ಪುಸ್ತಕ ಸಂಗಾತಿ
ಗೊರೂರು ಅನಂತರಾಜುರವರ ಪುಸ್ತಕ :
ಬಣ್ಣದ ಬದುಕು ಯಾಕೂಬ
ಬದುಕು – ಅನುಭವಗಳ ಸಾಗರ. ಸಾರವೂ ಹೌದು. ಬದುಕಿನ ಒಂದೊಂದು ಅನುಭವವೂ ಅಮೂಲ್ಯವೇ ಆಗಿರುತ್ತದೆ. ಕೆಲವು ಅನುಭವಗಳು ವಿಭಿನ್ನವಾದರೆ, ಮತ್ತೆ ಕೆಲವು ಅನುಭವಗಳು ವಿಶಿಷ್ಟವಾಗಿರುತ್ತವೆ. ಕೆಲವೊಂದಷ್ಟು ವಿಚಿತ್ರವಾದ ಅನುಭವಗಳಾದರೆ ಮತ್ತೊಂದಷ್ಟು ವೈವಿಧ್ಯಮಯವಾಗಿರುತ್ತವೆ. ಜೀವನದ ಪ್ರತೀ ಕ್ಷಣವನ್ನು ನಾವು ಅನುಭವಗಳಿಂದಲೇ ತಿಳಿದುಕೊಳ್ಳುತ್ತೇವೆ ಮತ್ತು ಕಲಿತು ಕೊಳ್ಳುತ್ತೇವೆ. ಬದುಕಿನಲ್ಲಿ ನಾವೆಷ್ಟು ಕಷ್ಟ , ದುಃಖ, ನೋವು ಸಂಕಟಗಳನ್ನು ಅನುಭವಿಸಿದ್ದೇವೆ ಎನ್ನುವುದಕ್ಕಿಂತ ಅವುಗಳಿಂದ ಹೊರಬರಲು ನಾವೆಷ್ಟು ಶ್ರಮಿಸಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಮಿನುಗುತಾರೆಯಂತಿರುವ ಪ್ರತಿಭಾವಂತ ಸಾಹಿತಿಗಳಾದ ಗೊರೂರು ಅನಂತರಾಜು ರವರು ವಿಭಿನ್ನ ರೀತಿಯ ಸಾಹಿತ್ಯ ಕ್ಷೇತ್ರಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುತ್ತಾ ಬದುಕಿನ ಅನುಭವ ಕಂಡವರು. ” ಬಣ್ಣದ ಬದುಕು ಯಾಕೂಬ ” ಎಂಬ ಶಿರೋನಾಮೆಯಡಿಯಲ್ಲಿ ಹೊರಬರುತ್ತಿರುವ ಪುಸ್ತಕವು ಬಡ ಕಲಾವಿದನ ಜೀವನ ಯಾನವನ್ನು ಕಟ್ಟಿಕೊಡುತ್ತದೆ. ಗೊರೂರು ಅನಂತರಾಜು ರವರ ಆತ್ಮೀಯ ಬಾಲ್ಯದ ಗೆಳೆಯ ಯಾಕೂಬ ಕಲೆಯಲ್ಲಿ ಅರಳಿದ ಕುಸುಮವಾಗಿದ್ದು ನಗುಮೊಗದ ವ್ಯಕ್ತಿ. ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಮನೋಭಾವದವರು. ಬದುಕಿನ ಅದೇಷ್ಟೋ ಕಷ್ಟಗಳನ್ನು ಅನುಭವಿಸಿ ಹೊರಬಂದವರು. ಇವರ ಬದುಕನ್ನು ಬಣ್ಣ ಬಣ್ಣದ ಪದಗಳೆಂಬ ಚುಕ್ಕಗಳಿಂದಾದ ಸುಂದರವಾದ ರಂಗೋಲಿಯಂಥ ಲೇಖನವು ಈ ಪುಸ್ತಕಕ್ಕೆ ಒಪ್ಪುವಂತಹದ್ದಾಗಿದೆ. ಬಣ್ಣದ ಬದಕಿನಲ್ಲಿಯೇ ಬದುಕನ್ನು ಕಾಣುತ್ತಿರುವ ಯಾಕೂಬನಿಗೆ ಗೊರೂರು ಅನಂತರಾಜು ರವರಿಂದ ನೀಡಲ್ಪಟ್ಟ ಬಹುದೊಡ್ಡ ಕಾಣಿಕೆಯೇ ಈ ಹೊತ್ತಿಗೆಯಾಗಿದೆ.
ಓರ್ವ ಸಾಹಿತಿಯಾಗಿ ರಂಗಭೂಮಿ ಕ್ಷೇತ್ರದಲ್ಲಿ ನ ನಾಟಕಗಳ ಕುರಿತಾದ ಆಸಕ್ತಿಕರ ವಿಷಯಗಳು ಮತ್ತು ಕಲಾವಿದರ ಬಣ್ಣದ ಬದುಕಿನ ನೈಜ ಚಿತ್ರಣಗಳನ್ನು ವೈಶಿಷ್ಟ್ಯಪೂರ್ಣವಾಗಿ ಓದುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಿ ಬದುಕಿನ ನೈಜ ಚಿತ್ರಣ ದಿಂಡಗೂರು ತಂಡದ ಕೇರಿ ಹಾಡು ಲೇಖನದಲ್ಲಿ ಚಿತ್ರಿಸಿದಂತೆ ನಾಟಕದಲ್ಲಿ ಬರುವ 73 ವಯಸ್ಸಿನ ತಿಮ್ಮಯ್ಯನವರು ಕೇರಿಯ ಹಿರಿಯ ವ್ಯಕ್ತಿಯಾಗಿದ್ದು, ನಾಟಕದಲ್ಲಿ ಹಾಡುತ್ತಾ ಕಥೆ ಕಟ್ಟುತ್ತಾ ಹಟ್ಟೆ ಜನರ ಮಾರ್ಗದರ್ಶಕರಾಗಿ ರಂಗದ ಮೇಲೆ ಬಂದು ಹೋಗುವ ಚಿಕ್ಕ ಚಿಕ್ಕ ಘಟನೆಗಳನ್ನು ನಿರ್ಲಕ್ಷಿಸದೇ ಪ್ರಸ್ತಾಪಿಸುವ ವೈಖರಿ ನಿಜಕ್ಕೂ ವಿಭಿನ್ನವಾಗಿದೆ. ಚಲಂ ಹಾಡ್ಲಹಳ್ಳಿಯವರು ಏರ್ಪಡಿಸಿದ ಸ್ತ್ರೀ ತನದ ಸಂವೇದನೆಗಳನ್ನು ಹೊರ ಹಾಕುವ ನವ್ಯ ಅಭಿವ್ಯಕ್ತಿ : ಲೀಕ್ ಔಟ್ ಎಂಟ ನಾಟಕದಲ್ಲಿ ಸ್ತ್ರೀಯೋರ್ವಳ ಅಂತರಾತ್ಮದ ಸಂವೇದನೆಗಳು ಹೇಗೆ ಲೀಕ್ ಔಟ್ ಆಗುತ್ತವೆ ಎಂಬುದನ್ನು ವಿಭಿನ್ನವಾಗಿ ಚಿತ್ರಿಸಿ ಬರೆದಿದ್ದಾರೆ.
ಸಹ ಬಾಳ್ವೆಯ ಸಂದೇಶ ಸಾರುವ ಕೌಟುಂಬಿಕ ಕಥಾನಕ ಲೇಖದಲ್ಲಿ ನಿಂಗವ್ವನ ಪಾತ್ರ ಇಂದಿನ ಸಮಾಜದಲ್ಲಿನ ಸಂಕೇತದಂತಿದೆ. ಹಾಗೂ ಮುದುಕಪ್ಪನು ಹಲುಬುವ ತನ್ನ ಯಾತನೆಯ ಮಾತು ” ಓ ದೇವರೇ ವಯಸ್ಸಾದ ನಮ್ಮನ್ನು ಈ ಭೂಮಿ ಮೇಲೆ ಏಕೆ ಉಳಿಸಿದ್ದೀಯ, ಬೇಗನೆ ಕರೆದು ಕೊಳ್ಳಬಾರದೇ ” ಎಂಬುದು ಸಾರ್ವತ್ರಿಕವಾದ ಹೇಳಿಕೆಯಾಗಿದೆ. ಒಟ್ಟಾರೆ ನಾಟಕದ ಸಾರಾಂಶ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಓದಿನ ಮಹತ್ವ ಸಾರುವ ಶೈಕ್ಷಣಿಕ ಸಿನೆಮಾ ಅಂಗೈಲಿ ಅಕ್ಷರ ಲೇಖನವನ್ನು ಓದುಗರು ಒಮ್ಮೆ ಓದಿದರೆ ಸಿನೆಮಾವನ್ನು ತಾವೂ ಒಮ್ಮೆ ನೋಡಬೇಕೆನ್ನಿಸುವಷ್ಟರ ಮಟ್ಟಿಗೆ ಲೇಖನ ಬಿಂಬಿಸುತ್ತದೆ. ಜೋಕೆ ಬಾಳು ಬೆಳ್ಳಿಯ ಮಿಂಚು ಕಣ್ಣು ಕತ್ತಲ ಸಂಚು ಎಂಬ ಲೇಖನದಲ್ಲಿ ಪಾರ್ಕ್ ರೋಡ್ 100 ರೂಪಾಯಿ ಎಂಬ ಸಿನೆಮಾದಲ್ಲಿನ ಹಿಂಸೆಯನ್ನು ಅನಾವರಣ ಮಾಡುವ ಸನ್ನಿವೇಶಗಳು ಮತ್ತು ಹಿಂಸೆ ಎಷ್ಟು ಕೆಟ್ಟದ್ದು ಎಂದು ನಾವಂದುಕೊಳ್ಳು ತ್ತೇವೆಯೋ ಅದನ್ನು ನೋಡಲು ಮನಸ್ಸು ಹಾತೊರೆಯುವುದು ಈ ವಿಶ್ವದ ಆಶ್ಚರ್ಯವೇ ಸರಿ ! ಇದಕ್ಕೆ ಸಾಕ್ಷಿಯಾಗಿ ಅಣ್ಣಾವ್ರ ಜೇಡರ ಬಲೆ ಸಿನೆಮಾವನ್ನು ಹೆಸರಿಸುತ್ತಿ ಫೈಟಿಂಗ್ ಗಳು ಅಂದಿನಿಂದ ಇಂದಿನವರೆಗೂ ಮುಂದುವರಿದ ಭಾಗವಾಗಿ ಕಾಣಬರುತ್ತವೆ ಎನ್ನುತ್ತಾರೆ.
” ಸಿಂಹಧ್ವನಿ ಸಂಪಾದಕ ಬಿ.ಎಂ ನಂದೀಶ್ ” ಎಂಬ ಲೇಖನವು ಶ್ರೀ ಬಿ.ಎಂ ನಂದೀಶ್ ರವರು 2022ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಿಕೋಧ್ಯಮ ವಿಭಾಗದಿಂದ ಆಯ್ಕೆಯಾದದ್ದು ಮತ್ತು ಮೂವತ್ತಕ್ಕೂ ಅಧಿಕ ವರ್ಷಗಳ ಕಾಲದ ಪತ್ರಿಕೋದ್ಯಮದ ನೋವು ನಲಿವುಗಳ ಅನುಭವವುಂಡವರು. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಹಾನಂದಿ ಪತ್ರಿಕೆಯಲ್ಲಿ ಪಡೆದ ವಿಭಿನ್ನ ರೀತಿಯ ಅನುಭವಗಳು , ನಂತರ ಮೈಸೂರು ಮಿತ್ರ ಪತ್ರಿಕಾ ವಿಭಾಗದಲ್ಲಿ ಪಡೆದ ಅನುಭವಗಳು, ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿನ ಅನುಭವಗಳು, ನಂತರ 2019 ರಲ್ಲಿ ತಾವೇ ಸಂಪಾದಕರಾಗಿ ಸಿಂಹಧ್ವನಿ ಪತ್ರಿಕೆಯನ್ನು ಪ್ರಾರಂಭಿಸಿ 4ನೇ ವಸಂತವನ್ನು ಪೂರೈಸಿ ತಮ್ಮ 32 ವರ್ಷಗಳ ಸುದೀರ್ಘ ಪಯಣದ ಹಾದಿಯಲ್ಲಿ ಜಿಲ್ಲಾಡಳಿತ ಅವರನ್ನು ಗುರ್ತಿಸಿ ಸನ್ಮಾನಿಸಿದ ಪ್ರಸಂಗಗಳ ನೆನಪುಗಳನ್ನು ಗೊರೂರು ಅನಂತರಾಜುರವರು ವಿವರವಾಗಿ ಬರೆದಿದ್ದಾರೆ.
