ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ 

ಕೊಳ್ಳುಬಾಕ ಸಂಸ್ಕೃತಿಯ ಆಯಾಮಗಳು…

“ಬದುಕು ಹಿಂದಿನಂತೆ  ಇಲ್ಲ ಮನುಷ್ಯ ಸಂಬಂಧಗಳು… ಹಲವಾರು ದ್ವಂದ್ವಗಳೊಂದಿಗೆ ಸದಾ ತಾಕಲಾಟ ನಡೆಸುತ್ತಿರುತ್ತವೆ..”

 ಒಂದು ಕಾಲದಲ್ಲಿ ಮನುಷ್ಯ ಮನುಷ್ಯರ ನಡುವೆ ಪ್ರೀತಿ ತುಂಬಿ ತುಳುಕುತ್ತಿತ್ತು ಅಂದು. ವ್ಯವಹಾರ ದೃಷ್ಟಿಯಿಂದ ನೋಡುವ ಎಷ್ಟು ಸಂದರ್ಭಗಳನ್ನು ನಾವು ಗಮನಿಸುತ್ತೇವೆ. ಅವರು ನಮ್ಮವರು, ನಮ್ಮ ಸಂಬಂಧಿಕರು, ಅಕ್ಕ, ಅಣ್ಣ, ಅವ್ವ, ಸಹೋದರಿ… ಎಲ್ಲಾ ಸಂಬಂಧಗಳನ್ನು ಮೀರಿ ಸಹಾಯ ಸಹಾಯ ಮಾಡುವ, ನೊಂದವರಿಗೆ ಅಭಯ ನೀಡುವ ಸಂದರ್ಭಗಳು ತುಂಬಾ ವಿರಳವಾಗಿವೆ. ಒಬ್ಬರು ಸಹಾಯ ಮಾಡಿದಾಗ ಇನ್ನೊಬ್ಬರು ಪ್ರತಿಫಲವನ್ನು ನಿರೀಕ್ಷಿಸುತ್ತಾರೆ.

“ನಾನು ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಅವರು ನನಗೇನು ಸಹಾಯ ಮಾಡಿದ್ದಾರೆ..?” ಎನ್ನುವ ಧೋರಣೆ ಇಂದು ಎಲ್ಲಾ ಕಡೆಗೆ ನೋಡುತ್ತೇವೆ. ತುತ್ತು ಅನ್ನ ಹಾಕಿದರು, ಬೊಗಸೆ ನೀರು ಕೊಟ್ಟವರು ಕೂಡ  ಅದರಿಂದ ಹಣವನ್ನು ಅಥವಾ  ಬೇರೆ ಯಾವುದನ್ನೋ ಬಯಸುವ ವ್ಯವಹಾರಿಕ ಮನಸ್ಥಿತಿ ನಮ್ಮೆಲ್ಲರದಾಗಿರುವುದು ದುರಂತವೆಂದೇ ಹೇಳಬಹುದು.

 ಹಿಂದೆ ಗ್ರಾಮೀಣ ಭಾಗದಲ್ಲಿ ಓಣಿಯ ಸುತ್ತಮುತ್ತಲಿನ ಜನರಿಗೆ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ ಉಚಿತವಾಗಿ ಕೊಡುವ ಉದಾರತೆ ಇತ್ತು. ಮನೆಯಲ್ಲಿ ಮಕ್ಕಳು ಅಳುತ್ತಿದ್ದಾರೆ ಅವರಿಗೆ ಹಾಲು ಇಲ್ಲ ಎಂದರೆ ಸಾಕು  ಹಿಂದೆ ಮುಂದೆ ನೋಡದೆ ಹಾಲನ್ನು ಕೊಡುತ್ತಿದ್ದರು. ಮನೆಯೊಳಗೆ ಪಲ್ಯ ಮಾಡಲಿಕ್ಕೆ ಕಾಳಿಲ್ಲ ಎಂದಾಕ್ಷಣ, ಕಾಳು ಇಲ್ಲವೇ ಹೊಲದಲ್ಲಿ ಬೆಳೆದ ತರಕಾರಿಯನ್ನು ಉದಾರತೆಯಿಂದ ನೀಡುತ್ತಿದ್ದರು. ಅದನ್ನು ಉಪಕಾರವೆಂದು ಯಾವತ್ತೂ ಭಾವಿಸಲಿಲ್ಲ. “ಅವರಿಗೆ ನಾವು – ನಮಗೆ ಅವರು” ಎನ್ನುವ ಮನೋಧೋರಣೆ ಅಂದಿನದಾಗಿತ್ತು. ಆದರೆ ಇಂದು ಒಂದು ಕೈಯಿಂದ ಕೊಟ್ಟ ಸಹಾಯ ಇನ್ನೊಂದು ಕೈ ಮತ್ತೆ ಚಾಚುವ, ಸಹಾಯ ಬೇಡುವ ಅಥವಾ ಪ್ರತ್ಯುಪಕಾರವನ್ನು ನಿರೀಕ್ಷಿಸುವ ಆಲೋಚನೆ ಸದಾ ಎಲ್ಲರಲ್ಲಿರುತ್ತದೆ.

