ಸುವಿಧಾ ಹಡಿನಬಾಳ ಕಥೆ-ಅಶ್ವಿನಿ ನಕ್ಷತ್ರ

ಕಥಾ ಸಂಗಾತಿ

ಸುವಿಧಾ ಹಡಿನಬಾಳ

ಅಶ್ವಿನಿ ನಕ್ಷತ್ರ

ಅಲ್ದೆ, ಅದೇನು ಪ್ರಾರಬ್ಧ ಕರ್ಮುನೋ ಏನೊ ದಿನ ಬೆಳಗ್ಗೆ ಎದ್ರೇ ನವ ದುರ್ಗೆಗೆ ಒದ್ದೆ ಮಡಿಲಿ ಹತ್ತು ಕೊಡ ನೀರ್ ಹೊಯ್ದು ಕುಲ ಬೆಳಗು   ವಂಶೋದ್ಧಾರಕನ ಕೊಡು ಹೇಳಿ ಹರಕೆ ಹೊತ್ಗಂಡ್ರೆ  ಒಂದ್ ಕೂಸು ಏನೋ ಹುಟ್ತು
ಇರ್ಲಿ ಬಿಡು, ಕೂಸಾದ್ರೆ ಏನಾತು ಹೇಳಿ ಖುಷಿಪಡೂ ಹಂಗೂ ಇಲ್ಲೇ. ದಿನ ಬೆಳಗಾದ್ರೆ ಅವಳದ್ದೇ  ಚಿಂತೆ: ಅವಳಿಗೊಂದು ಮದುವೆ ಆಗುವರೆಗೂ ನಂಗಕ್ಕೆ ನಿದ್ದೆ ಇಲ್ಲೆ. ಎಂತ ಮಾಡಲಾಗ್ತು ?  ಈ ಕೂಸಿನ ಜಾತಕ ನೋಡಿರೆ ಯಾರ್ ಮದ್ವೆ ಮಾಡ್ಕತ್ತ?  ಎಲ್ಲಾ ನಂಗ್ಳ ಹಣೆಬರಹ ಅಷ್ಟೇಯ.’
 ‘ನಿಂಗ ಅಂತುವ ದಿನಾ ಬೆಳಗಾದ್ರೆ ಇದೇ ವಿಷ್ಯ ಮಾತಾಡ್ತ್ರಿ. ಕೂಸು ದೊಡ್ಡಾಯ್ದು. ಇದು ಅವಳ್  ಕಿವಿಗ್ ಬಿದ್ರೆ ಬೇಜಾರ್ ಮಾಡ್ಕೋತಿಲ್ಯಾ? ಏನೋ ಚಲೋ  ಓದುತ್ತಿದ್ದು, ಹೋಗ್ಲಿ ಬಿಡಿ’.  ‘ಹೌದೇ, ನೀನು  ಹೇಳ್ತೆ, ಹೆಣ್ಣುಮಕ್ಕಕ್ಕೆ ಮದುವೆ ಮಾಡಗದ್ರೆ ಸಾವಿನಲ್ಲು ನೆಮ್ಮದಿ ಇಲ್ಲೆ ತಿಳ್ಕ..ಹಿಂಗೆ ದಿನ ಬೆಳಗಾದ್ರೆ ಅವರಿವರ ಜಾತಕ ನೋಡು ಸೀತಾರಾಮ ಶಾಸ್ತ್ರಿಗಳಿಗೆ ಮಗಳ   ಜಾತಕ ನೋಡಿದ್  ಕೂಡ್ಲೇ ತಲೆಬಿಸಿ.
 ಈಗೇನು ಅಶ್ವಿನಿ ಸಣ್ಣ ಹುಡುಗಿ ಅಲ್ಲ .
ಎಸ್ ಎಸ್ ಎಲ್ ಸಿ ಮುಗಿಸಿದ್ದು. ಒಳ್ಳೆ ಮಾರ್ಕ್ಸ್ ತಕೊಂಡು ಪಾಸ್ ಆಯ್ದು. ಅಪ್ಪಯ್ಯ ಆಯಿ ದಿನ ಬೆಳಗಾದ್ರೆ ತನ್ನ  ಮದುವೆ ಬಗ್ಗೆ ತಲೆಕೆಡಿಸಿಕೊಳ್ಳುವುದು ನೋಡಿ ಮದುವೆನೇ ಬೇಡ ಎಂಬು ತೀರ್ಮಾನಕ್ಕೆ ಬಂದಿಕಿದು. ಆ ದಿನ ಪಕ್ಕದಲ್ಲೇ ತನ್ನ ಕೆಲಸ ಮಾಡ್ತಾ ಇದ್ದ ಅಶ್ವಿನಿ ಕಿವಿಗೆ ಅಪ್ಪಯ್ಯ ಹೇಳ್ತಿದ್  ಮಾತ್ ಕೇಳಿ  ಸಿಟ್ಟೇ ಬಂದಿತ್ತು.ಎಷ್ಟ್ ದಿನ  ಕೇಳಿ ಕೇಳಿ ಸುಮ್ಮಂಗಿರ್ತು ಪಾಪ; ಎದ್  ಬಂದು ‘ಅಪ್ಪಯ್ಯ ,ನಿಂಗ ಏನು ನನ್ನ ಮದುವೆ ಬಗ್ಗೆ ತಲೆಕೆಡಿಸಿಕೊಳ್ಳಡಿ .ನಾನು ಚೊಲೋ ಓದ್ತೆ.  ನಂಗ್ ಮದುವೆ ಮಾಡು ಖರ್ಚು ವೆಚ್ಚ ಎಲ್ಲಾ ನಂಗ್ ಓದುಲೇ ಕೊಡಿ .ನನ್ ಕಾಲ್ ಮೇಲೆ ನಾ ನಿಂತ್ಗತ್ತೆ.  ಮದ್ವೆ ಆಗಗದ್ರೆ ಹೆಣ್ಣುಮಕ್ಕಕ್ಕೆ ಬೇರೆ ಬದುಕೇ ಇಲ್ಯಾ?’ ‘ಹೌದೇ, ಹೆಣ್ಣುಮಕ್ಕಕ್ ಮದುವೆ ಆಗ್ಲೇಬೇಕು ನಿಂಗ್ ಮದ್ವೆ ಮಾಡಗದ್ರೆ  ಜನ ನಂಗಕ್ಕೆ ಸರಿಯಾಗಿ ಉಗಿತ ಅಷ್ಟೇಯ’
  ‘ನೀವ್ ಏನಾರ ಹೇಳಿ.ನಾ ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದೇ ನನ್ ತಪ್ಪು.ಆಯಿ ನೀ  ಅಪ್ಪಯ್ಯನ ಒಪ್ಸಿ ನಂಗೆ ಓದುಲೆ ಪೇಟೆಗೆ ಕೇಳ್ಸವು. ನಾ ನಿಂಗ್ಳ ಕಣ್ಮುಂದೆ ಇದ್ರೆ ನಿಂಗಕ್ಕೂ ಸಮಾಧಾನ ಇಲ್ಲೆ.ನಂಗೂ ಓದೂಲೆ ಆಗ್ತಿಲ್ಲೆ’ ಹಿಂಗೆ ಹೇಳಿಕ್ಕೆಯ ಕೋಣೆ ಸೇರ್ಕಂತು.