ಬೀದಿ ನಾಟಕದ ಹಾದಿಯಲ್ಲಿ ಬಿ. ಟಿ. ಮಾನವ ಹಿಂತಿರುಗಿ ನೋಡಿದಾಗ , ಕನಕದಾಸರ ಜೀವನಾಧಾರಿತ ” ಮಹಾತ್ಮಾ ಕನಕದಾಸ ” ನಾಟಕ, ನೆನಪಿನ ಅಂಗಳದಲ್ಲಿ ನಾ ಓದಿನ ನಮ್ಮರ ಶಾಲೆ , ಟೀಚರ್ ಕೋಚಿಂಗ್ ಸ್ಟೂಡೆಂಟ್ ಲಾಫಿಂಗ್ , ಉತ್ತಮ ರಂಗಪ್ರಯೋಗ ಟಿಪ್ಪುವಿನ ನಿಜ ಕನಸುಗಳು, ರಂಜಿಸಿದ ರಂಗಾಯಣ ನಾಟಕವಿ ದ ಪೀಪಲ್ ಆಫ್ ಇಂಡಿಯಾ , ವಿಭಿನ್ನ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂ ದರೇ..! , ಸೋದರನೆ ಶಿವನು ಶಾಸ್ತ್ರಿಗಳ ಶಿವನಲ್ಲ , ಆಷಾಡದ ಮಳೆಯ ಅಬ್ಬರ ಕಲಾಕ್ಷೇತ್ರದಲ್ಲಿ ಕಲೆಯ ನರ್ತನ , ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡುವ ಬೇತಾಳ ಹೇಳಿದ ಸುಳ್ಳು ಕಥೆ , ಗಂಡ ಹೆಂಡತಿ ಜಗಳಗಂಟಿ ಜೀವನದ ಯಥಾ ಪ್ರಕಾರ , ರಂಗದಿಂದ ಕಾಮಿಡಿ ಗ್ಯಾಂಗ್‌ವರೆಗೆ ಚಿತ್ರದುರ್ಗ ತಿಪ್ಪೇಸ್ವಾಮಿ , ಭರವಸೆಯ ನಟಿ ವೇದ ಎಂ.ವೈ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಕಲೆಯ ಹೊಳೆಯಲ್ಲಿ ಮಿಂದೆದ್ದವರು ಹೊಳೆನರಸೀಪುರ ಮಂಜುನಾಥ್, ರಂಜಿಸಿದ ಪೌರಾಣಿಕ ನಾಟಕಗಳು ರಂಗಗೀತೆಗಳೇ ಮೇಲುಗೈ , ತರಗೆಲೆಯ ಬದುಕಿನ ಮಹಾಭಾರತ ಪದ್ಮವ್ಯೂಹ ನಾಟಕ , ಗೊರೂರು ಅನಂತರಾಜು ಅವರ ಹಾಸ್ಯ ನಾಟಕಗಳು, ಪ್ರಹಸನಗಳು , ಕನ್ನಡ ರಂಗಭೂಮಿಯ ಆ ವೈಭವದ ದಿನಗಳು! , ಗೊರೂರು ಅನಂತರಾಜು ಅವರ ರಂಗಸಿರಿ ಕಥಾ ಐಸಿರಿ , ಸಾವಿನ ಸತ್ಯಕ್ಕೆ ಮೂರ್ತ ರೂಪ : ದಾರಿ ಯಾವುದಯ್ಯ ವೈಕುಂಟಕ್ಕೆ , ವಸಂತಕುಮಾರ್ ಪ್ರಕೃತಿ ಚಿತ್ರಣದಲ್ಲಿ ಹಾಸನದ ಮಹಾರಾಜ ಪಾರ್ಕ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡಾಭಿಮಾನಿ ಬಿ.ಆರ್.ತೀರ್ಥಂಕರ, ರಸ್ತೆ ಬದಿಯಲ್ಲಿ ಜನರಗಮನ ಸೆಳೆದ ಸಮೂಹ ಚಿತ್ರಕಲಾ ಪ್ರದರ್ಶನ , ಸೃಜನಶೀಲ ಕಲಾ ನೈಪುಣ್ಯದ ಚಂದ್ರಕಾಂತ್ ನಾಯ ಅವರ ಕಲಾಕೃತಿಗಳು , ಮೊದಲ ಪ್ರಯೋಗದಲ್ಲಿಯೇ ಜನಮನ ಗೆದ್ದ ಇವನಾರವ ನಾಟಕ , ರಂಗಾಯಣ ತಂಡದ ಭಾರತ ಸಂವಿಧಾನ ಆಶಯದ ಸೂತ್ರದಾರ ನಾಟಕ , ಆ ತರಹ ಕಿಲ ಕಿಲ ನಗುಬೇಡ ವಿಲನ್ ನಗು ಇರಲಿ..! ಕಿರು ಪ್ರಹಸನ , ಭರವಸೆಯ ಚಿತ್ರಕಲಾವಿದ ಬಿ.