ಕಾವ್ಯ ಸಂಗಾತಿ
ಶಕುಂತಲಾ.ನಾ. ದಾಳೇರ
ನಿನ್ನ ನೆಲದಲಿ ನೀನೇ ಈಗ
ಹಸಿವ ಹೂವುಹಣೆಯಲಿ
ಕೆಂಪುಮಸಿಯ ಬಾವುಟ ಉಕ್ಕುತ್ತಿದೆ
ನೆತ್ತರುಂಡ ನೆಲಕೆ ಹಾಲ್ಗೆನ್ನೆಯ ನಾಚಿಕೆ ಈಗೀಗ
ಬೆಳೆದ ಬಳ್ಳಿಯಲ್ಲಿಯೇ ವಿಷದ ಹರಿವು ಹರಿಯುತ್ತಿದೆ
ಹೇಸದೆ ಹೆಂಗಳೆಯರ ಮೇಲೆ ಇಂಗುಗಣ್ಣು ಇಟ್ಟಿದೆ
ಸೂತ್ರಧಾರಿ ಪಾತ್ರಧಾರಿಗೆ ಒಳಪಟ್ಟ ಹೆಣ್ಣೊಂದು ಲೀಲೆಯ ಪಾತ್ರ
ಮಂತ್ರಕ್ಕೆ ದಕ್ಕದಿದ್ದರೆ
ಅತ್ಯಾಚಾರಿಗಳಿಗೆ ಹರಿದ ಸೆರಗಿನ ತುತ್ತಾಗಿದೆ
ಇಲ್ಲ ಸುಟ್ಟು ಬಿಸಾಡುವ ಉಸಿರ ವಸ್ತುವಾಗಿದೆ
ಹೆಣ್ಣು ಮಾಯೆ ಕೆತ್ತಿದ ಪುತ್ಥಳಿ ಎಂದವರ ನೆಲವಿದು
ಕಾವಿಯೊಳಗೆ ಅಡಗಿ ಕುಳಿತ ಗಂಡುಕಾಮಿ ಹಣ್ಣು ತಿನ್ನುವಾಗ
ಹುಟ್ಟಿಸಿದ ಒಡೆಯ ಮದವೇರಿ ಮೈ ಒಡೆಯನಾಗುತ್ತಿರುವಾಗ
ಕಾದಹಂಚು ರೊಟ್ಟಿ ಕೆಡಿಸುತ್ತಿರುವಾಗ
ಚೀರಿ ನೆಲಕ್ಕುರುಳುತ್ತಿರುವುದು ಯಾವ ಯುಗದ ಹೆಣ್ಣು
ಹೆಣ್ಣು ನಾಕವೆಂದರು
ಧರೆಯ ಕಣ್ಣೆಂದರು
ಅಷ್ಟೇ ಏಕೆ ನೆಲದ ನಕ್ಷತ್ರ ವೆಂದರು
ಹಾಗೆ
ಅನ್ನುತ್ತಲೇ ನರಕದಲ್ಲೂ ಮಂಚದ ಮಣಿಹಾಕಿದರು
ಎಚ್ಚರ ಭಾರತೀ ಎಚ್ಚರ
ನಿನ್ನ ನೆಲದಲ್ಲಿ ನೀನೇ ಈಗ …
ಉದ್ಘಾಟನೆಗೆ ಕತ್ತರಿಸುವ ರಿಬ್ಬನ್ನು
ನೀನೇ ಈಗ ಜಗದ ಜಾಗದ ಮಲ್ಟಿ ಸ್ಪೆಷಾಲಿಟಿ…..
ಹಾರ ಹಾಕಿ ಹಾದರಕ್ಕೆ ಕರೆಯುವ
ನೀನು ಕಾಮಿನಿ ಎಂದು ಉಬ್ಬಿಸಿ ಕಾಂಚಾಣದ ದಾಸೆಯಾಗಿಸಿ ಬೆತ್ತಲಾಗಿಸುತ್ತ ಬೆಲ್ಲಸವಿದವರು….
ಉಸಿರುಂಡ ಊರಗಂಡರಿಗೆ
ನನ್ನ ಹೆಣ್ಣುಗಳು ಅನಾಥದ ಬೀದಿ ಹೆಣವಾದಾಗ
ಕಣವಿಯಲ್ಲಿನ ಬಣವಿ ಸುಟ್ಟಂತೆ
ಅಗಲ ಮುಗಿಲು ಹರಿದಂತೆ
ಬಂಜರುಗಾಳಿ ಬೀಸಿದಂತೆ
ಕಾಯುತ್ತಿರು ……
ಬೇರೊಂದು ಬಳ್ಳಿಯ ಹೂವು
ಚಿವುಟಿ ಹಾಕುವುದಕ್ಕೂ
ಕಾದ ಕಬ್ಬಿಣ ನಿನಗೂ ಹಿಂತುರುಗಲಿದೆ….
ನಾರ್ಯಸ್ತು ಪೂಜ್ಜೆಸ್ಸು ತೇಜಸ್ಸಿಗೆ.. ಅಂದಿಗೂ ಇಂದಿಗೂ
ಕಾಲ ಕೈಮುಗಿಯಲಿದೆ ಒಂದು ದಿನ
ತೇಲಲಿದೆ ಹಣತೆ ಅಂಬರದಲ್ಲಿ ತೈಲವಿಲ್ಲದೆ
ಜ್ವಾಲೆಯಾಗಿ ಬಾಳಲಿದೆ
ಅಕ್ಕನ ಆಲಯಕ್ಕೆ ಬಯಲಾಗಲಿದೆ…..
ಶಕುಂತಲಾ.ನಾ. ದಾಳೇರ