ಗಂಡಸರಿಗೆ ಮಾತ್ರ !ಭಾರತಿ ಆದೇಶ್ ಹೆಂಬಾ-ಲಲಿತ ಪ್ರಬಂಧ

ಪ್ರಬಂಧ ಸಂಗಾತಿ

ಭಾರತಿ ಆದೇಶ್ ಹೆಂಬಾ

ಗಂಡಸರಿಗೆ ಮಾತ್ರ

ಜಿಗರಿ ದೋಸ್ತ್ರು ಈ ರಾಮಣ್ಣ ಭೀಮಣ್ಣ ಗ ಆದ ಖುಷಿಗೆ ಅವರನ್ನ ಇಡಿಯಂಗಾ ಇಲ್ಲ ಬುಡ್ರಿ ಯಾರೂ. ಯಾಕಂದ್ರ ರಾಮಣ್ಣ ಹೆಸರಿಗೆ ತಕ್ಕಂಗ ರಾಮ ಇದ್ದಂಗನ ಒಬ್ಬಾಕಿನ ಎಣ್ತಿ, ಮೂವ್ವಾರು ಎಣಮಕ್ಳು, ಆದ್ರ ಇಂವ ಭೀಮಣ್ಣ ಅದಾನಲಾ ಸ್ವಲ್ಪ ಬೆರಿಕಿ ಮನಸ್ಯಾ, ಇಂವಗ  ಇಬ್ರು ಎಂಡ್ರು , ಇಬ್ರು ಎಣಮಕ್ಳು. ತಮ್ ಹಳ್ಯಾಗ ಯಾವಾಗ್ಲೂ ಇಬ್ರೂ ಜತಿ ಮ್ಯಾಲಾ ಅಡ್ಡಾಡೋರು. ಎಲ್ಲೋದ್ರೂ ಇಬ್ರೂ ಜತಿ ಮ್ಯಾಲಾ. ಇಬ್ರೂ ಜಿಪುಣ್ರಾ. ಆದ್ರ  ಪಾಪ ಯಾರಿಗೂ ಕೇಡ ಮಾಡಿದವ್ರೂ ಅಲ್ಲ. ಒಬ್ರಿಗೂ ಸಹಾಯ ಮಾಡಿದವ್ರೂ ಅಲ್ಲ. ತಾವಾತು ತಮ್ ಕೆಲಸಾತು. ಅಂಗಿರತಿದ್ರು. ಊರಾಗ ಒಳ್ಳೇದರ ಇರ್ಲಿ ಕೆಟ್ಟದರ ಇರ್ಲಿ ಇವ್ರಾ ಬಂದ ಬುಡಾರು. ಮದವಿ ಮುಂಜೀಗನೂ ಇವ್ರ, ಹೆಣ ಎತ್ತಾ ಕೆಲಸಕ್ಕುನೂ ಇವ್ರ‌‌. ಅಪ್ಪಿ ತಪ್ಪೀನು ತಮ್ಮನೀ ಎಣಮಕ್ಳನ್ನ ಕಳಸ್ತಿದ್ದಿಲ್ಲ ಮಾರಾಯರು. ತಾವಾ ಬರೋರು ಜತೀ ಮ್ಯಾಲ.  ಇವರನ್ನ ನೋಡಿದ ಊರಾನ ಮಂದೀ….. “ಬಂದ್ರ ನೋಡ್ ಗಂಡ್ ದಿಕ್ಕಿಲ್ಲದ ಸಂಗ್ಯಾ-ಬಾಳ್ಯಾ..” ಅಂತ ಆಡಿಕೆಂತಿದ್ರು. ಪಾಪ ಇವ್ರಿಗೆ ಕೇಳ್ಸಿದ್ರೂ, ಕೇಳಿಸಿಲ್ಲನಪ ಅನ್ನಂಗ ಸುಮ್ ಇರತಿದ್ರು. ಆದ್ರ ಇವತ್ತು ಇವರ ಕುಷೀಗೆ ಕಾರಣ ಏನಪಾಂದ್ರ…… ಈ ವಸಾ ಸರ್ಕಾರ ಮಾಡಿರ ಗೋಷಣೆಗಳು! ಈ ಸರಕಾರದಾಗ ಗಣಮಗ ಆಗಿ ಉಟ್ಟಿದಂವಗ ಏನ್ ಫಾಯ್ದಾ ಐತೇಳ್ರಿ. ಎಲ್ಲ ಅವ್ರೀಗೇ ಎಣಮಕ್ಳಿಗೆ. ಎರಡ ಸಾವ್ರ ರುಪಾಯಿ ಫ್ರೀ…… ಬಸ್ ಫ್ರೀ…… ಅಕ್ಕೀ ಫ್ರೀ…… ಕರೆಂಟ್ ಫ್ರೀ….. ಎಲ್ಲ ಫ್ರೀ…..ಫ್ರೀ…..ಫ್ರೀ….. ಅಂದ್ ಮ್ಯಾಲ ಇವ್ರಿಗೆ ಕುಷೀ ಹೆಂಗ್ ಆಗಾಂಗಲ್ಲ ನೀವಾ ಏಳ್ರೀ…. ರಾಮಣ್ಣ ಭೀಮಣ್ಣಗ ಕುಷೀನ ಕುಷಿ. ಇದಾ ಕುಷೀಗೆ, “ಮಂತ್ರಾಲಯಕ್ಕ ಓಗಿ ಬಂದ್ ಬುಡಾಮ ನಡ್ಯಪಾ, ಮುಂದ ಏನಾಗಾದ ಏನಿಲ್ಲ, ಈಗ ಓಗಿ ಬಂದು ಬುಡಾಮ್ ನಡೀ” ಅಂತ ಪ್ಲ್ಯಾನ್ ಮಾಡಿಕೆಂಡ್ರು. ಸರಕಾರೀ ಬಸ್ಸಿನ್ಯಾಗಾ ಅಂತ ಬ್ಯಾರೆ ಏಳಾದು ಬೇಕಾಗಿಲ್ಲ ಅನ್ಕಂತೀನಿ. ಹೌದಲ್ಲ ?….. ಪಸ್ಟ್ ಟೈಮ್ ಇಬ್ರ ಮನ್ಯಾಗಿನ ಎಣಮಕ್ಳನ್ನ ಕರಕಂಡು ಒಂಟ್ರು. ಮಂತ್ರಾಲಯಕ್ಕ. ಎರಡಾ ಮನಿಯಿಂದ ಬರಬ್ಬರಿ ಆರ ಮಂದಿ ಎಣಮಕ್ಳು…..ಇಬ್ರು ಗಣಮಕ್ಳು. ಬಸ್ಸಿನ ಕರ್ಚಂತೂ ಭಾಳ ಕಮ್ಮೀ ಬರ್ತದ.  ಊಟದ ಕರ್ಚೂ ಭಾಳ ಮಾಡೋದು ಬ್ಯಾಡಾ ಅಂತ ಮಾತಾಡಿಕೆಂಡು…. ಮೂರದಿನಕ್ಕಾಗಟು ಕಟಗ ರೊಟ್ಟೀ, ಕಡ್ಲೀ ಪುಡಿ, ಗುರಳ್ ಪುಡಿ, ಬೊಳ್ಳೊಳ್ಳಿ ಚೆಟ್ನಿ, ಒಂದಿಷ್ಟು ಉಳ್ಳಾಗಡ್ಡೀ…. ಎಲ್ಲ ಕಟಿಗೆಂಡು ಹೊಂಟ್ತ್ಯು ಇವ್ರ ಸವಾರಿ ಮಂತ್ರಾಲಯದ ಕಡಿಗೆ, ಅದೂ ಸರಕಾರಿ ಬಸ್ಸಿನ್ಯಾಗ.

ಮಂತ್ರಾಲಯಕ್ಕ ಓಗಬೇಕಂದ್ರ ಮೊದ್ಲು ಇವ್ರು ತಮ್ಮೂರು ಮಸ್ಕಿಯಿಂದ ಸಿಂಧನೂರಿಗೆ ಓಗಬೇಕು. ಅಲ್ಲಿಂದ ರಾಯಚೂರು, ಮತ್ ಅಲ್ಲಿಂದ ಮಂತ್ರಾಲಯ. ರಾಮಣ್ಣ ಭೀಮಣ್ಣ ನ ಸಂಸಾರ ಸಮೇತದ ಸವಾರಿ ಸಿಂಧನೂರು ಬಸ್ ನಿಂದ ಸುರುವಾತು. ಎಪ್ಪಾ…… ಬಸ್ಸಿನ ತುಂಬಾ ಎಣಮಕ್ಳಾ. ಅಲ್ಲೊಬ್ರು ಇಲ್ಲೊಬ್ರು ಗಣಮಕ್ಳು. ಮೊದ್ಲ ಜಿಪುಣರಾದ ರಾಮಣ್ಣ ಭೀಮಣ್ಣಗ ಆದ ಖುಷಿ ಏನಂದ್ರ ಅರವತ್ತ ರುಪಾಯಿದಾಗ ಎಂಟು ಮಂದಿ ಸಿನ್ನೂರ ಮಟ ಹೊಂಟಿದ್ದು. ಲೆಕ್ಕ ಹಾಕಿದ್ದ ಹಾಕಿದ್ದು. ಮೊದ್ಲ ಆಗಿದ್ರ ಇನ್ನೂರ ನಲವತ್ತು ರುಪಾಯಿ ಬೇಕಾಕ್ಕಿತ್ತು. ಈಗ ಬರೀ ಅರವತ್ತ. ಇನ್ನು ಮಂತ್ರಾಲಯಕ್ಕ ಓಗಿ ಬರದರಾಗ ಎಷ್ಟು ಉಳಿತೈತೋ…..ಏನೋ….ಎಪ್ಪಾ….. ಒಳಗೊಳಗ ಕುಷಿ. ಆ ಬಸ್ಸಿನ್ಯಾಗಿನ ಕಂಡಕ್ಟ್ರೂ ಎಣಮಗಳ ! ಅಕಿ ನೋಡಿದ್ರ ಗೊಣಗಕತ್ತಿದ್ಲು. “ಇಟತ್ತಿಗೆ ಎರಡ ಸಾವ್ರ ಕಲೆಕ್ಷನ್‌ ಆತಿತ್ತು ನೋಡ್ರಿ, ಇವತ್ತು ಐನೂರು ರುಪಾಯಿ ಆಗಿಲ್ಲ” ಆಯಮ್ಮನ ಚಿಂತಿ. ಅಕಿ ಮಾತಿಗೆ ಹಿರ್ಯಾರು ಒಬ್ರು, “ಎಂಗಾಕೈತ್ ಬೆ ಯವ್ವ, ಬಸ್ಸಿನ ತುಂಬ ಬರೆ ಎಣಮಕ್ಳಾ ತುಂಬ್ಯಾರ”