ಎಸ್.ನಂದನ , ದೇವಿಮಹಾತ್ರೆಯಿಂದ ನಾರದನ ಪಾತ್ರದವರೆಗೆ ಗೋವಿಂದೇಗೌಡರು , ದುರ್ಯೋಧನ ಪಾತ್ರಕ್ಕೆ ಪ್ರಶಸ್ತಿ ಪುರಸ್ಕೃತ ಜಗದೀಶ್ ರಾಮಘಟ್ಟ , ಸಾಹಿತ್ಯ ಸಮ್ಮೇಳನದಲ್ಲಿ ವರ್ಣಮಿಲನ ಚಿತ್ರಕಲಾ ಪ್ರದರ್ಶನ , ಮತ್ತೆ ಮತ್ತೆ ಬಣ್ಣ ಹಚ್ಚಬೇಕು ಕುಣಿಯಬೇಕು , ದೇಶಿ ಕಲಾಕೃತಿಗಳ ಏಕವ್ಯಕ್ತಿ ಚಿತ್ರ ಕಲಾಪ್ರದರ್ಶನ , ಪ್ರವೀಣ್ ಕುಂಚದಲ್ಲಿ ಕ.ಸಾ.ಪ.ಗೋಡೆ ಅಲಂಕರಿಸಿದ ಜಿಲ್ಲಾ ಸಾಹಿತಿಗಳು , ವ್ಯಂಗ್ಯ ಚಿತ್ರಕಾರ ಸು.ವಿ.ಮೂರ್ತಿ ಅವರ ಗೆರೆಬರೆ:ಪ್ರಶಸ್ತಿ ಸಾಧನೆ , ಚಿತ್ರಕಲೆಯ ಪ್ರತಿಭೆ ಎಲ್.ಜಿ.ಲತಾ , ದೇಶಿ ಕಲಾಕೃತಿಗಳ ಏಕವ್ಯಕ್ತಿ ಚಿತ್ರ ಕಲಾಪ್ರದರ್ಶನ, ಜನಪದ ಕಲೆಯ ಆರಾಧಕ ಗಾಯಕ ದೇವಾನಂದ ವರಪ್ರಸಾದ್ , ಸಾಹಿತ್ಯ ಪರಿಷತ್ ಒಡನಾಟದಲ್ಲಿ ಡಾ.ಉದಯರವಿ ಹೀಗೆ ವಿಭಿನ್ನ , ವಿಶಿಷ್ಠ ಹಾಗೂ ವೈವಿಧ್ಯಮಯ ಲೇಖನಗಳು ಸಾಮಾಜಿಕ , ಸಾಂಸ್ಕೃತಿಕ , ಕಲಾತ್ಮಕ , ಸಾಹಿತ್ಯಿಕ , ವ್ಯಕ್ತಿ ಚಿತ್ರಣ ಮುಂತಾದ ರೀತಿಯಲ್ಲಿ ಅನುಭವಗಳ ಸರಮಾಲೆಯನ್ನೇ ಬಣ್ಣದ ಬದುಕು ಯಾಕೂಬ ಎಂಬ ಪುಸ್ತಕವು ಹೊಂದಿದ್ದು ಗೊರೂರು ಅನಂತರಾಜುರವರು ತಮ್ಮ ಲೇಖನಗಳ ವಿನ್ಯಾಸಾತ್ಮಾಕ ವೈಖರಿಯನ್ನು ಮೆರೆದಿದ್ದಾರೆ. ಸೂಕ್ತ ಪದಗಳ ಪರಿಕಲ್ಪನೆಗಳನ್ನು ಓದುಗರಿಗೆ ನೀಡಿದ್ದಾರೆ. ನೈಜ ಅನುಭವಗಳನ್ನು ಓದುಗರು ಅನುಭವಿಸುವಂತೆ ಲೇಖನಗಳನ್ನು ಬರೆದಿದ್ದಾರೆ. ಈ ಪುಸ್ತಕವು ಗೊರೂರು ಅನಂತರಾಜುರವನ್ನು ಧ್ರುವತಾರೆಯಂತೆ ಸಾಹಿತ್ಯ ಲೋಕದಲ್ಲಿ ಮಿನುಗುವುದನ್ನು ನೋಡಲು ಸಾಹಿತ್ಯಾಸಕ್ತರ ಮನೋಭಿಲಾಷೆಗೆ ಕಾಣಿಕೆಯಾಗಿ ಹೊರ ಹೊಮ್ಮಲಿ ಎಂಬುದೇ ತುಂಬು ಹೃದಯದ ಆಶಯ .
————-
ಕೆ. ಎನ್. ಚಿದಾನಂದ .
ತುಂಬು ಹೃದಯದ ಧನ್ಯವಾದಗಳು ಸರ್