ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಗಜಲ್

ಎದೆಯ ನಭದೊಳು ಸಿಡಿದೆದ್ದ ವ್ಯಥೆಗಳು ಹರಿವ ಕಣ್ ಪನಿಗಳ ಹೆಪ್ಪು ಗಟ್ಟಿಸುತಿವೆ
ಮನದ ಮಂಟಪದಿ ಬಿಡಿಸಿದ ಚಿತ್ತಾರಗಳು ಸದ್ದಿಲ್ಲದೆ ಸಾವಿರ ಕಥೆಗಳ ಹೇಳುತಿವೆ

ಆಸ್ಥೆಯಲಡಗಿದ ಅಸ್ಮಿತೆಗೆ ಅಧಿಪತ್ಯ ಸಾಧಿಸುವ ಹಂಬಲವಿಹುದೆ ಹೇಳು ಮನವೇ
ಅರ್ತಿಯ ಅಬ್ದಿಯಲ್ಲಿ ಅಳುವ ಅಲೆಗಳು ಅಂತರಂಗದ ಕರ್ಣ ಪಟಲವ ಸೀಳುತಿವೆ

ಅದುರದೆ ಉದುರುವ ಪಕಳೆಗಳು ಪಾರುತ್ಯದ ಪರಮಾವಧಿಯ ಮೆರೆವುದುಂಟೇ
ಸ್ವಪ್ನಗಳ ಮರ್ಜಿಯಲಿ ಬೇಸತ್ತ ನೆನಹುಗಳು ಕಂಗಳಲಿ ನೆತ್ತರ ಓಕುಳಿ ಹರಿಸುತಿವೆ

ಆವರಿಸುವ ಆರುಮೆಗೆ ಆವರಣ ಕಟ್ಟುವ ಹುಂಬತನವ ಮಾಡುವೆ ಏಕೆ ಗೆಳೆಯಾ
ಒಲವ ಕ್ಷುಧೆಯಲಿ ದಣಿದು ನಿಡುಸುಯ್ವ ನಿಟ್ಟುಸಿರು ಪ್ರೇಮಾಲಾಪವ ನುಡಿಸುತಿವೆ

ಹೃದಯವಿದು ಪಾಳುಬಿದ್ದ ಭವ್ಯ ಬಂಗಲೆಯಲ್ಲ ಜೀವರಸ ಜಿನುಗುವ ಮಧುಶಾಲೆ
ಜ್ಯೋತ್ಸ್ನದ ಲಾವಣ್ಯದಲಿ ಝಗಮಗಿಸುವ ತೂರ್ಪನಿಗಳು ನಿನ್ನೊಲವನೆ ಬೇಡುತಿವೆ

ತಹತಹಿಸುವ ಚಿಂತೆಗಳ ನಿರಶನದಲಿ ಪ್ರಭವಿಸೀತೇ ಹಸನು ಲಾಲಿತ್ಯದ ರಸಗಾವ್ಯವು
ಮೌನದ ಮಾರ್ದನಿಯಲಿ ಮುದಗೊಂಡ ಪದಪುಂಜಗಳು ರಸದೌಣವ ಉಣಿಸುತಿವೆ

ಭಾವವೀಣೆಯ ನುಡಿಸುವ ವೈಣಿಕನಿಗಾಗಿ ಶಬರಿಯಂತೆ ಕಾಯುತಿಹಳು ‘ಅರ್ಚನಾ’
ತುಂಬು ಬಸಿರನು ಹೊತ್ತ ಭವ್ಯ ಭಾವಗಳಿಂದು ಹಿತವಾದ ರಸಗವಳವ ಮೆಲ್ಲುತಿವೆ


ಅರ್ಚನಾ ಯಳಬೇರು

About The Author

Leave a Reply

You cannot copy content of this page

Scroll to Top