೊಳ್ಳುತ್ತಿರುವುದು ಸಂತೋಷದಾಯಕ ಬೆಳವಣಿಗೆ.

ನಗರ ಪ್ರದೇಶಗಳಲ್ಲಿ ಬೇರೆಯವರ ಮನೆಗೆಲಸವನ್ನು ಮಾಡುವ ಮಹಿಳೆಯರು, ಗಾರ್ಮೆಂಟ್ ಗಳಲ್ಲಿ ದಿನಗೂಲಿಯಂತೆ ದುಡಿಯುವ  ಮಹಿಳೆಯರು ಅಲ್ಲದೆ ಯಾವುದೋ ಕಾರ್ಖಾನೆಗಳಲ್ಲಿ, ಕಚೇರಿಗಳಲ್ಲಿ ದುಡಿಯುವ ಮಹಿಳೆಯರ ಮತ್ತು ಎಲ್ಲಿಗಾದರೂ ಸಂಚರಿಸಬೇಕೆಂದರೆ ಮನೆಯ ಯಜಮಾನನ ಇಲ್ಲವೇ ಗಂಡನ ತಂದೆಯ ಮುಂದೆ ಕೈಯೊಡ್ಡಿ ಬೇಡಬೇಕಾದ ಪರಿಸ್ಥಿತಿಯನ್ನ ಪರಿಗಣಿಸಿದ ಸರ್ಕಾರವು ಮಹಿಳೆಯರಿಗೆ ಉಚಿತವಾಗಿ ಸಂಚರಿಸುವ ಯೋಜನೆಯನ್ನು ಜಾರಿಗೆ ತರುವುದರ ಹಿಂದೆ ‘ಆರ್ಥಿಕ ಚಟುವಟಿಕೆಗಳು ಸದಾ ಕ್ರಿಯಾಶೀಲಗೊಳ್ಳಲಿ’ ಎನ್ನುವ ಆಶಯವು ಇದೆ ಎಂದು, ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿರುವುದು ಇಲ್ಲಿಯ ಶೋಷಣೆಗೆ ಒಳಗಾದ ಮಹಿಳೆಯ ಜೊತೆ ಜೊತೆಗೆ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ ಮೂಲಕ ತಾನು ದುಡಿದು ಸ್ವಾಲಂಬನೆಯ ಬದುಕನ್ನ ಕಟ್ಟಿಕೊಳ್ಳುವ ಹಕ್ಕನ್ನು ಈಡೇರಿಸುವ ಕರ್ತವ್ಯ ಪ್ರಜಾಪ್ರಭುತ್ವ ಸರ್ಕಾರದ್ದಾಗಿದೆ.

 ಹಾಗಾಗಿ…

 ಅಂಗವಿಕಲರಿಗೆ ಅಂಗವಿಕಲ ಭತ್ಯೆ, ಉಚಿತ ಬಸ್ ಪಾಸ್, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಗಳನ್ನು ಜಾರಿಗೆ ತಂದಿರುವುದು ಒಳ್ಳೆಯ ಕಾರ್ಯವೆಂದೇ ಪರಿಗಣಿಸಬೇಕು.

ಪ್ರಜಾಪ್ರಭುತ್ವ ಮೌಲ್ಯವುಳ್ಳ ಸರಕಾರವು ದುರ್ಬಲರು, ಅಬಲರಿಗೆ,  ಅನೇಕ ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಎನ್ನುವ ಧೋರಣೆಯನ್ನು ಬೆಳಸಿಕೊಳ್ಳುವ  ಸರ್ಕಾರಗಳಿರುವುದು ಸಂತಸ.

 ವ್ಯವಸ್ಥೆಯ ಭಾಗವಾದ ಕುಳಿತುಕೊಂಡು ಉಣ್ಣುವ ಶ್ರೀಮಂತ ವರ್ಗದ ಕುಹಕದ ಮಾತುಗಳನ್ನಾಡುವುದು ಸಹಜ.  “ನಾವು ತೆರಿಗೆ ಕಟ್ಟುತ್ತೇವೆ, ನಮ್ಮ ಹಣ ಪೋಲಾಗುತ್ತದೆ, ದೇಶ ಆರ್ಥಿಕವಾಗಿ ದುರ್ಬಲಗೊಳ್ಳುತ್ತದೆ” ಎನ್ನುವಂತಹ ಮಾತುಗಳು ಇಂದು ಕೇಳುತ್ತಿರುವುದು ವಿಷಾದನೀಯ.

