ಅಪ್ಪನಿಗೊಂದು ಗಜಲ್
ಅರ್ಚನ ಯಳಬೇರು
ಒಡಲೊಳಗೆ ಕನಸುಗಳ ತಿಜೋರಿಗೆ ಬೀಗ ಜಡಿದು ಜವಾಬ್ದಾರಿ ಹೆಗಲೇರಿಸಿದವ ಅಪ್ಪ
ಸಂಸಾರ ನೊಗಕೆ ಗೋಣೊಡ್ಡಿ ಜೀವನದ ಉಳುಮೆಯಲಿ ನಿತ್ಯಜೀವ ಸವೆಸಿದವ ಅಪ್ಪ
ಹೆತ್ತವರಿಗೆ ಹೆಗಲಾಗಿ ಜೊತೆಗೆ ಹೆಜ್ಜೆ ಹಾಕಿದವಳ ಭಾವಕ್ಕೆ ಗೆಜ್ಜೆ ತೊಡಿಸುವ ಧೀವಂತನು
ಕರುಳ ಕುಡಿಗಳ ಕಂಗಳಲಿ ಅಡಗಿದ ಸುಪ್ತ ಹೊಂಗನಸನು ಹಸನು ಗೊಳಿಸಿದವ ಅಪ್ಪ
ಕಷ್ಟ ನಷ್ಟಗಳಿಗೆ ತಥ್ಯ ಮಿಥ್ಯಗಳನು ತಳುಕು ಹಾಕದೆ ಸ್ವೀಕರಿಸುವನು ವರಪ್ರಸಾದದಂತೆ
ತೊಡರುಗಳ ಅಡರಲು ಮೌನದಿ ಮನದ ಮರ್ಜಿಯ ಬದುಕಿನ ಮೆಟ್ಟಿಲಾಗಿಸಿದವ ಅಪ್ಪ
ಬುದ್ಧಿಯ ಬತ್ತಳಿಕೆಯಲ್ಲಿ ಧೈರ್ಯದ ಅಂಬುವ ನೆಟ್ಟು ದಾಷ್ಟ್ಯ ಮೆರೆಯುವಲ್ಲಿ ಅಗ್ರಗಣ್ಯ
ವೇದನೆಯ ವದಿಸುತ ಒತ್ತರಿಸುವ ದುಃಖಗಳಿಗೆ ಅಣೆಕಟ್ಟು ಕಟ್ಟಲು ಕಾತರಿಸಿದವ ಅಪ್ಪ
ತಿತಿಕ್ಷೆಯ ತೆಪ್ಪದಲಿ ಸಾಗುತಲೇ ಪ್ರೀತಿ ಧೀರ್ಘಿಕೆಯ ಹರಿಸಿದನು ಅರ್ಚನಾಳ ಬಾಳಿನಲ್ಲಿ
ಛಲವ ಅಚಲವಾಗಿಸಲು ಸರ್ವವನು ಧಾರೆಯೆರೆದು ಸ್ವಪ್ನಗಳ ಸ್ವರ್ಣವಾಗಿಸಿದವ ಅಪ್ಪ