“ಹೌದ್ ನೋಡ್ ಯಜ್ಜ…. ಮೂರ ದಿನ ಆತ ನೋಡ್…. ಹಿಂಗಾ ಹೊಂಟೈತಿ” ಅನ್ನೋ ಹೊತ್ತಿಗೆ, ಬಸ್ಸಿನ್ಯಾಗಿದ್ದ ಮತ್ತೊಬ್ಬ ಎಣಮಗಳು,     “ಯವ್ವ ಕಂಡಕ್ಟ್ರು ನೀನು ಒಬ್ಬ ಎಣಮಗಳಾಗಿ ಇಂಗ್ ಮಾತಾಡ್ತೀಯಲಬೇ ಯವ್ವ. ಇಷ್ಡು ವರ್ಸ ಮನ್ಯಾಗ ಕುಂತು ಕುಂತು ಸುಂದಾಗಿದ್ವಿ ಈಗ ಫ್ರೀ ಐತಂತ ನಮ್ಮನ್ನ ಹೊರಾಗ ಬುಟ್ಟಾರ….. ಅದಕ ಕುಷಿಯಿಂದ ಒಂದೀಟು ಒರಾಗ ಅಡ್ಯಾಡ್ಕೆಂಡು ಬರಾಮ ಅಂತ ಹೊಂಟ್ರ ನೀ ಏನಬೇ ಇಂಗ್ ಮಾತಾಡ್ತೀ……. ನಿನಗೇನವ ಗಣಮಕ್ಳನ್ನರ ಕರಕೊಂಡ ಹೋಗ್ಲಿ, ಎಣಮಕ್ಳನ್ನರ ಕರಕೊಂಡ ಹೋಗ್ಲಿ ನಿನ್ನ ಪಗಾರ ನಿನಗ ಬರತೈತಿಲ್ಲ. ಸುಮ್ ಕುಂದ್ರ ಮತ್ತೆ” ಆಯಮ್ಮಗ ಸಿಟ್ಟು ಬಂದಿತ್ತು. ಇನ್ನೂ ಮಾತು ಬೆಳಿತಿತ್ತ ಏನ. ಸಿಂಧನೂರ ಬಂತು. ಎಲ್ರೂ ಆ ಬಸ್ ಇಳದ್ರು. ರಾಮಣ್ಣಗ ಮಂತ್ರಾಲಯದ ಜತಿಗೆ ಮತ್ತೊಂದು ಆಲೋಚನೆ ಬಂತು. ರಾಯಚೂರಿಗೆ ಓಗಾ ದಾರಿಯಾಗ ಕಲ್ಲೂರ ಬರತೈತಿ. ಮಹಾಲಕ್ಷ್ಮಿ ದೇವಸ್ಥಾನ ಇರೋ ಊರು. ಯಾಕ ಓಗಬಾರದು ? ಅಷ್ಟಕ್ಕೂ ಕಳಕಳಾದೇನೈತೆ ? ಕಲ್ಲೂರು ಮಹಾಲಕ್ಷ್ಮಿ ಗೂ ಓದರಾತು ಅನಕಂಡ್ರು. ಬಸ್ಸಿಗೆ ಕಾಯಕತ್ತಿದ್ರು.