 ಒಂದು ದೇಶದ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳಲ್ಲ, ಕೇವಲ ರಸ್ತೆಗಳಲ್ಲ, ಒಂದು ದೇಶದ ಅಭಿವೃದ್ಧಿಯೆಂದರೆ ಪ್ರತಿಯೊಬ್ಬರ ಏಳಿಗೆ. ಎಲ್ಲರನ್ನು ಮುಖ್ಯ ವಾಹಿನಿಗೆ ತರುವ, ಶೋಷಿತರಿಗೆ ಸಾಮಾಜಿಕ  ಭದ್ರತೆಯನ್ನು ನೀಡುವ ಕಾರ್ಯ ನಿಜವಾಗಿಯೂ ಅಭಿನಂದನೀಯ.

ಯಾರು ಏನೇ ಹೇಳಲಿ ಸಮಾಜದಲ್ಲಿರುವ ದುರ್ಬಲ ವರ್ಗಗಳನ್ನು ಮುಖ್ಯ ವಾಹಿನಿಗೆ ತರುವ ಕಾರ್ಯದಲ್ಲಿ ಹಿಂದೆಮುಂದೆ ನೋಡಬಾರದು. ಕೂಹಕ ಮಾತುಗಳ ಮೆರವಣಿಗೆ ಎಲ್ಲ ಕಡೆ ಸದಾ ಮೆರೆಯುತ್ತಿರಲಿ.. ಆದರೆ ಸಾಮಾಜಿಕ ಮತ್ತು ಮಾನವೀಯ ಮೌಲ್ಯವುಳ್ಳ ಕಾರ್ಯ ಸದಾ ಜರುಗುತ್ತಿರಲಿ.

ಹಸಿವು, ನೋವು – ಅವಮಾನ, ಅಸಹಾಯಕತೆ, ದಬ್ಬಾಳಿಕೆ, ದೌರ್ಜನ್ಯ ಇವುಗಳ ನೋವುಗಳನ್ನುಂಡ ವ್ಯಕ್ತಿಗೆ ಮಾತ್ರ  ಆ ಸಂಕಟ ಅರ್ಥವಾಗುತ್ತದೆ. ಪ್ರಜ್ಞೆ ಇಲ್ಲದ ಠಾಣೆಗಳು, ಸಂಸ್ಕಾರವಿಲ್ಲದ ರಾಜಕೀಯ ತೆವಲುತನಗಳು, ಸಾಮಾಜಿಕ ಮತ್ತು ಮಾನವೀಯ ಮೌಲ್ಯವಿಲ್ಲದ ಧಾರ್ಮಿಕ ಆಷಾಢಭೂತಿತನಗಳು ಇರುವ ತನಕ ಇಂತಹ ಮಾತುಗಳು ಸಹಜ. ಇಂತಹ ಕುಹಕ ಮಾತುಗಳಿಗೆ ಬೆಲೆ ನೀಡದೆ, ಪ್ರಜಾಪ್ರಭುತ್ವ ಸರ್ಕಾರ ಯಾವ ದಾರಿಯಲ್ಲಿ ನಡೆಯಬೇಕೋ ಅದನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಯಶಸ್ಸನ್ನು ಗಳಿಸಿದಾಗ ಪ್ರತಿಯೊಬ್ಬರ ಒಳಿತಾಗಬಲ್ಲದು. ಮಾನವೀಯ ಮೌಲ್ಯವುಳ್ಳ ಪ್ರತಿಯೊಬ್ಬರೂ ಇಂತಹ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳಿಗೆ ನಾವು ಬೆನ್ನು ತಟ್ಟುವುದರ ಮೂಲಕ ಪ್ರೋತ್ಸಾಹಿಸಬೇಕು ಮತ್ತು ಮನುಷ್ಯತ್ವದ ಕಣ್ಣುಗಳನ್ನು ತೆರೆದು ನೋಡಬೇಕು. ಶೋಷಿತ ವರ್ಗದ ಫಲಾನುಭವಿಗಳು ನಮ್ಮ ಸುತ್ತಮುತ್ತಲಿರುವ ನೆರೆಹರೆಯವರು, ಸಂಬಂಧಿಕರು, ಯಾರೇ ಆಗಿರಬಹುದು ಅವರಿಗೆ ನಾವು ಕುಹಕದ ಮಾತುಗಳನ್ನಾಡದೆ ಮತ್ತು ಅದನ್ನು ಜಾರಿಗೆ ತರುವ ಸರ್ಕಾರಗಳ ಧೋರಣೆಯನ್ನು ಟೀಕಿಸದೆ ಅಂತಹ ಮಾನವೀಯ ಮೌಲ್ಯವುಳ್ಳ ಕಾರ್ಯಕ್ರಮಗಳು ಹೆಚ್ಚೆಚ್ಚು ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಸಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮುನ್ನೆಲೆಗೆ ಬರಲೆಂದು ಹಾರೈಸೋಣ.


ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

Leave a Reply

Back To Top