ಪಾಪ, ಸೀತಾರಾಮ ಶಾಸ್ತ್ರಿಗಳು ತುಂಬಾ ದೈವಭಕ್ತಿ, ಧಾರ್ಮಿಕ ನಿಷ್ಠೆ ಉಳ್ಳ ಬಡ ಪುರೋಹಿತರು. ಪಕ್ಕದಲ್ಲೇ ಇದ್ದ ನವ ದುರ್ಗೆ ದೇವಸ್ಥಾನದ ಪೂಜೆ ಮಾಡ್ಕಂಡು  ತಮ್ ಪಾಡಿಗೆ ತಾವಿದ್ರು .ಮೊದಲೆಲ್ಲಾ ಬಡತನ ಇದ್ರೂ ಇತ್ತೀಚಿಗೆ ದೇವಸ್ಥಾನಕ್ ಬಪ್ಪು, ಭಕ್ತಾದಿಗಳು ಹೆಚ್ಚಾಯ್ದ; ಹಿಂಗಾಗಿ ಶಾಸ್ತ್ರಿಗಳಿಗೆ ಸಿಗು ಕಾಣ್ಕೆನೂ ಹೆಚ್ಚಾಯ್ದು.  ಈಗೇನು ತೊಂದರೆ ಇಲ್ಲೆ. ಆದ್ರೆ ಮಗಳ‌ ಮದುವೆ ಮಾತ್ರ ಅವರ ತಲೆ ಸದಾ ಕೊರೆತಿರ್ತು.  ಶಾಸ್ತ್ರಿಗಳಿಗೆ ಮದುವೆಯಾಗಿ ಮೂರ್ನಾಲ್ಕು ವರ್ಷ ಆದ್ರೂ ಚಿಗ್ರೆ ಮೂಡಿದ್ಧಿಲ್ಲೆ..ಆಗ ದೇವಿಗೆ ಹರ್ಕೆ ಹೊತ್ಕೊಂಡು  ಬೆಳಗಾದ್ರೆ  ನೀರ  ಅಭಿಷೇಕ ಮಾಡಿ ನಂಗಕ್ಕೆ ಒಬ್ಬ ವಂಶೋದ್ಧಾರಕನ ಕೊಡು ಹೇಳಿ ದಿನಾಲು ಬೇಡ್ಕೊಂಡ್ರು; ದೇವಿ ಕಿವಿಗ್ ಬಿತ್ತೋ ಏನೋ! ವಂಶೋದ್ಧಾರಕನ ಬದಲಿಗೆ ತನ್ನಂತದ್ದೇ ಹೆಣ್ಣಿನ ರೂಪದ ದಂತದ ಗೊಂಬೆನಾ ಮಡಿಲಿಗೆ ಹಾಕ್ತು.ಸಾವಿತ್ರಮ್ಮ ಮಗ್ಳ ಮುಖ ನೋಡಿ ಹಿರಿ ಹಿರಿ ಹಿಗ್ಗಿದ್ದೇನೋ ನಿಜ ;ಆದ್ರೆ ತಕ್ಷಣ ಜಾತಕ ಹಿಡ್ಕೊಂಡು ಬಂದ ಶಾಸ್ತ್ರಿಗಳ ಮಾತು ಸಾವಿತ್ರಮ್ಮನ  ಕಿವಿಗೆ ಕಾದ ಕಬ್ಬಿಣನ ಎರಕ ಹೊಯ್ದಾಂಗಿತ್ತು! ‘ಅಲ್ದೆ ಕೊಡುವುದೇನೋ ಕೊಟ್ಟಿದ್ದು, ಆದ್ರೆ ಕೂಸು ಈ ಕೆಟ್ಟ ಮೂಲ ನಕ್ಷತ್ರದಲ್ಲಿ ಹುಟ್ಟಿ ಯಾರ ಜೀವಕ್ಕೆ ಸಂಚಕಾರ ತರವನ.’ ಅವತ್ತಿಂದ ಇಬ್ಬರೂ ಒಳಗೊಳಗೆ ಕೊರಗುತಿದ್ರು ಆದ್ರೆ ಕಾಲ ಎಲ್ಲ ಮರೆಸಿತ್ತು. ಅಶ್ವಿನಿ ಹುಟ್ಟಿದ ಮೂರು ವರ್ಷಕ್ಕೆ ವಿನಾಯಕ ಬಂದ. ಮನೆಗೆ ಹರುಷನು ತಂದ. ಶಾಸ್ತ್ರಿಗಳ ಹೆಚ್ಚಿನ ಗಮನ ವಿನಾಯಕನ ಕಡೆಗೆ ಇತ್ತು. ಹೆತ್ ಕರುಳಿಗೆ ಇಬ್ಬರೂ ಒಂದೇಯ. ಮಗಳು ಅಶ್ವಿನಿ  ದಿನದಿಂದ ದಿನಕ್ಕೆ ಹುಣ್ಣಿಮೆ ಚಂದ್ರನ ಹಂಗೆಯಾ ಚಂದಕ್ ದೊಡ್ದವಳಾದ್ಳು. ದಿನ ಬೆಳಗಾದ್ರೆ ಶಾಸ್ತ್ರಿಗಳ ಮನೆಗೆ ಮದುವೆ, ಉಪನಯನ ಹಿಂಗೇಯ ಜಾತಕ ತೋರಿಸಲೇ ಬೊಪ್ಪೂರ್ ಸಂಖ್ಯೆ ಏನ್ ಕಡಿಮೆ ಇಲ್ಲೆ. ಆಗೆಲ್ಲವಾ ಶಾಸ್ತ್ರಿಗಳನ್ನು ಕಾಡ್ತಿದ್ದಿದ್ದು ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದ ಮಗಳ ಯಾರು ಮದುವೆ ಮಾಡ್ಕತ್ತ ? ಹಿಂಗೆ ಹೇಳಿ ಆ ಮಾತು ಪದೇ ಪದೇ ದೊಡ್ಡವಳಾದ ಅಶ್ವಿನಿ ಕಿವಿ ಮೇಲೆ ಬಿದ್ದು ಅವ್ಳಿಗೆ ಮದುವೆ ಅನ್ನು ಪದಾನೆ  ರೇಜಿಗೆ ಹುಟ್ಟಿಸಿದ್ದು. ಏನರು ಆಗಲಿ ನಾನು ಚೆನ್ನಾಗಿ ಕಲ್ತ್ಕೊಂಡು ನೌಕರಿ ಮಾಡೋಳೆಯ   ಹೇಳು ತೀರ್ಮಾನಕ್ಕೆ ಬಂದಿಕಿದ್ದು. ಸೆಕೆಂಡ್ ಪಿಯುಸಿ ಮುಗಿಸಿದ್ಲು ಆದ್ರೆ ಅವ್ಳಿಗೆ ಮನೆಯಲ್ಲಿ ಇಪ್ಪುಲೆ ಬೇಜಾರು.  ಅದಕ್ಕೆ ಕುಂದಾಪುರದ ಹಾಸ್ಟೆಲಿಗೆ ಹೋಗಿ ಉಳ್ಕೊಂಡಿದ್ದು .ಡಿಗ್ರಿ ಮುಗಿಸಿ  ಇದು ಇದು ಎಕ್ಸಾಮ್ ಬರ್ದು  ಪಾಸ್ ಆತು.  ಯಾರಿಗ್ ಗೊತ್ತಿತ್ತು ಅವಳು ಹಿಂಗ್ ಆಗ್ತು  ಹೇಳಿ? ಸೀತಾರಾಮ್ ಶಾಸ್ತ್ರಿಗಳಿಗೇ ಗೊತ್ತಿಲ್ಲೆ ,ಎಷ್ಟ್ ಜನಕ್ಕೆ ಜಾತ್ಗ ಹೇಳಿದ್ರನ ಪಾಪ! ಅವಳೀಗ ಪಕ್ಕದ ತಾಲೂಕಿಗೆ ತಹಶೀಲ್ದಾರ್ ಆಗಿ ಬಂದಿಳು.ಮದುವೆಯ ವಯಸ್ಸು ದಾಟೋತು.ಈಗ ಶಾಸ್ತ್ರಿಗಳು ತುಸು ನಿರಾಳ ಮಗಳ ನೋಡಿ. ಆದ್ರೆ ಆದದ್ದೇ ಮತ್ತೊಂದು;
 ಮಗ  ವಿನಾಯಕ ಬೆಂಗಳೂರಿಗೆ ಹೋಗಿ  ಯಾವುದೋ ಕಂಪನಿ ಸೇರಿಕೊಂಡು ಅಲ್ಲೇ ಒಂದು ಹುಡುಗಿನೂ ಮದುವೆ ಮಾಡ್ಕೊಂಡು ಅಲ್ಲೇ ಸೆಟ್ಲು ಆಯ್ದ.ಈ ವಿಷಯ ಸಾವಿತ್ರಮ್ಮಂಗೆ ದೊಡ್ಡ ಕೊರಗು! ಶಾಸ್ತ್ರಿಗಳಿಗೆ ಪಾಪ, ಕೈಗೆ ಬಂದ್ ಮಗ ಹೇಳ್ದೆ ಕೇಳ್ದೆ  ಯಾವ್ದೋ ಜಾತಿ ಹುಡ್ಗಿ ನೋಡ್ಕಂಡು ಅಲ್ಲೇ ಮದುವೆ ಮಾಡಿಕೊಂಡಿದ್ದ ವಿಷಯ ಕಿವಿಗೆ ಬಿದ್ದು ಮುದುಡಿ ಸಣ್ಣ ಆಗೋದ್ರು.  