ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಸಣ್ಣ ಸಣ್ಣ ಕ್ಷಣಗಳನ್ನು ಅನಂದಿಸೋಣ
ಎಲ್ಲರ ಜೀವನದಲ್ಲೂ ಸಣ್ಣ ಸಣ್ಣ ಸಂತೋಷಗಳು ಬದುಕಿನ ಪ್ರತಿ ಮೆಟ್ಟಿಲುಗಳು. ಬದುಕಿನಲ್ಲಿ ನಾವು ಅನುಭವಿಸುವುದು, ಸದಾ ನೆನಪಿನಲ್ಲಿ ಇಡುವುದು ಇದನ್ನೇ. ಎಲ್ಲರೂ ಕೂಡಾ. ಪರಿಶುದ್ಧ ಮನಸ್ಸಿಗೆ ಬಡವ ಸಿರಿವಂತಿಕೆಯ ಅಹಮ್ಮಿಲ್ಲ. ನಿಮ್ಮ ಅಮ್ಮನ ಹುಟ್ಟಿದ ಹಬ್ಬಕ್ಕೆ ನೀವೊಂದು ಸೀರೆ ಉಡುಗೊರೆಯಾಗಿ ನೀಡಿದರೆ ಆ ಸೀರೆಯ ಬೆಲೆ ಅಲ್ಲಿ ಮುಖ್ಯ ಅಲ್ಲ. ನನ್ನ ಮಗ ಅಥವಾ ಮಗಳು ನನ್ನೊಂದಿಗೆ ಸದಾ ಇದ್ದಾರೆ ಎನ್ನುವ ಅಮ್ಮನಿಗೆ ಮೂಡುವ ಭಾವ ಮುಖ್ಯ. ಮಡದಿಯ ಅಥವಾ ಗೆಳತಿಯ ಜನುಮ ದಿನದಂದು ನೀವು ಒಂದು ಬ್ಯಾಗ್ ತಂದುಕೊಟ್ಟರೂ ಕೂಡಾ (ನಿಮ್ಮ ಎದುರಿನಲ್ಲಿ ನಿಮ್ಮನ್ನು ಬೈದುಕೊಂಡರೂ ಹಲವರ ಜೊತೆ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು) ಅಲ್ಲದೆ ಅದನ್ನು ಉಪಯೋಗಿಸುವ ಸಮಯದಲ್ಲೆಲ್ಲ ನಿಮ್ಮನ್ನು ನೆನಪಿಸುತ್ತಾರೆ.
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವ ಹಾಗೆ ನೀವು ಕೊಡುವ ಎಷ್ಟು ಮಹತ್ತಮ ಬೆಲೆಯ ವಸ್ತು ಕೂಡಾ ನಿಮ್ಮ ಮೇಲೆ ಪ್ರೀತಿ ಇಲ್ಲದೆ ಹೋದವರಿಗೆ ಇಷ್ಟ ಆಗದು. ನಿಜವಾದ ಪ್ರೀತಿ ಇಂತದ್ದೇ ಬೇಕು ಎಂದು ಡಿಮಾಂಡ್ ಮಾಡುವುದಲ್ಲ. ಅದು ಅತೃಪ್ಪ ಮನಸ್ಸಿನ ಭಾವ. ಪ್ರೀತಿ ಪರಿಶುದ್ಧವಾಗಿದ್ದರೆ ಕೊಟ್ಟದ್ದೆಲ್ಲ ಅಮೃತವೇ. ಅತೃಪ್ತ ಆತ್ಮಗಳಿಗೆ ವಜ್ರದ ನೆಕ್ಲೆಸ್ ಕೊಟ್ಟರೂ ಪ್ಲಾಟಿನಂ ಬೇಕಿತ್ತು ಎನ್ನುತ್ತಾರೆ. ಅಂತವರನ್ನು ಹೊರತುಪಡಿಸಿ ಸಾಮಾನ್ಯರು ಹೆಚ್ಚಾಗಿರುವ ಭಾರತದಂತಹ ದೇಶದ ಹೆಚ್ಚಿನ ಶ್ರೀ ಸಾಮಾನ್ಯ ಬದುಕಿನ ಬಗ್ಗೆ ನಮ್ಮ ಮಾತು.
