ಅಪ್ಪನೇ ಸರ್ವಸ್ವ..!
ಶ್ರೀನಿವಾಸ.ಎನ್.ದೇಸಾಯಿ,

ಅಪ್ಪ ಎನ್ನುವ ಪದದಲ್ಲಿ ಇರುವ ಶಕ್ತಿ ಅತ್ಯದ್ಭುತವಾದದ್ದು. ಅಪ್ಪನಿಂದ ಸಿಗುವಂತಹ ಭದ್ರತೆ ಯಾವುದೇ ರಕ್ಷಣಾ ಪಡೆಯಿಂದಲೂ ಕೂಡಾ ಸಿಗಲಿಕ್ಕಿಲ್ಲ. ಅಪ್ಪನ ಪ್ರೀತಿ,ಅಂತಃಕರುಣೆ,ಜವಾಬ್ದಾರಿ, ಸಾಮರ್ಥ್ಯಗಳು ನಿಜಕ್ಕೂ ಒಂದು ಕುಟುಂಬವನ್ನು ಸುಖಿಯಾಗಿಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಒಟ್ಟಾರೆ ಅಪ್ಪ ಅಂದ್ರೆ ಇಡೀ ಜಗತ್ತೆ ಎನ್ನುವ ಪರಿಕಲ್ಪನೆ ಎಲ್ಲರದ್ದಾಗಿರುತ್ತದೆ.
“ವಿದ್ಯೆ ಕಲಿಸದ ತಂದೆ | ಬುದ್ದಿ ಹೇಳದ ಗುರು | ಬಿದ್ದಿರಲು ಬಂದು ನೋಡದ ತಾಯಿ | ಇವು ಮೂರು ಶುದ್ಧ ವೈರಿಗಳು ಸರ್ವಜ್ಞ ||” ಎನ್ನುವ ಸರ್ವಜ್ಞನ ವಚನವು ತಂದೆಯ ಮಹತ್ವವನ್ನು ಸಾರಿ ಹೇಳುತ್ತಿದೆ. ಈ ಜಗತ್ತಿನಲ್ಲಿ ಬದುಕಲು ಬೇಕಾದದ್ದು ವಿದ್ಯೆ. ಅದನ್ನು ಮೂಲತಃ ಎಲ್ಲರೂ ಕಲಿಯುವುದು ತಂದೆಯಿಂದಲೇ ಎಂಬುದು ಜಗಜ್ಜಾರಾಗಿರುಂತಹ ತ್ರಿಕಾಲ ಸತ್ಯವಾದ ಮಾತು ತಂದೆಯ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುವಂತಿದೆ.
ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆಯ ಬೈಗುಳವು ತಾಯಿಯ ಜೋಗುಳಕ್ಕಿಂತಲೂ ಹೆಚ್ಚು ಪ್ರಭಾವ ಬೀರುತ್ತದೆ. ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ಬೆಳೆಸುವ ಹೊಣೆಯನ್ನು ಹೊತ್ತುಕೊಂಡು ಇಡೀ ಜೀವನವನ್ನು ಮಕ್ಕಳ ಏಳ್ಗೆಗಾಗಿಯೇ ಕಳೆಯುವ ತಂದೆಯ ಶ್ರಮ ನಿಜಕ್ಕೂ ಅನಿರ್ವಚನೀಯವಾದದ್ದು. ಹೊತ್ತು- ಹೆತ್ತು, ಪಾಲನೆ- ಪೋಷಣೆ ಮಾಡುವ ಜವಾಬ್ದಾರಿ ತಾಯಿದ್ದಾದರೆ, ಪ್ರತಿಯೊಂದು ಮಗುವಿಗೆ ವಿದ್ಯೆ ಬುದ್ದಿ ಕೊಡಿಸುವ ಮತ್ತು ಮಕ್ಕಳ ಭವಿಷ್ಯವನ್ನು ಭದ್ರವಾಗಿ ರೂಪಿಸುವ ಗುರುತರ ಜವಾಬ್ದಾರಿಯು ತಂದೆಯದ್ದಾಗಿರುತ್ತದೆ. ಒಂದು ಸುಖಿ ಕುಟುಂಬದ ಭದ್ರ ಬುನಾದಿ ಅಂದ್ರೆ ದೈತ್ಯಶಕ್ತಿಯ ಬಲವನ್ನು ಪಡೆದ ಅಪ್ಪನಿಂದ ಮಾತ್ರ. ಹೀಗಾಗಿ ಅಪ್ಪನೇ ಸರ್ವಸ್ವ.
ಒಟ್ಟಾರೆ ಅಪ್ಪ-ಅಮ್ಮ ಎನ್ನುವುದು ನಮಗೆ ಎರಡು ಕಣ್ಣುಗಳಿದ್ದಂತೆ. ಅದರಲ್ಲಿ ಹೆಚ್ಚು ಅಥವಾ ಕಡಿಮೆ ಎನ್ನುವ ಮಾತೇ ಇಲ್ಲ. ಹೀಗಾಗಿ ತಂದೆತಾಯಿಗಳಿಬ್ಬರಿಗೂ ನಮ್ಮ ಜೀವನವನ್ನು ಮುಡುಪಾಗಿಡೋಣ. ಅವರ ಋಣವನ್ನು ತೀರಿಸಲು ಸಾದ್ಯವಿಲ್ಲವಾದರೂ ಅವರಿಗಾಗಿ ಆದರ್ಶವಾದ ಬದುಕನ್ನು ಕಂಡುಕೊಂಡು ಸಾರ್ಥಕ ಜೀವನವದ ಅವರ ಕನಸನ್ನು ನನಸು ಮಾಡಿ ನಾವೇಲ್ಲರೂ ಕೃತಾರ್ಥರಾಗೋಣ…!!!