      ಮಂತ್ರಾಲಯ ಬಸ್ ಬಂದ ಬುಡ್ತು. ಇನ್ನೇನು ಇವ್ರು ಹತ್ತಬೇಕು ಅನ್ನದರಾಗ ಅದರ ಕಂಡಕ್ಟರು ಕಿಡಿಕ್ಯಾಗ್ಲಿಂದ ಒದರಾಕತ್ತಿದ್ದ, “ಇದು ಮಂತ್ರಾಲಯ ಬಸ್ ನೋಡ್ರಿ, ಯಾರಿಗೂ ಫ್ರೀ ಇಲ್ಲ, ಗಣಮಕ್ಳೂ ರೊಕ್ಕ ಕೊಡಬೇಕ್, ಹೆಣಮಕ್ಳೂ ರೊಕ್ಕ ಕೊಡಬೇಕ್ ನೋಡ್ರೀ” ಹಿಂಗ್ ಅವ ಒದರಾಕತ್ತಿದ್ ಕೇಳಿ ಎಲ್ರೂ ಹಿಂದಕ್ಕ ಸರ್ಕಂಡ್ರು. ಆ ಬಸ್ಸು ಖಾಲಿ ಖಾಲಿ.  ಹದಿನೈದ್ ನಿಮಿಷ ಕಾದ ಮ್ಯಾಲ ಮತ್ತೊಂದ ಬಸ್ ಬಂತು. ಅದೂ ಮಂತ್ರಾಲಯದ್ದ…… ಕಂಡಕ್ಟರ್ ನಿಂದ ಅದ ಅನೌನ್ಸ ಮೆಂಟು. ಮತ್ ಹಿಂದಕ್ಕ್ ಸರಕಳದು. ಇದಾ ಆತು. ನಾಕು ಬಸ್ ಬಂದ್ವು. ಎಲ್ಲವೂ ಮಂತ್ರಾಲಯದ್ವ, ಆದ್ರ ಹತ್ತಾಂಗಿಲ್ಲ ರೊಕ್ಕ ಕೊಡಬೇಕಾತೈತೆ. ಇದೇನಪಾ ಈ ಸ್ಕೀಮು ಮೂಗಿಗೆ ತುಪ್ಪ ಹಚ್ವಿದಂಗಾತಲ. ತಿನ್ನಾಕೂ ಬರಾಂಗಿಲ್ಲ,  ವಾಸನಿನೂ ಬಿಡಾಂಗಿಲ್ಲ. ಎರಡು ತಾಸು ಕಾದ್ರು. ನಾಕು ಬಸ್ ಹ್ವಾದ್ವು ಎಲ್ಲವೂ ಮಂತ್ರಾಲಯದ್ವ…… ಐದನೇ ಬಸ್ ಬಂತು. ಅದು ಮಂತ್ರಾಲಯದ್ದಾಗಿರಲಿಲ್ಲ, ಆದ್ರ ಹೈದರಾಬಾದ್ ಕ್ಕೆ ಓಗಾದು. ಅದರಾಗೂ ಓಗಂಗಿಲ್ಲ…… ಏನಪ್ಪಾ ಈ ಸ್ಕೀಮು ಅಂತ ಗೊಣಿಗಿಕೊಂತ ಮೂರ್ ತಾಸು ಕಾದ್ರು. ಕಡೀಗೆ ಒಂದು ರಾಯಚೂರು ಬಸ್ ಬಂತು. ಕಾಯಕತ್ತಿದವ್ರು ಎರಡ ಬಸ್ಸಿಗಾಗುವಷ್ಟ ಮಂದಿ. ಬಂದದ್ದು ಒಂದ ಬಸ್ಸು. ನೂಕ್ಯಾಡಿ, ಬಾಯಿಮಾಡಿ, ಕಿಡಿಕ್ಯಾಗಲಾಸಿ ಜಿಗದು,  ಸೀಟ್ ಇಡಕಂಡವ್ನ ಗಣಮಗ. ಆದ್ರೂ ಪುಗಸೆಟ್ಟೆ ಬಸ್ಸಲ ಒಗಾಕ ಬೇಕು. ಒಂಟ್ರು. ಇಂತಾ ಗದ್ದಲದಾಗ ಆ ಬಸ್ಸಿನ್ಯಾಗ ಇಂಡಿಯನ್ ಎಕಾನಮಿ ಬಗ್ಗೆ, ನಮ್ಮ ಸ್ಟೇಟ್ ಎಕಾನಮಿ ಬಗ್ಗೆ ಮಾತಾಡೋ ಬುದ್ಧಿಜೀವಿಗಳೂ ಇದ್ರು. ಅವ್ರು ಈ ಬಸ್ ಫ್ರೀ ಸ್ಕೀಮಿನಿಂದ ನಮ್ಮ ರಾಜ್ಯಕ್ಕ ದಿನಕ್ಕ ಒಂದುವರಿ-ಎರಡು ಕೋಟಿ ರುಪಾಯಿ ಲಾಸ್ ಆಕೈತಿ. ಅದನ್ನ ಮತ್ತೆ ನಮ್ ತಲಿ ಮ್ಯಾಗ ಕಟ್ಟತಾರ ಅಂತ ಒಬ್ರು ಅನ್ನವ್ರು, ಹಿಂಗಾ ಆದ್ರ ನಮ್ಮ ರಾಜ್ಯ ದಿವಾಳಿ ಆಕೈತಿ ಅಂತ ಮತ್ತೊಬ್ರು, ಬಗಲಾಗಿನ ಶ್ರೀಲಂಕಾ, ಪಾಕಿಸ್ತಾನ ಹ್ಯಾಂಗ್ ದಿವಾಳಿ ಆಗ್ಯಾವ್ ನೋಡೀರಿಲ್ಲ, ಹಂಗ ನಮ್ಮ ರಾಜ್ಯ ಆಕೈತಿ ಅನ್ನವ್ರು. ದಿ ಗ್ರೇಟ್ ಎಕಾನಾಮಿಸ್ಟ್ಸ್…… ಅವ್ರ ಮಾತು ಕೇಳಿಕೆಂತ ಕೇಳಿಕೆಂತ ಕಲ್ಲೂರು ಮುಟ್ಟವತ್ತಿಗೆ ಮದ್ಯಾಹ್ನ ಕಳದು ಸಂಜಿ ಆಗಾಕತ್ತಿತ್ತು. ರಾಮಣ್ಣ ಭಿಮಣ್ಣನ ಫ್ಯಾಮಿಲಿಯವ್ರು ಕಷ್ಟ ಪಟ್ಟು ಕಲ್ಲೂರ ಮಹಾಲಕ್ಷ್ಮಿ ಯ ದರ್ಶನ ಮಾಡಿಕೆಂಡ್ರು. ಅಲ್ಲೆ ತಾವ್ ತಂದಿದ್ದ ಕಟಗ ರೊಟ್ಟಿ, ಜತಿಗೆ ಗುರಳ್ ಪುಡ್ಯಾಗ ಎಣ್ಣಿ ಆಕ್ಯಂಡು, ಉಳ್ಳಾಗಡ್ಡಿ ಜೆಜ್ಜಿಕೆಂಡು ತಿಂದ್ರು. ಅದರ ರುಚೀನಾ ಬ್ಯಾರೆ ಬುಡ್ರಿ. ಮತ್ತೆ ಅವರ ಪ್ರಯಾಣ ರಾಯಚೂರಿನ ಕಡೀಗೆ.

