ಕಾವ್ಯ ಸಂಗಾತಿ
ಯೋಗೇಂದ್ರಾಚಾರ್ ಎ ಎನ್
ಕಪ್ಪು ಚಾಳೀಸು
ಇಲ್ಲಿಯವರಿಗೂ
ಪ್ರೇಮ ಕುರುಡಾಗಿತ್ತು
ಅದಕ್ಕೀಗ
ಕಪ್ಪು ಚಾಳೀಸು ತೊಡಿಸಲಾಗಿದೆ
ಬಾನಂಗಳದ ಚಂದ್ರಮ
ಸೂಸುವ ಪ್ರೇಮದೊಲವಿಗೆ
ಯಾವ ಕಟ್ಟೆಯೂ ಕಟ್ಟಿಲ್ಲ
ಬೆಳದಿಂಗಳ ಭ್ರಾಂತಿಯಲಿ
ಮೈಮೇಲಿನ ವಸ್ತ್ರಗಳೂ
ಮೆಲ್ಲಗೆ ಹಿಂದೆ ಸರಿದಿವೆ
ಈಜು ಕೊಳದಲಿ ಮಿಂದೆದ್ದ
ಜೀವಕ್ಕೆ
ಅಮವಾಸ್ಯೆ ಬಂದಾಗಲೇ
ನೆನಪಾಗಿದ್ದು
ಕಪ್ಪು ಚಾಳೀಸು ಹೊದಿಸಿದ್ದ
ಕತ್ತಲೆಯ ಬಟ್ಟೆ
ಹಸಿದಿದ್ದ ನಾಯಿಗೆ
ಚಂದ್ರಮನೂ ರೊಟ್ಟಿಯಂತೆ
ಕಂಡನಂತೆ
ಜಿಗಿದ ಜಿಗಿತಕ್ಕೆ
ಸ್ವರ್ಗ ಮೂರೇ ಗೀಣು
ಕೆಳಗೆ ಬೀಳುವಾಗಲೇ
ಕಂಡದ್ದು
ಈ ಕಪ್ಪು ಚಾಳೀಸು
ತೋಡಿದ ಬಾವಿಯ ಆಳ
ಈಗೀಗ ಕಪ್ಪು ಚಾಳೀಸಿಗೆ
ಸಹಸ್ರ ಬಾಹುಗಳು
ಸಹಸ್ರ ತೆರೆ ಮರೆಗಳು
ಗುಂಡಿಗೆಯ ಗೂಡಿಗೆ
ಸದ್ದಿಲ್ಲದೆ ಗೆಜ್ಜೆ ಕಟ್ಟುತ್ತವೆ
ಸದ್ದಿಲ್ಲದೆ ರಾಗ ನುಡಿಸುತ್ತವೆ
ಅಷ್ಟೇ ಸದ್ದಿಲ್ಲದೆ
ಮಣ್ಣೂ ಮಾಡುತ್ತವೆ
ಮತ್ತೆ ನಿಮ್ಮ ಕಣ್ಣಿಗೆ
ಕಪ್ಪು ಚಾಳೀಸು ತೊಡಿಸುತ್ತವೆ
ವಿಪರ್ಯಾಸ ಇಷ್ಟೇ ಗೆಳೆಯ
ಕಪ್ಪು ಚಾಳೀಸು ತೊಟ್ಟವರಿಗೆ
ಕಂಡದ್ದೆಲ್ಲಾ
ಲವ್ ಜಿಹಾದ್ ಆಗಿಬಿಡುತ್ತದೆ
Super,