ವಯಸ್ಸಿಗಿಂತ ಹೆಚ್ಚಿಗೆ ಚಿಂತೆಯಿಂದ ಕೊರಗಿ ಕೊರಗಿ ಮುದುಕಾದ್ರು. ಏನ್ ಮಾಡೂಲಾಗ್ತು? ಸಾವಿತ್ರಮ್ಮ ಇದ್ದುದ್ರಲ್ಲೆ ಧೈರ್ಯ ಮಾಡ್ಕೊಂಡು ಶಾಸ್ತ್ರಿಗಳಿಗೆ ಸಮಾಧಾನ ಮಾಡುತ್ತಿದ್ದರು
 ವಿಧಿ ಆಟ ಯಾರಿಗ್ ಗೊತ್ತಿದ್ದು?   ಶಾಸ್ತ್ರಿಗಳ ಲೆಕ್ಕಾಚಾರ  ತಮ್ಮ ಮಗನ ವಿಷ್ಯದಲ್ಲೂ  ತಪ್ಪೋತು;
ಒಂದಿನ ಕಂಪನಿ ಕೆಲಸ ಮುಗಿಸಿಕೊಂಡು ಕಾರ್ ತಕ್ಕೊಂಡು ಮನೆಗೆ ಬತ್ತಿದ್ದ ವಿನಾಯಕ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿ ಸ್ಥಳದಲ್ಲೇ ಕೊನೆ ಉಸಿರೆಳ್ದ.ಆಗೆಲ್ಲ ಹೋಪರು ಯಾರು? ಅಶ್ವಿನಿ ಧೈರ್ಯ ಮಾಡ್ಕಂಡು ಬೆಂಗಳೂರಿಗೆ ಹೋಗಿ ಅಣ್ಣನೆಲ್ಲಾ ಕೆಲಸ ಮುಗಿಸಿಕೊಂಡು ಬಂತು .ಈ ಆಘಾತಕದಿಂದ ಶಾಸ್ತ್ರಿಗಳು  ಕೊರಗಿ ಕೊರಗಿ ಮೊದಲೇ ಹಣ್ಣಾಗಿದ್ದ ಜೀವ ಒಂದಿನ ಇದ್ಕಿದ್ದಂಗೆಯ ಮಲಗದಲ್ಲೇ ಜೀವ ಬಿಟ್ಟಿದ್ರು .
ಸಾವಿತ್ರಮ್ಮನ ಗೋಳು ಯಾರತ್ರ ಹೇಳೋದು? ಬೆಳಿಗ್ಗೆ ಎದ್ದು ಚಾ ಕೊಂಬ್ಲೆ ಏಳ್ಸುಲೆ ಹೋದ್ರೆ, ಕೊಚ್ಚಾಗೋಯ್ದ್ರು!! ಸಾವಿತ್ರಮ್ಮನೂ  ಇದನ್ ನೋಡಿ ಮೂರ್ಛೆ ಹೋದ್ರು ಪಕ್ಕದ ಮನೆಗೆ ದರ್ಕ್ ತಗಂಬರು  ದೇವಿ ಒಡ್ತಿ ಕರದ್ರೂವ ಆವಾಜ್ ಇಲ್ಲಗದ್ದದ್ ನೋಡಿ ಒಳಗ್  ಬಂದು ಬೊಬ್ಬೆ ಹೊಡ್ದು ಎಲ್ಲಾ ಸೇರಿದ್ರು. ಹಿಂದಿನ ವಾರ ಬಂದು   ಒಂದಿನ ಉಳ್ಕಂಡು ಅಪ್ಪಯ್ಯ ಆಯಿಗೆ ಬೇಕಾಪು ಟಾನಿಕ್, ಹಣ್ಣು ,ಅದು ಇದು ಎಲ್ಲಾ ತಗಂಬಂದು ಕೊಟ್ಟು ಒಂದಿನ ಉಳ್ಕಂಡು ಹೋಗಿದ್ಲು ಅಶ್ವಿನಿ. ಈಗೀಗ ಶಾಸ್ತ್ರಿಗಳ ಮನಸ್ಸಿಗೆ ಮಗಳು ಬಂದ್ರೆ ಸಮಾಧಾನ. ತನ್ ಜೊತೆಗೆ ಬಂದು ಇರಿ ಹೇಳಿ ಪ್ರತಿ ಸಲ ಬಂದಾಗ್ಲೂ ಹೇಳ್ತು. ಆದ್ರೆ ಶಾಸ್ತ್ರಿಗಳು ಕೇಳವಲಿ. ದೇವಸ್ಥಾನ ಬಿಟ್ಟು ಬಪ್ಪೂಲೆ ಆಗ್ತಿಲ್ಲೆ ಅಂತಿದ್ರು.