ಏನು ಇಲ್ಲದವರ ನಡುವೆಯೂ ಎಲ್ಲಾ ಇದೆ ಎಂದು ಅಹಂಮಿನಿಂದ ಬಿಂಕ ಬಿನ್ನಾಣವನ್ನು ಮಾಡುತ್ತಾ, ಶ್ರೀಮಂತಿಕೆಯನ್ನು ಪ್ರದರ್ಶಿಸುವ, ನಮ್ಮ ಆಡಂಬರವನ್ನು ಪ್ರದರ್ಶಿಸುವ ಸಂಸ್ಕೃತಿಗೆ ನಾವು ಒಳಗಾಗಿದ್ದೇವೆ.

 ಹೌದು…! ಏನಿದು ಕೊಳ್ಳುಬಾಕ ಸಂಸ್ಕೃತಿ..?

 ಇಲ್ಲದವರ ಮುಂದೆ ಸಾಲವಾದರೂ ಚಿಂತೆಯಿಲ್ಲ ಎಲ್ಲಾ ಇದೆ ಎಂದು ತೋರ್ಪಡಿಸಿಕೊಳ್ಳಬೇಕು..!  ಮಹಿಳೆಯರಾದರೆ ಮದುವೆಗೋ, ಸಮಾರಂಭಕ್ಕೋ, ಸಭೆಗಳಿಗೋ ಹೋದರೆ ಅಲ್ಲಿ ಒಡೆವಗಳ ಪ್ರದರ್ಶನ. ಊಟ ಮಾಡಲು ಹಾಕಿಸಿಕೊಂಡ ಆಹಾರ ಪೂರ್ಣವಾಗಿ ಊಟ ಮಾಡಿದರೆ ಯಾರು ಏನು ಅಂದಕೊಂಡಾರೆಂಬ  ಸಂಕೋಚ… ಅದಕ್ಕಾಗಿ ತಟ್ಟೆಯಲ್ಲಿಯ ಅರ್ಧದಷ್ಟು ಆಹಾರವನ್ನು ಹಾಗೇ ಬಿಟ್ಟು ಚೆಲ್ಲಿ ಬಿಡುವುದು..!!  ಪಕ್ಕದಮನೆಯವರು ಎರಡು ತೊಲ ಚಿನ್ನದ ಸರ ಮಾಡಿಸಿದ್ದಾರೆಂದು ಸಾಲ ಮಾಡಿ ತಾನೂ ಚಿನ್ನದಸರ ಮಾಡಿಸಿಕೊಳ್ಳಲೇಬೇಕು ಎಂಬ ಹಠಮಾರಿತನ…ಇಂತಹ ಹಲವಾರು ಕೊಳ್ಳುಬಾಕತನದ ಆಯಾಮಗಳ ನಮ್ಮೊಳಗೆ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣುತ್ತೇವೆ.

