ಕಾವ್ಯ ಸಂಗಾತಿ
ಜಾರುವ ಮುನ್ನ
ವಿಮಲಾರುಣ ಪಡ್ಡoಬೈಲು


ಅಂದ ಕಂಗಳು ಹುಡುಕುತ್ತಿವೆ
ಬದುಕಿನ ಬೇಗೆಯ ದಾಟುವುದೆಂತು
ಬಳಲಿ ಮುದುಡಿವೆ ಮೈ ಮನ ಬೇನೆಯಲಿ
ಮೌನವಾಗಿ ಕಾಣದ ಲೋಕದ
ಪರದೆಯ ದಿಟ್ಟಿಸುತ್ತಾ
ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರು
ನಲಿವಿನ ಸಿಂಚನ ಸುತ್ತಲೂ ಹರಿಸಿ
ಹಸಿರ ನೀವುದು ಹೆತ್ತೊಡಲ ಕನಸು
ಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿ
ಬಂದು ಬಾಂಧವರ ಕಳಚಿ ಸಾಗುವ ಹೊತ್ತು…
ಅಂತ್ಯ ಅರಿಯದ ಖಗ ಮೃಗ
ಅಂತ್ಯ ಅರಿಯದ ಖಗ ಮೃಗ
ಹಸಿರಲ್ಲೇ ಉಸಿರ ನೀವ ಮಲೆ
ಕೊನೆ ಕ್ಷಣಕ್ಕೂ ಬದುಕ ಸವಿದು
ವಿಷವಿಕ್ಕದ ಗಿಡಮರ ಬಳ್ಳಿಯಂತೆ
ತೆರಳು ನೀ ಇಹಲೋಕವ
ಬಾಳ ಪಯಣದಿ ಹುಟ್ಟಿಗೇ ಸಾವು ನಿಶ್ಚಿತ
ಅವಿತುಕೊಳ್ಳಲಾಗದು ಈ ಬಂಧದಿ
ನಗ ನಾಣ್ಯ ಹೊನ್ನು ಮಣ್ಣಲಿ
ಪಡೆಯಲಾಗದು ಮರುಜನ್ಮ
ಕರ್ಮದಲಿ ಬೆರೆತು ಧರೆಗೆ ನೀ ಋಣಿಯಾಗು
ಸ್ಮಶಾನದಿ ಚಿರನಿದ್ರೆಗೆ ಜಾರುವ ಮುನ್ನ
ರಾಡಿಯಾದ ಮನದಿ ಅನುರಾಗ ಬೆಸೆದು
ದೀಪ್ತಿಯಾಗು ಆಸರೆಯ ಬದುಕಿಗೆ
ನೂರಾರು ಮನಕೆ ಸ್ಫೂರ್ತಿ ನೀನಾಗು
