ಮಾಲಾ ಚೆಲುವನಹಳ್ಳಿ ಕವಿತೆ-ಅಮ್ಮನ ಸೆರಗು

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಅಮ್ಮನ ಸೆರಗು

ಕಂದನ ಕಣ್ಣೇರ ನೋವಿಂದ ಒರೆಸುತಲಿ
ತನ್ನ ನಿಟ್ಟುಸಿರ ಕಾಣದಂತೆ ಬಚ್ಚಿಡುವ
ಕಾರ್ಯ ತತ್ಪರತೆಗೆ ನಡುವಲ್ಲಿ ಸಿಕ್ಕಿಸುತಲಿ
ಅಮೂಲ್ಯ ಹೆಣ್ತನವ ಬಚ್ಚಿಟ್ಟು ಕಾಪಾಡುವ

ಮಾನಾಪಮಾನಗಳ ಸೈರಿಸಿ ಸಹಿಸುವ
ಸೆರಗಿನ ಅವಿನಾಭಾವವೇ ಅಪರಿಮಿತ
ಹಸು ಕಂದಮ್ಮಗಳ ಆಪ್ಯಾಯಮಾನ
ಹಸಿಬಿಸಿ ಕನಸುಗಳದರೊಳಗೆ ತಲ್ಲೀನ

ಮೈತುಂಬಾ ಹೊದ್ದಿರಲು ಅದೇನು ಗೌರವವು
ಇಂದದಕೆಲ್ಲ ಉಪೇಕ್ಷೆ ಗೌರಮ್ಮನೆಂಬರು
ಸೋಕು ನಿವಾರಿಸಲಮ್ಮ ಬಳಸುವ ಸೆರಗಲಿ
ಕೋಟಿ ನೋವುಗಳಿಹುದರಿಯದ ಅಧಮರು

ಸೆರಗು ಹಾಸುವಳೆ0ದು ಜರಿವರು ಮೂಢರು
ಒರೆಹಚ್ಚಿ ನೋಡರು ಅವಳಂತರಂಗವ
ಬೆರಗಾಗಿ ನೋಡುವರು ಕಾಮಾಂಧರು
ಸಂಧರ್ಭಕ್ಕನುಗುಣವಾಗಿ ಬಳಸಿಕೊಳ್ಳುವರು.

ಬದುಕಿನ ಭಾರ ಹೊರಲು ಸಿಂಬೆಯಾಯ್ತು
ಶೃಂಗಾರ ಲಹರಿಗೆ ಸೇತುವೆಯೇ ತಾನಾಗಿ
ಹೆಣ್ಣಿನ ಅಂದ ಚಂದ, ವಯ್ಯಾರಕೆ ಮೆರುಗಾಯ್ತು
ಸೌಂದರ್ಯ ಸವಿಯಲು ಮರುಳಾದ ಯೋಗಿ

ಶ್ರಮದಿ ಸೋತ ಹನಿಗಳು ಬೆವರಂತೆ
ಜೀವ, ಜೀವನವನೇ ತೇಯ್ದರೂ ಇಲ್ಲ ನಿಶ್ಚಿoತೆ
ಸೋತರೂ ಕೈ ಸೋಲದ ಸೆರಗಿನ ಕಥೆ
ಮಣ್ಣಿಗಿಡುವವರೆಗೂ ಭ್ರಮೆಯ ಅಂತೆ ಕoತೆ.


Leave a Reply

Back To Top