ಕಾವ್ಯ ಸಂಗಾತಿ
ಪುಷ್ಪಾ ಮಾಳಕೊಪ್ಪ
ಬಾಮೇಘ ಇಳೆಗೆ
ಪಂಚಮದ ಗಾನದಲಿ ಪಲ್ಲವಿಸಿ ಹೊಮ್ಮುತಿಹ
ಇಂಪಿನಲೆಯಲೆಯಂತೆ ಬಾ ಬಾರೊ ಮೇಘ|
ತಂಪೆರೆದು ಮೇದಿನಿಗೆ ಸ್ವಾತಿಹನಿ ಮುತ್ತಲಿಹ
ಕಂಪಿನಲಿ ನವಿರಾದ ಭಾವದೋಘ
ಹರಿಸುಬೇಗ | ಸುರಿಸು ಈಗ||
ಗಹ್ವರಿಯ ಗೀತದಾಲಾಪದಲಿ ರಸಧಾರೆ
ನೀನಾಗೆ ಜೀವವೀಣೆಯು ನುಡಿಯಲು
ಬಿಲ್ಲ ಬಣ್ಣವ ಬಳಿದು ಕೋಲ್ಮಿಂಚ ಗೆರೆ ಬರೆದು
ಬಾ ಬಾರೊ ಬೇಗದಲಿ ಇಳೆಗೆ ಇಳಿದು
ಬಾನ ತೊರೆದು | ತಂಪತಳೆದು||
ಬಟ್ಟಬಯಲಾಗಿರುವ ರಸೆಗೆ ನೀನವತರಿಸು
ಹಸಿರೆ ಉಸಿರಾಗಿಸುತ ವರ್ಷಸುರಿಸು
ನಿಡಿದುಸಿರ ಕಡುಬಿಸಿಲ ಭುವಿಗೆ ಕಳೆ, ಜೀವದಲಿ ಸುಧೆಯ ಸಾಗರವನ್ನೆ ಧರೆಗೆ ಕರೆಸು
ರಂಗುಗೊಳಿಸು | ಕಾವ್ಯ ಬರೆಸು||
Beautiful