ಡಾ. ಜಿ. ಪಿ. ಕುಸುಮ ಕವಿತೆ-ಅನಾಥೆ

ಕಾವ್ಯ ಸಂಗಾತಿ

ಡಾ. ಜಿ. ಪಿ. ಕುಸುಮ

ಅನಾಥೆ

ಸಂಜೆಯಲ್ಲಿದ್ದಾಳೆ ಆಕೆಯೀಗ
ಬೆಳಗು ಮಧ್ಯಾಹ್ನದ
ಕೈ ಹಿಡಿಯುವ ಮುನ್ನವೇ
ವಿಕಾರ ಕಾಲುಗಳಿಂದ

ಕತ್ತಲೆಯು ಒದ್ದ ನೆನಪು ಬಣ್ಣ ಇಳಿಯದೇ
ಇನ್ನೂ ಇದೆ ಹಳೆಯ ಗೋಡೆಯ ಮೇಲೆ

ಮಧ್ಯಾಹ್ನದ ಉರಿಯಲಿ

ಮಧ್ಯಾಹ್ನದ ಉರಿಯಲಿ
ಬಾಗಿಲು ಚೀತ್ಕರಿಸಿ ಬಿದ್ದು
ಚಿಕ್ಕ ಕೊಠಡಿಯೊಳಗೆ
ಅಪರಂಜಿಯಾಗಿ ಗೋಡೆ ಮೇಲಿನ
ಬರಹಗಳನ್ನು ಓದುವುದು
ಇನ್ನೂ ನಡೆದೇ ಇದೆ.

ಕಸವನ್ನು ಅಬ್ಬರದಿಂದ
ಮರಳದಂಡೆಗೆ ನೀಡಿ
ಮರಳುವ ಅಲೆಗಳಂತೆ
ಕಾಲ ಚೆಲ್ಲುವ ಹಳೆಯ ನೆನಪುಗಳಿಗೆ
ಗೋರಿ ಕಟ್ಟಲು ಉಳಿದು ಹೋಗಿವೆ.
ಶಿಥಿಲವಾಗಿದೆ ಭಾವಕೋಟೆ.

ನಂಬಿ ನಿರ್ವಿಕಾರ ಮಳೆಗೆ ಒದ್ದೆಯಾಗಿ
ರಕ್ಷಿಸಿದ ಪುಟ್ಟ ಹಕ್ಕಿಗಳು
ಇಂದು ಬೆಳೆಯುತ್ತಾ ಬೆಳೆಯುತ್ತಾ
ರೆಕ್ಕೆ ಬಿಚ್ಚಿ ಹಾರಿ ಹೋಗಿವೆ
ಗೋಡೆಯ ಮೇಲೆ ಅವುಗಳ
ಹಿಕ್ಕೆ ಚಿತ್ರ ತೆಪ್ಪಗೆ ಕೂತಿವೆ.

ವರ್ತಮಾನದಲ್ಲಿ
ಸಾಲು ಹಿಡಿದು ಸಾಗುವ
ನಾನು ಹುಟ್ಟಿದ್ದೇಕೆ ಎನ್ನುವ ಪ್ರಶ್ನೆ
ಈಗ ವಿಮಾನ ಎದ್ದು ಹೊರಟಾಗಿನ
ಸದ್ದಿನಂತೆ ಹಿಂಬಾಲಿಸುತ್ತಿದೆ.


ಡಾ. ಜಿ. ಪಿ. ಕುಸುಮ

Leave a Reply

Back To Top