ಶಾಪಿಂಗ್ ಎಂದರೆ ಬರೀ ವಜ್ರ, ಪ್ಲಾಟಿನಂ, ಕಂಪನಿ ಡ್ರೆಸ್, ಷೂ, ಬ್ಯಾಗ್ ಗಳು, ಗೃಹ ಬಳಕೆಯ ವಸ್ತುಗಳು ಬರೀ ಮಾಲ್ ಗಳಲ್ಲಿಯೆ ಕೊಳ್ಳುವ ವರ್ಗ ಒಂದೆಡೆ ನಗರಗಳಲ್ಲಿ ಇದ್ದರೆ ಹಳ್ಳಿ, ಪಟ್ಟಣಗಳ ಜನ ಜಾತ್ರೆ, ಕೋಲ, ನೇಮ, ಪೂಜೆ, ಕುಟುಂಬದ, ಬಂಧುಗಳ ಸ್ನೇಹಿತರ ಮದುವೆ, ಸೀಮಂತ, ನಾಮಕರಣ ಶಾಸ್ತ್ರಗಳಲ್ಲಿ ಕೂಡಾ ಅಷ್ಟೇ ಸಂತಸ ಪಡೆಯುತ್ತಾರೆ. ಮಧ್ಯಮ ಹಾಗೂ ಬಡತನ ರೇಖೆಗಿಂತ ಕೆಳಗಿನ ಜನರ ಆನಂದ ಹಣ ಖರ್ಚು ಮಾಡುವ ಕಡೆಗಿಲ್ಲ ಬದಲಾಗಿ ಎಲ್ಲರೂ ಒಟ್ಟು ಸೇರಿ ಅನಂದಿಸುವುದರಲ್ಲಿ ಇದೆ. ಸಿರಿವಂತ ವರ್ಗದ ಜನ ವಾರದ ಕೊನೆಯನ್ನು ತಮ್ಮ ಕುಟುಂಬದ ಜೊತೆ ತಮ್ಮದೇ ಐಷಾರಾಮಿ ಕಾರುಗಳಲ್ಲಿ ರೆಸಾರ್ಟ್ ಗಳಿಗೆ ತೆರಳಿ ಅಲ್ಲೊಂದು ದಿನ ಖುಷಿಯಾಗಿ ದುಡ್ಡು ಕಳೆದು ಬರುವುದೇ ಒಂದು ಖುಷಿಯಾದರೆ ತಮ್ಮ ಸಂಬಂಧಿಗಳ, ಗೆಳೆಯರ ಮನೆಗೆ ತೆರಳಿ, ಅಲ್ಲಿ ಅಕ್ಕ ಪಕ್ಕದ ಸ್ಥಳಗಳಿಗೆ ಗೆಳೆಯರು ಅಥವಾ ಸಂಬಂಧಿಕರ ದೊಡ್ಡ ಗುಂಪು ತೆರಳಿ ಆಡಿ ಕುಣಿದು ಕುಪ್ಪಳಿಸಿ, ಒಂದೊಂದು ಐಸ್ ಕ್ರೀಮ್ ತಿಂದು ಮತ್ತೊಂದಿಷ್ಟು ಹಂಚಿ ತಿಂದು ಬದುಕಿನ ಸವಿ ಉಣ್ಣುವ ಸಂತೋಷ ಮತ್ತೊಂದೆಡೆ. ಬದುಕು ಅಲ್ಲಿ ಬರುವ ಸುಖ ಸಂತೋಷ, ಕಷ್ಟ ದುಃಖ ಎಲ್ಲರಿಗೂ ಇದ್ದುದೇ ಆದರೂ ಅವರವರ ಮಾನಸಿಕ ಆಲೋಚನೆಯ ಸ್ಥಿತಿ ಹಾಗೂ ಅನುಭವದ ಮೇಲೆ ಬದುಕಿನ ಲೆಕ್ಕಾಚಾರ ನಿಂತಿದೆ ಅಲ್ಲವೇ? ಎಲ್ಲದಕ್ಕೂ ಮೂಲ ಮಾನಸಿಕ ತೃಪ್ತಿ ಹಾಗೂ ಅನುಭವಿಸಿದ ಪ್ರೀತಿ. ತೃಪ್ತಿ ಸಿಗುವುದು ಪ್ರೀತಿ ಮತ್ತು ಬೇಕಾದ್ದು ಸಿಕ್ಕಿದಾಗ. ಸಾಮಾಜಿಕ ಹಾಗೂ ಮಾನಸಿಕ ಪ್ರೀತಿ ಸಿಕ್ಕಿದವನೆ ಶ್ರೀಮಂತ. ಅತೃಪ್ತನೇ ಬಡವ ಅಲ್ಲವೇ?