ಈಗಾಗಲೇ ಲೇಟಾಗಿ ಕತ್ಲಾಗಕತ್ತಿತ್ತು. ಇವ್ರು ಕಲ್ಲೂರ ಬಸ್ಟ್ಯಾಂಡಿನಾಗ ಕಾಯಕತ್ತಿದ್ರು.
ತಡಾ ಆದ್ರೂ ಚಿಂತಿಲ್ಲ ಒಂದ ಬಸ್ ಬಂತು. ಇವ್ರೆಲ್ಲ ಹತ್ತಿ ಕುಂತಗಂಡ್ರು. ಪುಣ್ಯಕ್ಕ ಈ ಸಲ ಭಾಳ ಗದ್ಲ ಇರಲಿಲ್ಲ. ಸೀಟ್ ಲೆವೆಲ್ ಮಂದಿ ಇದ್ರು. ಸಮಸ್ಯೆ ಬಂದದ್ದು ಇಲ್ಲೇ.

ವಸ ರೂಲ್ಸಿನ ಪ್ರಕಾರ ಆ ಬಸ್ಸಿನ್ಯಾಗಿನ ಅರ್ಧ ಸೀಟುಗಳಿಗೆ “ಗಂಡಸರಿಗೆ ಮಾತ್ರ” ಅಂತ ಬರಸಿದ್ರು. ಇವ್ರ ಜತಿಗೆ ಅದ ಊರಿನಿಂದ ಇಬ್ರು – ಒಬ್ಬ ಗಣಮಗ ಇನ್ನೊಬ್ಬಾಕಿ ಎಣಮಗಳು ಹತ್ತಿದ್ರು. ಆ ಬಸ್ಸಿನ್ಯಾಗ ಉಳದದ್ದು ಒಂದ ಸೀಟು. ಆ ಎಣಮಗಳು ಅವಸರೌಸರ ಮಾಡಿ ಉಳಿದಿದ್ದ ಆ ಒಂದ್ ಸೀಟ ಇಡಕಂಡು ಕುಂತಗಬುಟ್ಲು. ಆ ಮನಿಸ್ಯಾನಿಗೋ ಉರಿಯಾಕತ್ತಿತ್ತು. ವಟ ವಟ ಅನಕಂತ ನಿಂತಿದ್ದ. ಕಂಡಕ್ಟ್ರು ಎಲ್ಲರವು ಟಿಕೀಟ ಮಾಡಿಕೆಂತ ಇವ್ರತಾಗ ಬಂದ. ಆ ಮನಿಸ್ಯಾ ಮೂವತ್ತು ರುಪಾಯಿ ಕೊಟ್ಟು ರಾಯಚೂರ ಟಿಕೀಟ್ ತಗಂಡ. ಆಯಮ್ಮ ? ಲ್ಯಾಮಿನೇಶನ್ ಮಾಡಿದ ಆಧಾರ್ ಕಾರ್ಡ್ ಇಡಕಂಡ ಕುಂತಿದ್ಲು. ತೋರಿಸಿದ್ಲು. ಕಂಡಕ್ಟರ್ ಜೀರೋ ರುಪಾಯಿ ದು ಟಿಕೀಟ್ ಕೊಟ್ಟು ಮುಂದಕೋದ. ಆ ಮನಿಶ್ಯಾನೋ ಆಯಮ್ಮನ್ನ  ನೋಡಿ ಮೊದ್ಲಾ ಉರಕಣಕತ್ತಿದ್ದ, ಇನ್ನ ಆಯಮ್ಮ ರೊಕ್ಕ ಕೊಡಲಾರದ್ದು ನೋಡಿ ಸುಮ್ಕಿರತಾನನು ? ಮತ್ತಷ್ಟು ವಟ ವಟ ಸುರು ಮಾಡಿದ. “ರೊಕ್ಕ ಕೊಡಾಕ ಮಾತ್ರ ಇಲ್ಲ. ಎಲ್ಲ ಪುಗಸೆಟ್ಟೆ ಆಗಬೇಕು, ಮತ್ ಸೀಟುನೂ ಬೇಕ್ ಇವ್ರಿಗೆ……” ಹಿಂಗ್ ಗೊಣಗಾಕತ್ತಿದ್ದವ್ನಿಗೆ ಒಮ್ಮಿಂದೊಮ್ಮಿಗೆ ಹುರುಪು ಬಂದ್ ಬುಡ್ತು. ಯಾಕಂದ್ರ “ಗಂಡಸರಿಗೆ ಮಾತ್ರ” ಅನ್ನೋ ಬೋರ್ಡ್ ಅವನಿಗೆ ಕಂಡಿತ್ತು. ಅಸ್ಟ ಬೇಕಾಗಿತ್ತವ್ನಿಗೆ, “ಬೇ…. ಎದ್ದೇಳು ಅದು ಗಂಡಸರು ಕುಂದ್ರ ಸೀಟು ಎದ್ದೇಳು.”
