ಕಥಾ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರ
ನ್ಯಾನೊ ಕತೆಗಳು
ಸಮಯ ಕಳೆದಂತೆ ಮಾ( ಬಾ)ಗಿದವಳು.
ಕೆಲಸಗಳನ್ನು ತಪ್ಪಿಸಲೆಂದೇ ಕೈಗೆ ಗೋರಂಟಿ ಹಚ್ಚಿಕೊಂಡು ಕೂಡುತ್ತಿದ್ದಳು. ಈಗ ಕೆಲಸಗಳು ನಿಲ್ಲುತ್ತವೆ ಎಂದು ಗೋರಂಟಿಯನ್ನೇ ತಪ್ಪಿಸುವಳು.
ಬಡಿಸಿದ ಅಡುಗೆಯಲ್ಲಿ 108 ತಪ್ಪುಗಳನ್ನು ಹುಡುಕಿ ತಟ್ಟೆಯಲ್ಲಿ ಉಳಿಸುತ್ತಿದ್ದಳು. ಈಗ ಗಂಡ, ಮಕ್ಕಳು ತಟ್ಟೆಯಲ್ಲಿ ಚೆಲ್ಲಿದ್ದನ್ನು ಕೂಡ ಬಡಿಸಿಕೊಂಡು ಉಂಡು ಬಿಡುವಳು
ಅಂದು ಇಡೀ ತರಗತಿಗೆ ಪ್ರಥಮಳಾಗಿ ಗುರುಗಳು ಹೇಳುತ್ತಿದ್ದರು ಜಾಣ ಹುಡುಗಿ!!ಅಪ್ಪ ಹೇಳಿದ್ದು ಜಾಣ ಪುಟ್ಟಿ !ಅಜ್ಜಿ ಅಂದಿದ್ದು ಶಾಣೆ ಬಂಗಾರ.
ಆದರೆ ಮಗ ಮಾತ್ರ!! ಅಮ್ಮ ನಿನಗೆ ಏನೂ ಗೊತ್ತಾಗುವುದಿಲ್ಲ ಎಂದಾಗ ನಾನು ಎಲ್ಲಿ ಹಿಂದೆ ಬಿದ್ದೆ ತಿಳಿಯಲೇ ಇಲ್ಲ.
ಸರೋಜಿನಿ ನಾಯ್ಡು, ಆನಂದಿ ಗೋಪಾಲ್ ರಾಣಿ ಲಕ್ಷ್ಮೀಬಾಯಿ ಮದರ್ ತೆರೇಸಾ ಪ್ರೇರಣೆಯಾಗಿ ಓದಿದವರು ಪುಸ್ತಕದಲ್ಲೇ ಉಳಿದುಬಿಟ್ಟರೆ!?
ಸಾರಿಗೆ ಒಗ್ಗರಣೆ ಹಾಕಬೇಕು.
ತನ್ನದೇ ದಿಂಬು ಹೊದಿಕೆ ಇಲ್ಲದಿದ್ದರೇ ನಿದ್ದೆಯೇ ಸುಳಿಯುವುದಿಲ್ಲವೆಂದು ಗದ್ದಲ ಮಾಡುತ್ತಿದ್ದವಳು. ಮಗು ಆರಾಮಾಗಿ ಮಲಗಿದ ಪಾದದ ಒಂದ್ ಅಡಿ ಜಾಗದಲ್ಲಿ ಮುದುರಿ ಮಲಗಿದರು ಇಂದು ನಿದ್ದೆ ಬರುತ್ತದೆ .ಭಗವಂತ ಮಗು ಏಳದಿದ್ದರೆ ಸಾಕು!!
ಸಿಂಗರಿಸಿಕೊಂಡು ಹೊರಗೆ ಹೋಗಲು ನೆಪ ಒಂದು ಸಾಕಾಗಿತ್ತು. ಇಂದು ಹೆಜ್ಜೆ ಹೊರಗಿಡಬೇಕೆಂದರೂ ಮನೆಗೆಲಸದ ನೂರಾರು ನೆಪಗಳು ಸಾಲು ನಿಂತಿರುತ್ತವೆ
ಮುಡಿಯಲೆಂದೇ ಮೊಳ ಮಲ್ಲಿಗೆಯನ್ನು ಒತ್ತಾಗಿ ಕಟ್ಟುತ್ತಿದ್ದಳು! !ಇಂದು ದೇವರ ಪಟಕ್ಕೆ ಹೂ ಉಳಿಯಲೇಬೇಕೆಂದು ಹಟವೇಕೋ!? ಮುಡಿಯಲು ಉಳಿದ ಕೂದಲಿಗಿಂತ, ಉದರಿದ್ದೇ ಹೆಚ್ಚು!!
ಸಾಕ್ಷಿ ಶ್ರೀಕಾಂತ ತಿಕೋಟಿಕರ. ( ಸಾಕಿ)
ಪುಟ್ಟ ಪುಟ್ಟ ಕಥೆಗಳು ದೊಡ್ಡ ದೊಡ್ಡ ವಿಷಯ ಹೇಳಿದ್ದಾವೆ ಮೇಡಂ. ಚಂದದ ಕಥೆಗಳು.