ಯಾವತ್ತೋ ಒಂದು ದಿನ ಜನುಮ ದಿನವೋ, ರಾಖಿ ಹಬ್ಬದ ದಿನವೋ, ಮದುವೆ ವಾರ್ಷಿಕೋತ್ಸವದ ದಿನವೋ, ಕೆಲಸ ಸಿಕ್ಕಿದ ದಿನವೋ ಯಾವುದಾದರೂ ಸರಿ. ಒಂದು ದಿನ ಎಲ್ಲರನ್ನೂ ಕರೆದು ಸಿಂಪಲ್ ಆಗಿ ಆಚರಿಸೋಣ. ಅದು ಪೂಜೆ ಆದರೂ ಸರಿ. ಅಥವಾ ಬೇರೆಯವರ ಈ ರೀತಿಯ ಸಣ್ಣ ಆಚರಣೆಗಳಿಗೆ ನಾವೂ ಜೊತೆ ಆಗೋಣ. ಆ ಮೂಲಕ ಅವರ ಖುಷಿ ಹೆಚ್ಚಿಸೋಣ. ಪರರ ಸಂತಸಕ್ಕೆ ನಾವು ಕಾರಣರಾದರೆ ಅದಕ್ಕಿಂತ ಸಂತೋಷ ಬೇರೆ ಇದೆಯೇ? ಅಲ್ಲವೇ?
ಏನೇ ಇರಲಿ, ಇಲ್ಲವೆಂದು ನಾವು ಹೇಳಿಕೊಳ್ಳಲಿ, ದೇವರು ಒಂದಷ್ಟು ಕಿತ್ತುಕೊಂಡು ಮತ್ತೊಂದಿಷ್ಟು ಎಲ್ಲರ ಬದುಕಿನಲ್ಲೂ ಕೊಟ್ಟಿರುತ್ತಾನೆ. ಕಣ್ಣಿಲ್ಲದವನಿಗೆ ಉತ್ತಮ ಹಾಡುವ ಕಲೆ, ಕಿವಿ ಕೇಳದ ಮನುಷ್ಯ ಉತ್ತಮ ಚಿತ್ರ ಕಲಾವಿದ, ಕುಳ್ಳ ಉತ್ತಮ ಹಾಸ್ಯಗಾರ, ನಟ ಹೀಗೆ.. ಈ ಪ್ರಪಂಚದಲ್ಲಿ ಯಾರೂ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮರೂ ಅಲ್ಲ, ಯಾರು ಏನೂ ಗೊತ್ತಿಲ್ಲದವರು ಕೂಡಾ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಲೆ ಸಿದ್ದಿಸಿರುತ್ತದೆ. ಅದು ಪರರ ಕಣ್ಣು ಕುಕ್ಕುವ ಹಾಗೆ ಇರುತ್ತದೆ. ಪ್ರತಿ ಪೋಷಕರು ಅಥವಾ ಅವರವರೇ ಅವರಿಗೆ ಸಿದ್ಧಿಸಿರುವ ಕಲೆ ಯಾವುದು ಎಂದು ಅರಿತುಕೊಂಡು ಅದಕ್ಕೆ ನೀರು ಗೊಬ್ಬರ ಹಾಕಿ ಬೆಳೆಸಿಕೊಂಡು ಹೋದಲ್ಲಿ ಪ್ರತಿಯೊಬ್ಬರೂ ಬದುಕಿನಲ್ಲಿ ಸಾಧಕರಾಗಲು ಸಾಧ್ಯ.
