ಅರ್ಚನಾ ಯಳಬೇರು-ಕನವರಿಕೆ

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಕನವರಿಕೆ

ಕಲ್ಪನೆಯ ಪ್ರೀತಿಯಲಿ
ಕಿನಿಸೆಷ್ಟೊ ಮುನಿಸೆಷ್ಟೋ…
ಕಣ್ಣ ಕಾಡುವ ಕನಸುಗಳೆಷ್ಟೋ…
ಕತ್ತೆತ್ತಿ ನೋಡಿದರೆ ಸುತ್ತೆಲ್ಲ ಕತ್ತಲು…

ಭ್ರಮೆಯ ಬದುಕಲಿ
ಬಸವಳಿದ ಭಾವಗಳೆಷ್ಟೋ…
ಹಸಿದಾಗ ಉದರ ತುಂಬದ
ಹಸನು ಲಾಲಿತ್ಯಗಳೆಷ್ಟೋ…

ಜೀವನವ ತತ್ವಾರದ ತವರಾಗಿಸಿ
ಭಾವಗಳ ಬತ್ತಿಸಿ ಭವ್ಯತೆಗೆ
ಕಿಚ್ಚು ಹೊತ್ತಿಸಲು ಬಂದರೆಗುವ
ಬರಸಿಡಿಲುಗಳು ಅದೆಷ್ಟೋ

ಅಷ್ಟು ಇಷ್ಟುಗಳ ನಡುವೆ
ಆವರಿಸುವ ಆಪ್ತತೆಗೂ
ಆದರಿಸುವ ಮನವಿಲ್ಲದೆ
ಹಿಂತಿರುಗಿ ನಡೆದ ಘಳಿಗಳೆಷ್ಟೋ…

ಒಲವ ಭಾವದಲಿ ಒತ್ತರಿಸುವ
ನೋವುಗಳು ಚುಕ್ಕೆಗಳಂತೆ
ಮಿನುಗುತ್ತಾ ಚಿಗರೆಗಳಂತೆ ಕುಣಿವ
ಅನುಭಾವ ಉಣದವರಿಹರೇ…

ಉಂಡುಂಡು ತೇಗಿದರೂ ಹಸಿವು
ಜಠರಾಗ್ನಿಯ ದಾಹವಲ್ಲ
ಪ್ರೇಮ ಪೀಯೂಷದ ಬಯಕೆ
ಒಲವು ಚೆಲುವಿನ ಕನವರಿಕೆ…

ಬದುಕು ಚದುರಂಗದಾಟ
ಇಲ್ಲಿ ಮಧುರ ಮೈತ್ರಿಗೂ
ಮಮತೆ ಆಪ್ತತೆಗೂ ವೈರುಧ್ಯ…
ಬಡಪಾಯಿ ಕಾವ್ಯ ಕನ್ನಿಕೆಗೆ ವೈಧವ್ಯ…


ಅರ್ಚನಾ ಯಳಬೇರು

Leave a Reply

Back To Top