ಸಾಹಿತ್ಯ, ಯಾರದ್ದೇ ಸ್ವತ್ತಲ್ಲ ! ಹಾ.ಮ.ಸತೀಶ

ಲೇಖನ

ಹಾ.ಮ.ಸತೀಶ

ಸಾಹಿತ್ಯ, ಯಾರದ್ದೇ ಸ್ವತ್ತಲ್ಲ !

ಯಾರದೇ ಪ್ರತಿಷ್ಠೆಯನ್ನು
ನಿರ್ಧರಿಸಲು ಅವರ್ಯಾರು ಇವರ್ಯಾರು ಇನ್ನೊಬ್ಬರ್ಯಾರು ?
ಯಾರೇ ಯಾವುದೇ ಪ್ರತಿಷ್ಠೆಯನ್ನು ಪಡೆಯಲು ಪಟ್ಟ ಪಾಡು ತಿಳಿದೂ ಅವರ ಬಗ್ಗೆ ಅಪಪ್ರಚಾರ ಮಾಡುವುದು ಸ್ವಾರ್ಥ ಅಲ್ಲವೆ ?
ಬರಿದೆ ಪ್ರಚಾರ ,ತನ್ನ ಪ್ರಚಾರದ
ತೆವಲಿಗೆ ಇನ್ನೊಬ್ಬರ ಪ್ರತಿಷ್ಠೆಯ ಬಲಿಕೊಡದಿರಿ, ತನ್ನ ಹೆಸರಿನ ಉಳಿಸಿಕೊಳ್ಳುವ ಜಾಣತನಕ್ಕೆ
ಇನ್ನೊಬ್ಬರ ಒಳ್ಳೆಯತನವನ್ನು ಬಲಿಕೊಡದಿರಿ.

ಇದನ್ನು ಯಾಕೆ ಇಲ್ಲಿ ಹೇಳಿದಿರೆಂದು ನೀವು ಕೇಳಿದರೆ ? ಅದಕ್ಕೆ ಉತ್ತರ ನಾನೇ ಅಥವಾ ನೀವೇ ಆಗಿರಬಹುದು. ಇಂದಿಗೂ ಅದರಿಂದ ಹೊರಬರಲಾರದ, ಬರಲಾಗದ ಸ್ಥಿತಿಯಲ್ಲಿರುವೆವು ಮೊದಲು ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಇದ್ದ ಈ ಅಂಟುಜಾಡ್ಯ ಇಂದು ಎಲ್ಲಾ ಕ್ಷೇತ್ರಕ್ಕೂ ಹಬ್ಬಿ ಕೊನೆಗೆ ಸ್ವಸ್ಥ ಸಮಾಜ ರೂಪಿಸಲೆಂದೇ ಜನ್ಮತಳೆದ ಸಾಹಿತ್ಯ ಕ್ಷೇತ್ರಕ್ಕೂ ಬಂದಿರುವುದು ದುರಂತವೇ ಸರಿ!

ಸಾಹಿತ್ಯ ಬರೆದೇ ಬದುಕನ್ನು ಕಟ್ಟಿಕೊಳ್ಳುವೆ ಎನ್ನುವುದು ಪೂರ್ಣ ಸತ್ಯವಲ್ಲ. ಸುಮಾರು ೪೦ ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ನಾನು ಬರವಣಿಗೆಯನ್ನು ಒಲಿಸಿಕೊಂಡಂತೆ ಬರವಣಿಗೆಯಿಂದ ಹಣವನ್ನು ಒಲಿಸಿಕೊಳ್ಳಲಾಗಲಿಲ್ಲ ? ಆದರೆ ಜ್ಞಾನವನ್ನು ಸಂಪಾದನೆ ಮಾಡಿದೆ .

