ಕಾವ್ಯ ಸಂಗಾತಿ
ಮಂಜುಳಾ ಪ್ರಸಾದ್
ಬೇವು ಬೆಲ್ಲ

ಉರುಳುತಿರುವ ಕಾಲ ಚಕ್ರದಡಿಯಲ್ಲಿ,
ಬೇವಾದರೇನು…? ಬೆಲ್ಲವಾದರೇನು…?
ಸಾಗುವ ದಾರಿಯ ಸರಾಸರಿ ನೋಟದಲ್ಲಿ,
ಏರಿಳಿತವಿದ್ದರೂ ಅದು ಸಮರಸವಲ್ಲವೇನು?
ಬೆಲ್ಲದಂತಹ ಘಳಿಗೆ ಒದಗಿ ಬಂದಲ್ಲಿ,
ಸವಿಯುವುದ ಬಿಟ್ಟು ಬಚ್ಚಿಡಲಾಗುವುದೇನು?
ಬೇವು ಬೇಡವೇ ಬೇಡವೆಂದು ತಪವಗೈದಲ್ಲಿ,
ವಿಧಿ ಬರಹ ಬದಲಾಗಿ ಮಾರ್ಪಡುವುದೇನು?

ಒಮ್ಮೆ ಸಿಹಿ ಭಾವ; ಮತ್ತೊಮ್ಮೆ ಕಹಿ ವಿರಹದಲ್ಲಿ,
ಬಾಳು ನೂಕುವ ಪರಿಪಾಠ ಇಂದು ನೆನ್ನೆಯದೇನು?
ಪಾಲಿಗೆ ಬಂದ ಪಂಚಾಮೃತವ ಉಣ್ಣುವಲ್ಲಿ,
ಅದು ಬೇಕು; ಇದು ಬೇಡೆಂಬ ಆಯ್ಕೆ ಸರಿಯೇನು?
ಬದುಕ ಪಯಣಕೆ ನೂರಾರು ತಿರುವುಗಳಿಲ್ಲಿ,
ತಿರು ತಿರುಗಿ ನಡೆದರೂ ಗಮ್ಯ ತಲುಪದೇನು?
ಅಂತು ಸುಳಿವಾಗ ನಿತ್ಯಯುಗಾದಿ ಸಂಭ್ರಮವಿಲ್ಲಿ,
ಹೊಂದಾಣಿಕೆಯ ಚಿತ್ತ ಮೈಗೂಡಿದರೆ ಕಾಣ್ವೆ ನೀನು!
ಮಂಜುಳಾ ಪ್ರಸಾದ್

ಸುಂದರ ಕವನ