ಪ್ರತಿ ಸಾಧಕನ ಜೀವನ ಕಷ್ಟಗಳ ಇಟ್ಟಿಗೆಯಿಂದಲೆ ಕಟ್ಟಲಾಗಿದೆ. ಎಲ್ಲರಿಗೂ ಬದುಕಿನ ಉನ್ನತ ಸ್ಥಾನಕ್ಕೆ ಏರಲು ಲಿಫ್ಟ್ ಗಳು ಸಿಗುವುದಿಲ್ಲ. ಒಂದೊಂದೇ ಮೆಟ್ಟಿಲು ತಾನೇ ಕಟ್ಟಿಕೊಂಡು ಏರಬೇಕಾಗುತ್ತದೆ. ಯಾರೋ ಹಿರಿಯರು ಮೆಟ್ಟಲು ಕಟ್ಟಿ ಇಟ್ಟಿದ್ದರೆ ಚಾನ್ಸ್! ಅದು ಎಲ್ಲೋ ಒಂದೆರಡು ಶೇಕಡಾ ಜನರ ಸ್ವತ್ತು! ಉಳಿದವರೆಲ್ಲಾ ಕಷ್ಟ ಸಹಿಷ್ಣುಗಳೇ.. , ತಾನು ಬಂದ ದಾರಿಯ ಬಗ್ಗೆ ತಿಳಿದು, ತಾನು ಸಾಧಿಸಿದ ಸಾಧನೆ, ಈಗ ತಮ್ಮ ಸ್ಥಿತಿಯ ಬಗ್ಗೆ ಹೆಮ್ಮೆ ಪಡುವವರು ಹೆಚ್ಚು. ಕಾರಣ ಅವರ ಕಷ್ಟದ ಫಲ ಅದು. ತಮ್ಮ ಸಾಧನೆ ಶೂನ್ಯ ಅನ್ನಿಸಿದವರು ಮತ್ತೂ ಕಷ್ಟ ಪಡುತ್ತಲೇ ಇರುತ್ತಾರೆ. ಅದೂ ಕೂಡಾ ಮನಸ್ಸಿನ ಹಸಿವು. ಇಂಗುವ ವರೆಗೂ ನಿಲ್ಲದು ಬದುಕಿನ ತಡಕಾಟ.
ಒಟ್ಟಿನಲ್ಲಿ ಬಾಳಲ್ಲಿ ಬರುವ ಸಣ್ಣ ಹಣತೆಯ ದೀಪವೂ ಬೆಳಕು ಕೊಡುವ ಹಾಗೆ, ಯಾವುದೇ ಪ್ರಖರ ಬೆಳಕಿದ್ದರೂ ಕ್ಯಾಂಡಲ್ ಲೈಟ್ ಡಿನ್ನರ್ ಕೂಡಾ ಖುಷಿ ಕೊಡುವ ಹಾಗೆ ಸಣ್ಣ ಸಣ್ಣ ಘಟನೆ, ಚಿಕ್ಕ ಪುಟ್ಟ ಸಂತೋಷದ ಕ್ಷಣಗಳು ಬದುಕಲ್ಲಿ ಸದಾ ನಮ್ಮನ್ನು ಮುಂದಡಿ ಇಡಲು ಅನುವು ಮಾಡಿಕೊಳ್ಳುವ ಶಕ್ತಿ ನೀಡುವ ಟಾನಿಕ್ ಗಳಂತೆ ಅಲ್ಲವೇ? ನೀವೇನಂತೀರಿ?
———————————
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.