ಡಾ ಅನ್ನಪೂರ್ಣ ಹಿರೇಮಠ ಕವಿತೆ-ತಂಪಿನ ನೆರಳ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ತಂಪಿನ ನೆರಳ

ತಾಯವ್ವ ನೀ ತಂಪಿನ ನೆರಳಾಗಿ
ಇಂಪಾದ ಹಾಡ ಹಾಡಾಕಿ/ ನನ್ನವ್ವ
ನೀ ಸಂಪಿಗೆ ಎಸಳ ಸೊಂಪಿನಾಕಿ//

ಬೆಳಗಿಲಿ ನೀ ಎದ್ದು ಕುಟ್ಟುತ ಬೀಸುತ
ಎಲ್ಲರ ಹಾಡಿ ಹೊಗಳಾಕಿ /ನನ್ನವ್ವ
ನೀ ಬಿಸಿ ಬಿಸಿ ಅಡುಗೆ ಮಾಡಾಕಿ//

ಹೊತ್ತಾರೆ ನೀನೆದ್ದು ಊರ ಮುಂದಿನ ಹೊಲಕ
ನೀರ ಹಾಸಿ ಹೊಲ ತನಿಸಾಕಿ/ ನನ್ನವ್ವ
ನಗುವಂತ ಬೆಳೆಯ ತೆಗಿಯಾಕಿ//

ಹೊತ್ತಾರೆ ನೀ ಎದ್ದು ನೀರೊಳಿ ನೀರ ತಂದು
ರಂಜನಗಿ ಹರವಿ ತುಂಬಸಾಕಿ/ ನನ್ನವ್ವ
ಅಂಬಲಿಯ ಮಾಡಿ ತಂಪಾಗಕ್ಕಿ/

ಕೈತುಂಬ ಹಸಿರು ಬಳಿ ಕುಪ್ಪಸ ತೊಟ್ಟು
ಮೈತುಂಬ ಐದು ಪಟ್ಟಿ ರೇಸಿಮೆ ಸೀರೆ ಉಟ್ಟು
ತಲೆ ಮ್ಯಾಲ ಸೆರಗ ಹೊತ್ತು ನನ್ನವ್ವ
ಹನಿ ಮ್ಯಾಲೆ ದೊಡ್ಡ ಕುಂಕುಮ ಹಚ್ಚಾಕಿ //

ಸರಿಗೆ ಇಡಲಿಲ್ಲ ಸರದಾಳಿ ತೊಡಲಿಲ್ಲ
ನಗುವಿನ ಆಭರಣ ಬಿಚ್ಚಲಿಲ್ಲ /ನನ್ನವ್ವ
ಹೊನ್ನ ಗಿಂಡಿಯ ಹಾಲ ತೀರಿಸಲಿಲ್ಲ//

ಆಸರಕಿ ಅನಲಿಲ್ಲ ಬೇಸರಕಿ ಪಡಲಿಲ್ಲ
ಕಾಸು ಕೂಡಿಟ್ಟು ಕೆಡಲಿಲ್ಲ/ ನನ್ನವ್ವ
ದಾನ ಧರ್ಮ ಎಂದೂ ಬಿಡಲಿಲ್ಲ//

ಪತಿಗೆ ಎದುರಾಡಲಿಲ್ಲ ಸತಿ ಧರ್ಮ ಬಿಡಲಿಲ್ಲ
ಲಿಂಗ ಪೂಜೆಯನೆಂದು ತೊರೆಯಲಿಲ್ಲ/ ನನ್ನವ್ವ
ಕಾಯಕ ಬಿಟ್ಟು ಯಾರನ್ನೂ ನೆನಿಲಿಲ್ಲ//

ಗಿಂಡಿಲಿ ತುಪ್ಪ ಹಂಡೇಲಿ ನೀರು
ಬಂಡೀಲಿ ಸಂತಿ ತರುವಾಕಿ/ ನನ್ನವ್ವ
ಗುಂಡೇಲಿ ಮಜ್ಜಿಗೆ ಕಡಿಯಾಕಿ//

ಬಿರುನುಡಿ ಆಡಲಿಲ್ಲ ಬಿಂಕ ತೋರಲಿಲ್ಲ
ತನ್ನತನ ಎಂದೂ ಬಿಡಲಿಲ್ಲ/ ನನ್ನವ್ವ
ಅನ್ಯರ ಬಾಯಾಗ ಅಡಕಿ ಆಗಲಿಲ್ಲ//

ಹರಟೆ ಹೊಡಿಲಿಲ್ಲ ಗೋರಂಟಿ ಹಚ್ಚಲಿಲ್ಲ
ತಂಟೆ ತಗಾದಿ ತೆಗೆಯಲಿಲ್ಲ /ನನ್ನವ್ವ
ಗಂಟು ಮಾಡಿಟ್ಟು ಮರುಗಲಿಲ್ಲ//

ಕೆಚ್ಚೆದೆಯ ಮನದಾಕಿ ಬಿಚ್ಚು ಮಾತಿನಾಕಿ
ಅಚ್ಚು ಕಟ್ಟಾಗಿ ಇರುವಾಕಿ ನನ್ನವ್ವ
ಬಿಚ್ಚುಗತ್ತಿಯ ಚೆನ್ನಮ್ಮನಂತಾಕಿ//

ಶ್ಯಾವಿಗೆ ಬಸಿಯಾಗಿ ತುಪ್ಪಬೆಲ್ಲ ಕಲಸಾಕಿ
ಮೊಮ್ಮಕ್ಕಳಿಗೆ ಉಣಿಸಿ ನಲಿಯಾಕಿ/ ನನ್ನವ್ವ
ಮಮತೆ ಮಡಿಲ ಹಾಸಿ ಚಪ್ಪಡಿಸಾಕಿ//

ಭೇದ ಮಾಡಲಿಲ್ಲ ವಾದ ಮಾಡಲಿಲ್ಲ
ಕೆಡಕಿನ ಕಿಡಿ ಎಂದೂ ಹಚ್ಚಲಿಲ್ಲ /ನನ್ನವ್ವ
ಒಗ್ಗಟ್ಟಿನ ಮಂತ್ರ ಎಂದೂ ಬಿಡಲಿಲ್ಲ//

ತಂಗಳುನ್ನಲಿಲ್ಲ ಹಂಗೀಲಿ ಬದುಕಲಿಲ್ಲ
ಅಂಗಳದ ಮಲ್ಲಿಗೆ ಬಾಡಿಸಲಿಲ್ಲ /ನನ್ನವ್ವ
ಕಂಗಳಿನ ಕಾಂತಿ ಕುಂದಿಸಲಿಲ್ಲ//

ಅಣ್ಣ ತಮ್ಮರಿಗೆ ತಾಯಾಗಿ ಊರ ಮಂದಿಗೆ ಅವ್ವಾಗಿ
ಬಂದು ಬಳಗಕ್ಕೆ ಮಮತೆಯ ಮಡಿಲಾಗಿ/ ನನ್ನವ್ವ
ತವರಿನ ತೇರಾಗಿ ಮನದಾಗ ಉಳಿದಾಕಿ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top