ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ಪ್ರೀತಿಯೆಂಬ ಚುಂಬಕ
“ಒಲವೆ ಜೀವನ ಸಾಕ್ಷಾತ್ಕಾರ” “ಪ್ರೀತಿ ಎಂಬುದು ಬದುಕಿನ ಅತ್ಯಮೂಲ್ಯ ಉಡುಗೊರೆ” ನಿಜ! ಇವೆಲ್ಲ ಕೇಳಲಿಕ್ಕೆ ಚೆಂದ . ನೀತಿ ನಿಯಮಗಳ ಚೌಕಟ್ಟಿನೊಳಗಿದ್ದು ಸುಖಾಂತವಾದರೆ ಅಂದ. ಆದರೆ ಅವೇ ಸ್ತ್ರೀ ಶೋಷಣೆಯ ಅಸ್ತ್ರವಾದರೆ? ಮುಸುಕಿನೊಳಗಿನ ಕೆಂಡವಾದರೆ ಯಾರನ್ನು ದೂರಬೇಕು ?
ಮನ ಮನಗಳು ಒಂದಾಗಿ ವಿವಾಹದ ಬೆಸುಗೆಯಲ್ಲಿ ಸೇರಿ ಬಾಳು ನಡೆಸುವುದಾದರೆ ಪ್ರೇಮ ಬದುಕಿನ ಮುನ್ನುಡಿ ಎನ್ನಬಹುದು. ಆದರೆ ಅದೇ ಹದಿ ಹರಯದಲ್ಲಿ ಪ್ರೀತಿಗೆ ಬಿದ್ದು ಓದು ಪೂರೈಸದೆ ಜೀವನದಲ್ಲಿ ನೆಲೆಗೊಳ್ಳದೆ ಇದ್ದಾಗ ಆ ಪ್ರೀತಿಗೆ ಮನ್ನಣೆಯಿಲ್ಲ .ಚಲನಚಿತ್ರಗಳಪ್ರಭಾವವೋ, ಅತಿಯಾದ ಅಂತರ್ಜಾಲ ಬಳಕೆಯ ಪರಿಣಾಮವೋ ತಿಳಿಯದು. ಬಹಳ ಚಿಕ್ಕ ವಯಸ್ಸಿನಲ್ಲೇ ಈಗಿನ ಮಕ್ಕಳು ಪ್ರೀತಿ ಪ್ರೇಮ ಜತೆಗೆ ಕಾಮದ ಕೂಪಕ್ಕೂ ಬೀಳತೊಡಗಿದ್ದಾರೆ . ಈ ವಯಸ್ಸಿನ ಪ್ರೀತಿ ನೈಜ ಪ್ರೀತಿ ಆಗಿರುವುದಿಲ್ಲ ಬರಿ ಮೋಹ. ಪ್ರೀತಿಸುತ್ತಿದ್ದೇನೆ ಎಂಬ ಭ್ರಮೆ! ಆದರೆ ಈಗಿರುವ ಸಮಾಜ ಅಷ್ಟೊಂದು ಮುಗ್ಧವೂ ಅಲ್ಲ, ಅಷ್ಟೊಂದು ಪ್ರಾಮಾಣಿಕವೂ ಅಲ್ಲ. ಪ್ರತಿಯೊಂದನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಇಲ್ಲಿ ಕೆಲವೊಮ್ಮೆ ಪ್ರೀತಿ ಪ್ರೇಮಕ್ಕಿಂತ ಬೇರೆಲ್ಲಾ ಲೆಕ್ಕಾಚಾರಗಳೇ ಕೆಲಸ ಮಾಡುತ್ತಿರುತ್ತದೆ . ಮತಾಂತರದಂತಹ ಧಾರ್ಮಿಕ ಹುನ್ನಾರಗಳು ನಡೆಯುತ್ತಿರುತ್ತವೆ . ಇಲ್ಲ ಒಂದು ಜಾಲಕ್ಕೆ ಸಿಕ್ಕಿಸಿ ಬ್ಲ್ಯಾಕ್ಮೇಲ್ ಮಾಡುವ ಉದ್ದೇಶಗಳು ಇರುತ್ತವೆ . ಮನೆಯವರ ಇಚ್ಛೆಗೆ ವಿರುದ್ಧವಾಗಿ ಅಥವಾ ತಿಳಿಯದೆಲೆಮನೆ ಬಿಟ್ಟು ಓಡಿ ಹೋಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ . ಕೈಯಲ್ಲಿ ಹಣವಿರುವತನಕ ಸರಿ; ನಂತರ ಏನೇನಾಗುತ್ತದೆ ಊಹಿಸಲೂ ಆಗದ ಪರಿಣಾಮಗಳು! ಒಂದೊಂದು ಉದಾಹರಣೆಗಳನ್ನು ನೋಡುವಾಗಲೂ ಹೆದರಿಕೆಯಾಗುತ್ತದೆ . ಹೆಣ್ಣು ಮಕ್ಕಳು ಮಾಡುವ ಒಂದೇ ತಪ್ಪು ಪ್ರೀತಿ ಮಾಡಿ ಪ್ರೀತಿಸಿದವರನ್ನು ಕುರುಡಾಗಿ ನಂಬುವುದು . ಅದೊಂದೇ ತಪ್ಪಿಗಾಗಿ ಬಾಳೆಲ್ಲಾ ನರಳುವ ಅಥವಾ ಬಾಳನ್ನೇ ಕೊನೆಗಾಣಿಸಿಕೊಳ್ಳುವ ಸ್ಥಿತಿಗೆ ಬರಬೇಕಾಗುತ್ತದೆ .