ಆಯಮ್ಮ ನೂ ಹಗರಲ್ಲ,
“ಯಾಕಪಾ….ಎಂಗ್ ಕಾಣತ್ತ….. ಒಡ್ಯಾಡಿ ನಾ ಸೀಟ್ ಇಡದೀನಿ ಕುಂತೀನಿ. ಬೇಕಿದ್ದತ ನೀನು ಗಣಮಗ ಇಡಿಬೇಕಾಗಿತ್ತು.ಕುಂತ ಮ್ಯಾಲ ಈಗ ಬಂದು ಎದ್ದಳು ಯಾರ ಎದ್ದಳತರ ನಾ ಬುಡಾಂಗಿಲ್ಲ ನೊಡ್”
“ನೋಡವಾ ಅದು ಗಂಡಸರ ಸೀಟು ನನಗ ತಲಿ ಕೆಡಸಬ್ಯಾಡ ಸುಮ್ಕೆ ಎದ್ದೆಳು”
“ರೂಲ್ಸು…. ಎಲ್ಲೈತಿ ರೂಲ್ಸು ತೋರಸ ನೋಡಾಮ….. ರೂಲ್ಸಂತ ರೂಲ್ಸ”
“ಅಲ್ಲವಾ ನೀವು ಫ್ರೀ ಅಡ್ಯಾಡಕತ್ತೀರಿಲ್ಲ, ಅದು ಗೊತೈತೆ ಇದು ಗೊತ್ತಿಲ್ಲನು ? ಅವಾಗ ಇದನ್ನ ಮಾಡ್ಯಾರ. ಅದರ ಸಲುವಾಗೇ ಇಲ್ಲಿ ಬರಸ್ಯಾರ ಕಣ್ ಕಾಣದಲನು ? ಮತ್ ಬ್ಯಾರೆ ತೋರಬಕನು ?”
“ಏ ಅವೆಲ್ಲ ಗೊತ್ತಿಲ್ಲ ನೋಡಪಾ ನಾ ಮೊದ್ಲ ಬಂದ್ ಸೀಟ್ ಇಡದೀನಿ ನಾ ಬುಡಾಕೆಲ್ಲ”
“ಬುಡಾಕೆಲ್ಲ ಅಂದ್ರ ಬಸ್ಸು ನಿಮ್ ತಾತನ ಮನೀದನು…” ಅವರ ಜಗಳ ಮುಗಲ ಮುಟ್ಟಿತು. ಬಸ್ಸಿನ್ಯಾಗಿದ್ದ ಯಾರು ಹೇಳಿದರೂ ಇಬ್ರೂ ಕೇಳಾವಲ್ರು….. ಕೊನಿಗೆ ಆಯಮ್ಮ ಹಠವಾದಿ, “ನೋಡಪಾ ನಾ ಸತ್ರೂ ನಿನಗ ಸೀಟ್ ಬುಟ್ ಕೊಡಾಂಗಿಲ್ಲ.”
“ನೀ ಸಾಯದ ತಗಂಡ ನಾನೇನ್ ಮಾಡ್ಲಬೇ ನನಗ ಸೀಟ್ ಬೇಕು ಎದ್ ಬಾ ಅಟ, ಏ ಕಂಡಕ್ಟರ ಎಬಸ್ತ್ಯಾ ಇಲ್ಲ ಇಕಿನ್ನ, ನಿನ್ನ ಮ್ಯಾಲ ಕಂಪೇಂಟ್ ಮಾಡತಿನಿ ನೋಡ್” ಆವಾಜ್ ಹಾಕಿದ.
ಕಮ್ಮಿ ಇಲ್ಲ ಆಯಮ್ಮನು, “ಏ ಕಂಡಕ್ಟರ ಬಾರಪ ಇಲ್ಲಿ ತಗ ಮೂವತ್ತು ರುಪಾಯಿ ಟಿಕೀಟ್ ಕೊಡು. ನೋಡಾಮ ಇತನ್ನ ಎಂಗ್ ಎಬಸ್ತಾನ್ ನನ್ನ” ಅಂತೇಳಿ ಟಿಕೀಟ್ ತಗಂಡ್ಲು.

