ಸುಧಾ ಪಾಟೀಲ್ ಕವಿತೆ-ಹುಡುಕುತ್ತಿದ್ದಾರೆ

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಹುಡುಕುತ್ತಿ್ದ್ದಾರೆ

ಭಾವಸ್ಪಂದನೆಯ  ಗರಿಗೆದರಿ
ಹೃದಯದ    ಚಿಲುಮೆಗಳ
ಉಕ್ಕಿಸಿ  ಚಿಮ್ಮಿಸಿ ಹರಿಸುವ
ಚೆಲುವಾಂಗನನ್ನು  ಹುಡುಕುತ್ತಿದ್ದಾರೆ

ಮನಸೊಳಗೆ  ಇಣುಕಿ  ನೋಡಿ
ಪ್ರೀತಿಯ  ಸುಗಂಧದ ಲೇಪ  ಹಚ್ಚಿ
ಸದಾ  ನಕ್ಕು ನಗಿಸುವ  ಸುಂದರಾಂಗನನ್ನು  ಹುಡುಕುತ್ತಿದ್ದಾರೆ

ಮನದ  ಕಾರ್ಮೋಡ  ಸರಿಸಿ
ಹನಿ   ಹನಿ  ಸಿಂಚನವ  ಸಿಂಪಡಿಸಿ
ಕಾವ್ಯದ  ಬುಗ್ಗೆಯ  ಚಿಮ್ಮಿಸಿದ
ಸರದಾರನನ್ನು  ಹುಡುಕುತ್ತಿದ್ದಾರೆ

ಮನದ  ಇಂಗಿತವ ತಿಳಿಸಿ ಒಲಿಸಿ
ಹೃದಯದ  ಭಾವನೆಗಳನ್ನು ಬಡಿದೆಬ್ಬಿಸಿ  ಸಂಚಲನ  ಸೃಷ್ಟಿಸಿದ
ಗೆಳೆಯನನ್ನು  ಹುಡುಕುತ್ತಿದ್ದಾರೆ

ಒಲವಿನ   ಧಾರೆಯ  ಸುರಿಸಿ
ಮನದ    ದೀಪವ    ಬೆಳಗಿ
ಅರಳುವ   ಮಲ್ಲಿಗೆಯ  ಹಾಗೆ
ಪರಿಮಳ   ಹರಡುವ  ಇನಿಯನನ್ನು
ಹುಡುಕುತ್ತಿದ್ದಾರೆ

ಭರವಸೆಗಳ   ಮಹಾಪೂರವ
ಆಶ್ವಾಸನೆಯ     ಸಾಗರವ  
ಮೀರಿ  ಬೆಳೆದ   ಸ್ನೇಹಮಾಲೆಯ
ಪೋಣಿಸುವ  ಹಮ್ಮೀರನನ್ನು
ಹುಡುಕುತ್ತಿದ್ದಾರೆ

ಪ್ರೀತಿಯ  ರಸಗವಳವ   ಮೆಲ್ಲುತ
ಮಾತಿಗೊಮ್ಮೆ  ಪದಗಳ  ಹೂರಣ
ತುಂಬಿ  ಸಿಂಗರಿಸುವ  ನಾಯಕನ
ಹುಡುಕುತ್ತಿದ್ದಾರೆ.

ಹಗಲು ಇರುಳು ಎನ್ನದೆ
ಎನ್ನೇದೆಯ ಗೂಡಿನಲ್ಲಿ
ವಿರಮಿಸುವ
ಭಾವಗಳ ದೊರೆಯನ್ನು
ಹುಡುಕುತ್ತಿದ್ದಾರೆ
————————————

One thought on “ಸುಧಾ ಪಾಟೀಲ್ ಕವಿತೆ-ಹುಡುಕುತ್ತಿದ್ದಾರೆ

Leave a Reply

Back To Top