ಈಗ್ ನೋಡಿರೆ ಮಲಗಿದಲ್ಲೇ ಉಸಿರು ಚೆಲ್ಲಿದ್ರು.ಅಶ್ವಿನಿ ದುಃಖ ಕೇಳೋರಿಲ್ಲೆ ! ಅವಳಿಗಿದ್ದ ಅಧಿಕಾರ, ಧೈರ್ಯ ಈಗ ಪ್ರಯೋಜನಕ್ಕೆ ಬಂತು. ಕಚೇರಿ ಸಿಬ್ಬಂದಿ ಎಲ್ಲರೂ ಬಂದು ಸಾವಿತ್ರಮ್ಮನ ತಕ್ಷಣ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ರೆ ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡೋರು ಯಾರು? ಸದಾ ದುರ್ಗೆ, ದೇವಸ್ಥಾನ ,ಜಾತಕ ಜ್ಯೋತಿಷ್ಯ ,ವಂಶೋದ್ಧಾರಕ ಅಂತೆಲ್ಲ ಕನವರಿಸುತ್ತಿದ್ದ ಶಾಸ್ತ್ರಿಗಳ ಮನಸ್ಸು ಕೊನೆಯ ದಿನಗಳಲ್ಲಿ ಮಗಳಿಗೆ ನಾನ್ ಅನ್ಯಾಯ ಮಾಡಿದ್ನೇನೋ, ಅವ್ಳ  ಮನಸ್ಸು ನೋಯಿಸಿದ್ನೇನೋ ಹೇಳಿ ತುಂಬಾ ನೊಂದುಕೊಂಡಿತ್ತು
 ಮಗಳ ಹತ್ತಿರ ಮಾತಾಡುವಾಗೆಲ್ಲ ಪಶ್ಚಾತಾಪದ ನೆರಳು ಇಣುಕು ಹಾಕುತ್ತಿತ್ತು
 ಅದೆಲ್ಲವನ್ನು ನೆನಪು ಮಾಡಿಕೊಂಡು ಅಶ್ವಿನಿ  ಉಮ್ಮಳಿಸಿ ಬಂದ ದುಃಖ ನುಂಗಿ ತಾನೇ ಮುಂದೆ ನಿಂತು ಅಪ್ಪಯ್ಯನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ಲು .ಅಪ್ಪನ ಫೋಟೋ, ನೆನಪುಗಳೊಂದಿಗೆ ಅಮ್ಮನ ಕರ್ಕೊಂಡು ನಗರದ ಮನೆಯಲ್ಲಿ ಮದುವೆಯ   ಹಂಗೂ ಇಲ್ದೇನೆ  ತನ್ನ ಕಾಲ ಮೇಲೆ, ನಿಂತಿದ್ದಾಳೆ.
 ನಾಲ್ಕು ಜನಕ್ಕೆ ಮಾದರಿಯಾಗೊ ಅಧಿಕಾರಿಯಾಗಿದ್ದಾಳೆ. ಸಾವಿತ್ರಮ್ಮನ ಬಾಳಲ್ಲಿ ಕೊನೆಗೂ ಬೆಳಕಿನ ಕಿರಣ ಆಗಿದ್ದಾಳೆ ಅಶ್ವಿನಿ. ಹೀಗೆ ಅಶ್ವಿನಿ  ಹಾಗೆ  ಹತ್ತಾರು  ಅಶ್ವಿನಿ ನಕ್ಷತ್ರಗಳು ಮಿನುಗ್ತಾ ಇರಲಿ…..


.  ಸುವಿಧಾ ಹಡಿನಬಾಳ

Leave a Reply

Back To Top