ಆ ಮನಿಶ್ಯಾ….. ಸ್ವಲ್ಪ ಮೆತ್ತಗಾದ. ಕೊನಿಗೂ ಇವರ ಜಗಳ ತಮಣಿ ಅತಲಪಾ ಅಂತ ಬಸ್ಸಿನ್ಯಾಗಿದ್ದ ಮಂದಿಗೆ ಸಮಾಧಾನ ಆತು. ಆದ್ರ ಒಮ್ಮಿಂದೊಮ್ಮಿಗೆ ಆ ಮನಿಶ್ಯಾಗ ಏನಾತ ಏನ ಮತ್  ಹೊಸಾದ್ ಸುರು ಮಾಡಿದ. “ನೋಡವಾ ನೀ ರೊಕ್ಕ ಕೊಟ್ಟೀಯಾ ಬುಟ್ಟೀಯಾ ನಂಗೊತ್ತಿಲ್ಲ. ಅದು ಗಂಡಸ್ರು ಕುಂದ್ರ ಸೀಟು. ನೀನು ಗಂಡಸಲ್ಲ ಆ ಸೀಟ್ ಬುಟ್ ಕೊಡು ಅಟ್ಟ”
ಅವನ ಮಾತ್ ಕೇಳಿ ಬಸ್ಸಿನ್ಯಾಗ ಇರವ್ರೆಲ್ಲ ನಕ್ಕಿದ್ದಾ ನಕ್ಕಿದ್ದು. ಹಿಂದ ಕುಂತವ್ನ್ಯಾರೋ ಒಬ್ಬ “ಹೌದ್ದ….ಹುಲಿಯಾ” ಅಂದ. ಅಷ್ಟರೊಳಗ ಕಂಡಕ್ಟರ್ ಸೀಟಿ ಒಡದ. ಕಡಿಗೂ ಅಕಿಗೆ ರೊಕ್ಕ ಕೊಡಾದ ತಪ್ಪಲಿಲ್ಲ, ಅವನಿಗೆ ಸೀಟ್ ಸಿಗಲಿಲ್ಲ. ರಾಯಚೂರು ಬಂತು ಆದ್ರ ಆಗಲೇ ರಾತ್ರಿ ಹತ್ತಗಂಟಿ ಆಗಿತ್ತು. ಮುಂದ ಮಂತ್ರಾಲಯಕ್ಕ ಲೋಕಲ್ ಬಸ್ ಇದ್ದಿದ್ದಿಲ್ಲ. ಏನ್ಮಾಡಾದು ? ರಾಮಣ್ಣ, ಭೀಮಣ್ಣ ಚಿಂತಿ ಮಾಡಾಕೆಂತ ಕುಂತ್ರು. ಏನ್ಮಾಡತಿ ರಾತ್ರಿ ಬಸ್ಟ್ಯಾಂಡಿನಾಗ ಮಕ್ಕಳಮ ಅಂತ ತೀರ್ಮಾನ ಮಾಡಿದ್ರು ಆ ಜಿಪುಣಾಗ್ರೇಸರರು. ಅಲ್ಲೀ ತನಕ ಸುಮ್ಕೆ ಇದ್ದ ಭಿಣ್ಣನ ಇಬ್ರೂ ಎಂಡ್ರು ಸಿಡಿದೆದ್ರು. “ಇಲ್ಲಿ ತನಕ ನೀವೇಳಿದಂಗ ಕೇಳೀವಿ, ಇನ್ಮುಂದ ಆಗಲ್ಲ. ರಾತ್ರಿ ಉಳ ಕಡಿಸಿಕೆಂತ ಈ ಬಸ್ಟ್ಯಾಂಡಿನಾಗ ನಮಗ ಮಲಗಾಕಾಗಲ್ಲ. ಲಾಡ್ಜಿಂಗ್ ಮಾಡಿದ್ರ ನಾವಿರತೀವಿ. ಇಲ್ಲಂದ್ರ ಹೊಳ್ಳಿ ಊರಿಗೆ ಹೊಕ್ಕೀವಿ. ನೀವ ಹೋಗ್ರಿ ಮಂತ್ರಾಲಯಕ್ಕರ ಹೋಗ್ರೀ,….. ತಿರುಪತಿಗರ ಹೋಗ್ರೀ….. ನಮ್ಮನ್ನ ಕೈ ಬುಡ್ರಿ” ಅದು ಅವ್ರ ಕಡೇ ತೀರ್ಮಾನ ಆಗಿತ್ತು. ಈಗ ಸಂಗ್ಯಾ-ಬಾಳ್ಯಾಗ ಬ್ಯಾರೆ ದಾರೀನ ಇಲ್ಲ. ಲಾಡ್ಜಿಂಗ್ ಹಿಡಿಲೇ ಬೇಕಾತು. ಅಲ್ಲಿ ಅವ್ರಿಗೆ ಮತ್ತೊಂದ್ ಶಾಕ್. ಲಾಡ್ಜಿಂಗ್ ಬಾಡಿಗಿ ಡಬಲ್ ಆಗ್ಯಾವು ! “ಕರೆಂಟ್ ಬಿಲ್ಲೂ, ಆಳಿನ ಖರ್ಚು,…. ಎಲ್ಲ ಡಬಲ್ ಆಗ್ಯಾವ್ರೀ ಸರ” ಅನ್ನೋ ಉತ್ರ. ಮರುದಿನ ರಾಘಣ್ಣನ ದರ್ಶನ ಹೆಂಗ್ ಮಾಡಿದರೋ ಗೊತ್ತಿಲ್ಲ, ಬೆಳತನ್ಕ ಲೆಕ್ಕ ಹಾಕೀ ಹಾಕಿ “ಇನ್‌ ಮ್ಯಾಲೆ ಎಲ್ಲಿಗೂ ಓಗಬಾರದಪಾ ಕೋಡಿ.” ಅಂತ ತೀರ್ಮಾನವನ್ನಂತೂ ಮಾಡಿದ್ತು.

——————————————–


ಭಾರತಿ ಆದೇಶ್ ಹೆಂಬಾ

One thought on “ಗಂಡಸರಿಗೆ ಮಾತ್ರ !ಭಾರತಿ ಆದೇಶ್ ಹೆಂಬಾ-ಲಲಿತ ಪ್ರಬಂಧ

  1. ತುಂಬಾ ಚಂದದ ಬರಹ ಮೇಡಂ ಅಂತೂ ಉಚಿತವಾಗಿ ಬಸ್ಸಲ್ಲಿ ಓಡಾಡಿ ಬರೋ ಹೆಣ್ಮಕ್ಳು ಎಲ್ಲಿ ಕೂರ್ತಾರ್ ನೋಡಿ ಸುಮ್ನೆ ಇರ್ಬೇಕು ಅಷ್ಟೇ ಗಂಡಸರು ಅಲ್ವಾ ಮೇಡಂ ಜಗಳ ಮಾಡಿ ಮುಗಿಸೊತ್ತಿಗೆ ಊರೇ ಬಂದುಬಿಡ್ತು

Leave a Reply

Back To Top