ಜೆ.ಎಲ್.ಲೀಲಾಮಹೇಶ್ವರ ಮೊಗ್ಗರಳಿವೆ

ಕಾವ್ಯ ಸಂಗಾತಿ

ಜೆ.ಎಲ್.ಲೀಲಾಮಹೇಶ್ವರ

ಮೊಗ್ಗರಳಿವೆ

ಮೊಗ್ಗರಳಿ ಹೂವಾಗಿವೆ
ನಾಡು ನುಡಿಯ ಉತ್ಸವಕೆ,
ಮೊಗ್ಗರಳಿ ನಸುನಗುತಿವೆ
ಕಲೆ ಸಾಹಿತ್ಯ ಸಂಸ್ಕಾರಕೆ.

ಜುಳು ಜುಳು ಇಳಿವ ಝರಿ ನಾಟ್ಯಕೆ,
ಸುರುಸುರುಳಿ ಸುಮ ತೇಲಿವೆ,
ಗಿರಿ ಬನ ನದಿಗಳಾಟ ನೋಟಕೆ,
ಉರುಉರುಳಿ ಸುಮ ನಲಿದಿವೆ.

ಇಂಪಿನುಲಿಗೆ ಕಂಪು ಮಿಲನ,
ತರು ಲತೆ ಬನ ಸಿರಿ ಚೇತನ,
ಹಸಿರು ಡೇರೆ ರಸದ ಮೌನ,
ಸೌರಭ ಸಿರಿ ಬನದ ಸಿಂಚನ.

ಮಲೆನಾಡ ಹಸಿರುಡುಗೆಯಲಿ
ಕೋಗಿಲೆಯಿಂಚರ ಸ್ವರಗಾನಕೆ,
ಬೆಳ್ಳುವಲ ಬಯಲ ಕಾರಂಜಿಯ
ಹಾವ ಭಾವ ನರ್ತನ ನಾದಕೆ.

ಖಗಗಳೊಡನೆ ಹೂವು ದುಂಬಿ,
ರೆಂಬೆ ಕೊಂಬೆ ಟಿಸಿಲ ತುಂಬಿ,
ಪರಿಮಳದಿ ಬಿರಿದು ಹೂವರಳಿವೆ,
ಇಂಪಿನ ರಾಗ ಕೇಳಿ ನಲಿದಾಡಿವೆ.


ಜೆ.ಎಲ್.ಲೀಲಾಮಹೇಶ್ವರ

Leave a Reply

Back To Top