ಮಕ್ಕಳಿಗೆ ಪ್ರತಿಯೊಂದನ್ನೂ ತಂದೆತಾಯಿಯರೊಂದಿಗೆ ಹಂಚಿಕೊಳ್ಳುವಂತಹ ವಾತಾವರಣ ಮನೆಯಲ್ಲಿ ಇರಬೇಕು . ಹಾಗಾದಾಗ ತೀರಾ ಮನೆಬಿಟ್ಟು ಓಡಿ ಹೋಗುವಂತಹ ಪರಿಸ್ಥಿತಿ ಉದ್ಭವವಾಗುವುದಿಲ್ಲ. ನಿಮ್ಮ ಯಾವುದೇ ಹೆಜ್ಜೆಗಳಿರಲಿ ಅದರ ಸಾಧಕ ಬಾಧಕಗಳನ್ನುಕುಳಿತು ಚರ್ಚಿಸೋಣ ಎನ್ನುವಂತಹ ಒತ್ತಾಸೆ ಧೈರ್ಯ ಹೆತ್ತವರು ಕೊಟ್ಟರೆ ಖಂಡಿತಾ ಈ ಸಮಸ್ಯೆಗೆ ಪರಿಹಾರವಿದೆ . ತೀರ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಪ್ರೀತಿಗೆ ಬಿದ್ದ ವಿಷಯ ತಿಳಿದರೂ ಹಾರಾಡಿ ಕೂಗಾಡಿ ಅವರನ್ನು ದೂರ ಮಾಡುವ ಪ್ರಯತ್ನ ಮಾಡದೆ “ಇದಕ್ಕೆಲ್ಲಾ ನೀವಿನ್ನೂ ಚಿಕ್ಕವರು ನಿಮ್ಮ ಪ್ರೀತಿ ನಿಜವಾದದ್ದೇ ಆದರೆ ನಿಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಿ. ನಾವೇ ಆಗ ನಿಮ್ಮನ್ನು ಒಂದು ಮಾಡುತ್ತೇವೆ” ಎಂಬ ಮಾತುಗಳನ್ನಾಡಿ ಓದಿನ ಕಡೆಗೆ ಅವರು ಗಮನ ಕೇಂದ್ರೀಕರಿಸುವಂತೆ ಮಾಡಬಹುದು . ಆ ನಂತರವೂ ಅವರಲ್ಲಿ ಅದೇ ಪ್ರೀತಿಯ ಭಾವನೆ ಇದ್ದಲ್ಲಿ, ಇಬ್ಬರೂ ಜೀವನದಲ್ಲಿ ನೆಲೆಗೊಂಡರೆ ಮದುವೆ ಮಾಡಲು ಸಮಸ್ಯೆ ಏನೂ ಇರುವುದಿಲ್ಲ . ಆದರೆ ಜೀವನದ ಪ್ರಶ್ನೆಯನ್ನು ತಾವೇ ತೆ ನಿರ್ಧಾರ ಮಾಡುವ ಅನುಭವ ವಯಸ್ಸು ಅವರಿಗಿಲ್ಲ ಪಾಲಕರು ಅವರ ವಿರೋಧಿಗಳಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಬೇಕು . ಬೇರೆ ಕೆಟ್ಟ ಭಾವನೆಗಳಿಲ್ಲದ ನಿಜವಾದ ಪ್ರೀತಿಯಾದರೆ ಅದು ನಿಲ್ಲುತ್ತದೆ; ಇಲ್ಲದಿದ್ದರೆ ಮಧ್ಯದಲ್ಲೇ ಮುರಿದು ಹೋಗುತ್ತದೆ ಎಂಬುದು ಅವರಿಗೆ ತಿಳಿಯಬೇಕು . ಏನೇ ಆಗಲಿ ಮನೆಯ ಸುರಕ್ಷಿತ ವಲಯ ಬಿಟ್ಟು ಹೋದರೆ ಏನೇನೆಲ್ಲ ಪರಿಸ್ಥಿತಿಗಳು ಎದುರಾಗುತ್ತವೆ ಎಂಬುದರ ಅರಿವು ಹೆಣ್ಣುಮಕ್ಕಳಿಗೆ ಹೇಗಾದರೂ ಮೂಡಿಸಬೇಕು.ಆಗ ಪ್ರೀತಿಯೆಂಬ ದೀಪಕ್ಕೆ
ಎರಗಿ ನಾಶವಾಗುವ ಪತಂಗವಾಗುವುದಿಲ್ಲ ಹೆಣ್ಣುಮಕ್ಕಳ ಬದುಕು .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು