ನಯನ. ಜಿ. ಎಸ್.-‘ನೀನಾಗಿರು ನೀನು..’

ಕಾವ್ಯಸಂಗಾತಿ

ಮಯನ ಜಿ.ಎಸ್.

ನೀನಾಗಿರು ನೀನು..’

ನೀನಲ್ಲದ ನಿನ್ನನು ನಿರೂಪಿಸುವೆ ಏಕೆ
ಅವರಿವರು ಸ್ವೇಚ್ಛೆಯಲಿ ಜರಿದ ಮಾತ್ರಕ್ಕೆ ?
ನಿನ್ತನವನು ಮರೆತು ಸೊರಗುವುದೇತಕೆ
ಆಚಾರ ವಿಹೀನತೆಯು ಮೆರೆಯುತಿಹ ಕರ್ಮಕ್ಕೆ ?

ಆಂತರ್ಯದ ಚಕ್ಷುಗಳ ತೆರೆಯುತ ನೋಡೊಮ್ಮೆ
ಗೋಚರಿಸೀತು ಆಗು ಹೋಗುಗಳ ದಿಟವು..
ಸಮಚಿತ್ತದಲಿ ವಿಹರಿಸುತ ಜ್ಞಾನವನು ತಿಳಿಯೊಮ್ಮೆ
ಬಾಧಿಸದು ಬದುಕನು ಮತ್ತಾವುದೇ ನೋವು.

ಉಲಿಯುವೆ ಏಕೆ ಹಿಂಜಿಕೆಯ ಸೊಲ್ಲುಗಳ
ಹಿಂದಡಿಯ ಆಮಿಷಕೆ ಮನವನು ನೆಚ್ಚಿ ?
ದಿಟ್ಟತನದಲಿ ಇಡುತಿರು ಬಿಡದೇ ಹೆಜ್ಜೆಗಳ
ಸೋಲುಗಳ ಅಟ್ಟಹಾಸವು ಬಿದ್ದೀತು ನೆಲಕಚ್ಚಿ.

ಕನಸುಗಳು ಗರಿಗೆದರುವ ಮಧುರ ಯಾನದಲಿ
ಕೈಚೆಲ್ಲಿ ಮುದುಡಿ ಕೂರುವುದು ತರವೇನು ?
ಭರವಸೆಯ ಉಷೆ ಇರಲಿ ಎಂದಿಗೂ ಆಕಾಂಕ್ಷೆಗಳಲಿ
ಹಟಕಟ್ಟಿ ಗಿಟ್ಟಿಸಿಕೋ ಚಣ ಚಣಕೂ ಜಯವನು.

ಸರಿಸರಿಸಿ ಸಾಗುತಿರು ಮನ ಕದಡುವ ಕ್ಷಣಗಳ
ಚಿಂತೆಯ ಚಿತೆಗೆ ಬಲಿ ನೀಡದಿರು ಬದುಕನು..
ಹಿರಿಹಿಗ್ಗಿ ಆದರಿಸು ಗೆಲ್ವ ಭೇರಿಯ ನಗುಗಳ
ಹಸನುಗೊಳಿಸುತಿರು ನೂತನತೆಯಲಿ ಮನವನು.

ಹೆಣೆದ ಸ್ವಪ್ನಕೆ ಬದ್ಧವಾಗಿರಲಿ ಚರ್ಯೆಗಳ ಚಲನೆ
ವಿಮುಖಗೊಳದಿರು ಚಿಂತನೆಯ ತೊರೆದು..
ಬದುಕ ಬಂಡಿಯಲಿ ಇರಲಿ ದಕ್ಷತೆಯ ಪಾಲನೆ
ಅಪ್ಪುವುದು ಯಶದ ಸಿರಿ ಮನಸಾರೆ ನಿನಗೊಲಿದು.


ನಯನ. ಜಿ. ಎಸ್.

One thought on “ನಯನ. ಜಿ. ಎಸ್.-‘ನೀನಾಗಿರು ನೀನು..’

Leave a Reply

Back To Top