ಇಂದು ವ್ಯಾಪಾರವೂ ಅತಿಯಾದ ಲಾಭ, ಬ್ರಷ್ಟತೆ, ಮೋಸ, ಸಿನಿಕತನದಿಂದ ಕೂಡಿದ್ದು ಮನುಷ್ಯ ಸಂಬಂಧಗಳು ಮರೆಯಾಗಿವೆ. “ದುಡ್ಡಿದ್ದರೆ ಮಾತ್ರ ದೊಡ್ಡವರು” ಎಂಬ ವಿಲಕ್ಷಣ ಸಂಸ್ಕೃತಿಯ ಆಗಮನವಾಗಿದೆ. ಅಂತಹ ಬ್ರಷ್ಟ ವ್ಯಾಪಾರಿಗಳೇ ನಮ್ಮ ನಾಯಕರು..! ಅವರೇ ನಮ್ಮನ್ನು ಆಳುವವರು..! ಅವರಿಗೆ ಸಮಾಜದಲ್ಲಿ ಗೌರವ ಸ್ಥಾನ. ಗುಣದ ಮೇಲಿನ ಗೌರವ ಗೌಣವಾಗಿರುವುದು ಇಂದಿನ ವಿನಾಶಕಾರಿ ಶಕ್ತಿಯ ಪ್ರದರ್ಶನವು ಸಾಮಾನ್ಯವಾಗಿದೆ. ಇಂತಹ ಕೊಳ್ಳುಬಾಕ ಮನಸ್ಸುಗಳು ನಮ್ಮೊಳಗಿರುವುದು ನಾಚಿಕೆಯ ಸಂಗತಿ.

ಇನ್ನು ಚಿಂತಕರು, ಸಾಹಿತಿಗಳು, ಲೇಖಕರು ಅನಿಸಿಕೊಂಡ ನಮ್ಮಂತಹವರು ಕೂಡ ಯಾವುದೋ ಒಂದು ಸಿದ್ದಾಂತಕ್ಕೆ ಕಟ್ಟುಬಿದ್ದು ಸಮಾಜಕ್ಕೆ ಒಳಿತು ಮಾಡದವರನ್ನು ಹೊಗಳುವ, ಧರ್ಮದ ಅಫೀಮು ತುಂಬಿದ ಬರಹಗಳನ್ನು ಬರೆದು, ಸಮಾಜದ ಆರೋಗ್ಯವನ್ನು ಹಾಳು ಮಾಡುವ, ಜಾತಿಯ ಲಾಬಿಯನ್ನು ಬಳಸಿಕೊಂಡು ಪ್ರಶಸ್ತಿ, ಸ್ಥಾನಮಾನ ಗಿಟ್ಟಿಸಿಕೊಳ್ಳುವ, ವಿಘಟಿತ ಮನಸ್ಥಿತಿಯನ್ನು ವಿಸ್ತರಿಸುವ ಮೂಲಕ ನಮ್ಮ ಸಿನಿಕತನದ ಕೊಳ್ಳುಬಾಕುತನವನ್ನು ಹಾಗೇ ಉಳಿಸಿಕೊಂಡಿರುವುದು ದುರಂತ..! ಸಮಾಜ ತಿದ್ದಬೇಕಾದವರೇ ಸಮಾಜವನ್ನು ಹಾಳು ಮಾಡುವ ಧಾವಂತ..!!

ಸಮಾಜದಲ್ಲಿ ಯಾವುದೇ ಕಾರ್ಯಗಳಿರಲಿ ಹಿಂದೆ ಹಿರಿಯರು ತಮ್ಮ ಕೆಲಸವನ್ನು ಬದಿಗೊತ್ತಿ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಆಗುತ್ತಿದ್ದರು. ಇಂದು ಇಂತಹ ನಿಸ್ವಾರ್ಥ ಸೇವೆ ಕಾಣೆಯಾಗಿದೆ.

ಹೀಗೆ ಹತ್ತು ಹಲವಾರು ಸಮಾಜ ವಿರೋಧಿ, ಮನುಷ್ಯ ಪ್ರೀತಿ ವಿರೋಧಿ, ಸಿನಿಕತನ, ವ್ಯಾಪಾರಿ ಬುದ್ಧಿಯು ಹರಡಿಕೊಂಡಿರುವುದು ಇವತ್ತಿನ ಟ್ರೆಂಡ್ ಆಗಿರುವುದು ವಿಪರ್ಯಾಸ. ಇಂತಹ ಮನುಷ್ಯ ವಿರೋಧಿ ಚಟುವಟಿಕೆಗಳನ್ನು ದೂರಿಕರಿಸಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ಬಿತ್ತುವ ಇಂದಿನ ತುರ್ತು ಆಗಬೇಕಾದ ಕೆಲಸ. ಕೊಳ್ಳುಬಾಕತನದ ಸಂಸ್ಕೃತಿಯನ್ನು ಕೊನೆಗಾಣಿಸಿ, ಮನುಷ್ಯ ಸಂಬಂಧವನ್ನು ಬೆಸೆಯಬೇಕಾಗಿದೆ ಎಂದು ಬಯಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕವಾಗಿವೆ.

Leave a Reply

Back To Top