ನಾವು ಪಡೆದ ಜ್ಞಾನ ಇನ್ನೊಬ್ಬರಿಗೆ ದಾರಿದೀಪವಾಗಲಿ ಅದರ ಹೊರತಾಗಿ ಕೆಂಡವಾಗದಿರಲಿ. ಸಾಹಿತ್ಯದ ದಾರಿಯಲಿ ಇನ್ನೂ ಅಂಬೆಗಾಲಿಡುವವರ ಮತ್ತು ಬೆಳೆದವರ ಪಾದ ಸುಡದಂತಿರಲಿ.ತಾನೊಬ್ಬನೇ ಕಲಿತಿರುವುದು ಉಳಿದವರೆಲ್ಲ ಅರೆಬರೆ ಕಲಿತಿರುವುದೆಂದು ಹೇಳಿ ತಿರುಗುವುದು ಯಾವೊಬ್ಬ ಅರಿತ ತಿಳಿದ ಅಹಂಗಳ ಮೂಟೆಯ ಹೊತ್ತ ಬರಹಗಾರರಿಗೆ ಹೇಳಿದ ವಿಚಾರವಲ್ಲ. ನೋವು ತನಗೊಬ್ಬನಿಗೇ ಇರುವುದು ನನಗೊಬ್ಬನಿಗೇ ಪುಟ್ಟ ಹೃದಯ ಇರುವುದು ಬೇರೆಯವರ ಹೃದಯವೆಲ್ಲ ಕಲ್ಲಿನಿಂದ ಮಾಡಲ್ಪಟ್ಟಿದ್ದುಯೆಂದು ತಿಳಿದವರಿಂದ ಈ ಸಾಹಿತ್ಯ ಕ್ಷೇತ್ರ ಬೆಳೆಯುತ್ತದೆ ಎನ್ನುವುದು ಕನಸಿನ ಮಾತು.

“ಸಾಹಿತ್ಯದಲ್ಲಿ ರಾಜಕೀಯ” ಸುಮಾರು ೩೦ ವರ್ಷದ ಹಿಂದೆ ಬರೆದ ನನ್ನ ಲೇಖನ ಅದರೊಳಗಿನ ವಿಚಾರ ಸ್ವಲ್ಪವೂ ಕಡಿಮೆಯಾಗದಂತೆ ಮತ್ತಷ್ಟು ಹೆಚ್ಚಿರುವುದು ಹೆಚ್ಚಿನ ಬರಹಗಳಲ್ಲಿ ಕಾಣಬರುತ್ತಿರುವುದು ದುರಂತವೇ ಸರಿ ! ಇದ್ದದ್ದನ್ನು ಇದ್ದಂತೇ ಹೇಳಿದರೆ ಕೆಂಡದಂತಹ ಕೋಪ
ತಿದ್ದಿ ಕೊಳ್ಳುವ ವಿಚಾರ ಇಂದಿನ ಹೆಚ್ಚಿನ ಯುವ ಬರಹಗಾರರಲ್ಲಿ ಕಾಣದಿರುವುದರಿಂದ ಬರಹದಲ್ಲಿ ಅನೇಕ ಗೊಂದಲಗಳು ಸೃಷ್ಟಿ ಆಗಿವೆ ,ಆಗುತ್ತಲಿವೆ…. ಹಾಗೆಯೇ ನಾವೇ ತಿಳಿದ ಪಂಡಿತರೆನ್ನುವವರಿಂದಲೂ ಅಪಾರ ಪ್ರಮಾಣದ ಗೊಂದಲಗಳು ಸೃಷ್ಟಿ ಆಗುತ್ತಲಿವೆ… ಇದು ಮುಂದಿನ ಕನ್ನಡ ಸಾಹಿತ್ಯದ ಒಟ್ಟಾರೆ ಬೆಳವಣಿಗೆಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ ?!!

ಸಾಹಿತ್ಯದಲ್ಲಿ ಹಿರಿಯರಿಗೆ ಗೌರವ ಕೊಡುವುದರ ಬಗ್ಗೆಯೇ ಚರ್ಚೆ ಆಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂತಹ ಪರಿಸ್ಥಿತಿಯನ್ನು ಈಗಿನ ಕನ್ನಡ ಪ್ರೇಮವನ್ನ ಹರಡಿಸುವ ಬಳಗಗಳಲ್ಲಿ ಅವುಗಳಲ್ಲಿಯ ಬರಹಗಳಲ್ಲಿ ಕಂಡುಬರುತ್ತಿರುವುದು ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಸರಿಯಾದದ್ದಲ್ಲ.ಇದನ್ನು ನಾವು ನೀವೆಲ್ಲ ಅರಿತು ಸರಿಪಡಿಸಿಕೊಳ್ಳದಿದ್ದರೆ ? ಓದುಗರ ದೃಷ್ಟಿಯಲ್ಲಿ ಬರಹಗಾರರು ಕೇವಲವಾಗಿ ನಿಷ್ಕೃಷ್ಟರಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗದಿರಲೆಂದು ನಮ್ಮ ಆಶಯವಾಗಿದೆ.


ಲೇಖನ ಸಂಗಾತಿ

Leave a Reply

Back To Top